ಮುಗಿಲೆಡೆ ಮುನಿದು!!

ಭಯದಲ್ಲಿ ಮುಂದಾಗಿ 
ಒಲವಿದೆ ಅಂದಾಗ
ಬೆಂಬಲಕೆ ಬರದೆ 
ಉಳಿವಾಗ ಮುಗಿಲೇ
ನಾ ಹೇಗೆ ನಂಬಲಿ
ನಿನ್ನ ಹುಸಿ ಮಾತನು?
ನಂಬಿಕೆ ಉಳಿಸಿಕೊಂಡಿಲ್ಲ
ನೀ ಮೊದಲೇ!!

ನೀ ಬರುವೆಯೆಂದು
ಹೂವಿಗಿದೆ ಕೌತುಕ
ಅದ ಹಿಡಿದು ಕಾತರದಿ
ನಿಂತವನಿಗಲ್ಲ;
ಕೊಡೆ ಮರೆತು ಬಂದೆ ನಾ
ನಿಜವೇ ಇರಬಹುದು
ಆದರೂ ತೋಯಿಸುವ ಹಕ್ಕು
ನಿನಗಿಲ್ಲ 

ಗುಡುಗಿ ನನ್ನೆದೆಯಲ್ಲಿ
ತಲ್ಲಣವ ಬಡಿಸಿದೆ
ಎಲ್ಲಿ, ಒಮ್ಮೆ ಮೌನದಲಿ
ನನ್ನ ಗೆಲ್ಲು!!
ಯಾವುದೋ "ಸತ್ಕಾರ್ಯ
ನಿನ್ನ ಆಗಮನದಲಿ"
ಹೀಗನ್ನುವವರ ಮಾತುಗಳೆಲ್ಲ
ಸುಳ್ಳು!!

ಉಪ್ಪರಿಗೆ ಕಣ್ಣೀರ 
ಪಡಸಾಲೆ ಚಿತ್ತಾರ
ಅಳಿಸಿ ಹಾಕುವ ನೀನು
ಉಂಡಾಡಿ ಗುಂಡ
ಪೊಳ್ಳು ಭಕ್ತಿಗೆ ಕರಗಿ
ದೇವರನಿಸಿಕೊಳುವೆ
ಸಮಯ ಸಾಧಕ ನೀನು
ಮಹಾ ಪ್ರಚಂಡ!!

ಇದ್ದದ್ದ ಕಸಿದು
ಇನ್ನೆಲ್ಲೋ ಸುರಿವೆ
ದಲ್ಲಾಳಿ ನೀನಂದರೆ 
ಮುನಿಯ ಬೇಡ!!
ಈಗ ನಿನ್ನಾಟಗಳು
ನನ್ನೆದುರು ನಡೆಯೊಲ್ಲ
ನೀ ಸುಳ್ಳು ಅನ್ನುತಿದೆ
ಅಂಗೈಯ್ಯಿ ಕೂಡ!!

ಬಿಡು ಮುಗಿಲೇ ಆಸೆಯ
ನನ್ನ ಮೆಚ್ಚಿಸಲಾರೆ,
ಎಂದೋ ಸೀಳಿರುವೆ
ನಂಬಿಕೆಯ ಕತ್ತ
ನೀ ಸುರಿದುಕೊಂಡದ್ದು
ನಿನ್ನಿಷ್ಟಕೆ ಅಲ್ಲಿ 
ನನ್ನಿಷ್ಟಗಳು ಮುಳುಗಿದವು
ನಿನಗೆ ಗೊತ್ತಾ?

                    -- ರತ್ನಸುತ

Comments

  1. ’ಇದ್ದದ್ದ ಕಸಿದು
    ಇನ್ನೆಲ್ಲೋ ಸುರಿವೆ’
    ಎನ್ನುವ ಕೋಪ ನಮಗೂ ಇದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩