ಮೊದಮೊದಲು

ಅಂಗಿಯ ತೋಳಿಗೆ ನೀರನು ಚಿಮುಕಿಸಿ
ಇಸ್ತ್ರಿಯ ತಳ ಬಿಸಿ ದಾಹವ ತೀರಿಸಿ
ಜೋಡಿ ಶರಾಯಿಗೆ ತುಸು ಬಿಸಿ ಮುಟ್ಟಿಸಿ
ಚೈನ ಸೆಂಟನು ಪೂಸಿದೆನು

ಎಡಗೈ ಕ್ರಾಪಿಗೆ ಬಲಗೈ ಅಣಿಕೆಗೆ
ಕನ್ನಡಿ ಮುಂದಿನ ಸಪ್ಪೆ ಮೂತಿಗೆ
ಲೇಪಿಸಿ ಕ್ರೀಮು, ಪೌಡರ್ ತಾಕಿಸಿ
ಮೀಸೆಯ ಅಂಚನು ತಿರುವಿದೆನು

ಪಾಲಿಶ್ ಬಳಿದ ಕರಿ ಬೂಟು
ನಾರದ ಹೊಚ್ಚ ಹೊಸ ಸಾಕ್ಸು
ಕರಾರುವಾಕ್ಕು ಗಡಿಯಾರ
ಕೊಂಡೆ ಮೊನ್ನೆ ಬುಧವಾರ 

ಒತ್ತಾಯಕೆ ಕುಂಕುಮವಿಟ್ಟು
ಹೊಸಲಿನಾಚೆ ಅಳಿಸಿ ಬಿಟ್ಟು
ಉಸಿರಿನ ಜೊತೆ ಹೊಟ್ಟೆ ಎಳೆದು
ಬಿಗಿದ ಬೆಳ್ಟಿಗೆ ಉಪಕಾರ

ನಡುಕದಲೇ ತಯಾರಿಯ ಮಾಡಿ
ಏದುಸಿರ ಅದಾಗಿಯೇ ಬಿಟ್ಟು
ಲಬ್ ಡಬ್ ಎದ್ದ ಎದೆ ಬಡಿತವನು
ಗಣನೆಗೆ ಕೊಳ್ಳದೆ ಬೆವರಿದೆನು
..... 

ಎರಡು ಬಗೆಯ ಸಿಹಿ ತಿನಿಸು,
ಬಾಂಬೆ ಚೌ ಚೌ, ಮಸಾಲೆ ಗೋಡಂಬಿ
ಲೋಟ ನೀರು ಎದುರಿತ್ತು
ತಿನ್ನುವ ಆಸೆ ಹೆಚ್ಚಿತ್ತು!!

ನಾಲ್ಕು ಮಾತು ಒಂದು ಬಾಯಿ
ರಾಡಿಯಾಗಿಸಿಕೊಳ್ಳದೆ ಕೈಯ್ಯಿ
ತಗ್ಗಿದ ತಲೆಯ ಮೆಲ್ಲನೆ ಎತ್ತಿ
ನೋವಿದ್ದಂತೆ ಮೆಲ್ಲಗೆ ಸುತ್ತಿ;
ಕಾಪಿ ಲೋಟವ ತಂದಳು ಹುಡುಗಿ
ಆಗಲೇ ನಾನು ಹೋದೆನು ನಡುಗಿ!!

ಹುಡುಗಿಯ ಅಪ್ಪನ ಉದ್ಧಟ ಪ್ರಶ್ನೆ
ಉತ್ತರ ನೀಡಲು ಮತ್ತೊಂದು;
ಅವಳಮ್ಮ ಬಲು ಮೆದುವೆಂಬಂತೆ
ಕರ್ಟನ್ ಹಿಂದೆ ಉಳ್ಕೊಂಡು!!

ಆಕೆಗೇನು ಕುಂದು ಕೊರತೆ?
ತೀಡಿದ ಗೊಂಬೆಯೇ ಇರಬೇಕು!!
ನನ್ನ ಒಪ್ಪಿಗೆ ಆಗಲೇ ನೀಡಿದೆ
ಆಕೆ ಒಪ್ಪಿದರೆ ಸಾಕು!!
.....

ಮಾರನೆಯ ದಿನ ಸುದ್ದಿ ಮುಟ್ಟಿತು
ಹುಡುಗಿ ಒಪ್ಪಿರಲಿಲ್ಲೆಂದು;
ಅಮ್ಮಳ ಸಿಟ್ಟು ಅಡುಗೆ ಮನೆಯಲಿ
ಅಪ್ಪನಿಗನಿಸದೆ ಏನೊಂದೂ!!

ವಾರದ ಕನಸನು ಕಬಳಿಸಿಕೊಂಡಳು
ಅವಳೇ ಆವರಿಸಿಕೊಂಡು
ಮರುವಿನ ನೆರವನು ಪಡೆದೆನು ಅಲ್ಲಿ
ಅವಸರ ಬೆನ್ನ ಸವರಿಕೊಂಡು!!

                                   --ರತ್ನಸುತ 

Comments

  1. ನನ್ನ ಒಬ್ಬ ಅಣ್ಣ ಬರೋಬರಿ ಐವತ್ತು ಹುಡುಗಿ ನೋಡೋ ಶಾಸ್ರ ಮಾಡಿದ್ದ! ಅವೆಲ್ಲ ನೆನಪಾದವು, ತಮ್ಮ ಈ ಕವನ ಓದಿ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩