ಲೆಕ್ಕ ತಪ್ಪುವಾಟ !!

ಹಾಗೊಮ್ಮೆ ಹೀಗೊಮ್ಮೆ
ಆಡಿದ ಸುಳ್ಳಲ್ಲೇ
ಹೀಗೊಂದು ವೈಚಿತ್ರ್ಯ
ನಡೆದು ಹೋಗುತ್ತವೆ
ಅರ್ಥವಾಗದ ನುಡಿಗೆ
ಕಿವಿಯೊಡ್ಡುವ ತವಕ
ಮುಂದೆ ಮುಂದೆ ಎಲ್ಲ 
ಅರ್ಥವಾಗುತ್ತವೆ !!

ಬಿಗಿದಪ್ಪಿಕೊಂಡಾಗ 
ಒಂದೆರಡು ಗುಟ್ಟುಗಳು
ತಾನಾಗೇ ಹರಬಂದು
ಬೆತ್ತಲಾಗುತ್ತವೆ
ಬೆಳಕ ಸಾಲ ಪಡೆದ
ಮಿಂಚು ಹುಳುವಿನ ದಂಡು
ವಿಧಿಯಿಲ್ಲದೆ ಮತ್ತೆ
ಕತ್ತಲಾಗುತ್ತವೆ!!

ಮರದ ತುದಿ ರೆಂಬೆಯಲಿ
ಎಲೆ ಮರೆಯ ಹಣ್ಣುಗಳು
ಯಾರ ಕೈ ಸೇರದೆಯೂ
ಎಂಜಲಾಗುತ್ತವೆ
ತನ್ನಿಷ್ಟಕೆ ಹೊರಳಿ
ಪಳಗಿದ ನಾಲಿಗೆಗೆ
ಸಲುಗೆ ಕೊಟ್ಟ ತುಟಿಯೇ
ಪಂಜರಾಗುತ್ತವೆ!!

ಮಿಂಚು ವೇಘದ ಬಯಕೆ
ಕೊಂಚ ಕೊಂಚವೆ ಕುಂಟಿ
ಒಂಟಿ ಕಾಲಲಿ ನಿಂತು
ನಿಚ್ಚಲಾಗುತ್ತವೆ
ಬುಗ್ಗೆ ಒಡೆದ ಎದೆಯ
ಮೇಲೆ ಚಾಚಿದ ಹಾಳೆ
ಚೆಲ್ಲಾಡಿದಕ್ಷರಕೆ 
ಬಚ್ಚಲಾಗುತ್ತವೆ!!

ಎಲ್ಲಿಂದಲೆಲ್ಲಿಗೋ
ಪಯಣ ಬೆಳೆಸಿದ ಮಾತು
ಸಧ್ಯ ಮೌನದ ಸ್ಥಿತಿಗೆ
ಮಾರುಹೋಗುತ್ತವೆ
ಎರಡಿದ್ದವು ಅಂದು
ಒಂದಾಗಲು ಮುಂದೆ 
ಗಣಿತಕ್ಕೂ ಅಚ್ಚರಿ
ಮೂರಾಗುತ್ತವೆ!!

               -- ರತ್ನಸುತ 

Comments

  1. ಗುಟ್ಟು ರಟ್ಟಾಗುವ ಮತ್ತು ಗಣಿತ ಲೆಕ್ಕ ತಪ್ಪುವ ಉದ್ದೇಶವೇ ನಮ್ಮ ಬಾಳುಮೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩