Tuesday 4 March 2014

ಮೌನ ಪಯಣ !!

ರಕ್ತ ಸಿಕ್ತ ಹಡಗು, 
ಕೆಂಪು ಸಾಗರ, 
ಸೂರ್ಯಾಸ್ತಮದ ಸಮಯ, 
ಆಯಾಸದ ಕಂಗಳು,
ಸಿಗದ ಬಂದರು,  
ಇಲ್ಲದ ಲಂಗರು, 
ಒಂಟಿ ಪಯಣಿಗ, 
ಮೌನ ಸಂಗಡಿಗ!!
 
ಮರು ಜೀವ ಪಡೆದ 
ಎಂದೋ ಆದ ಗಾಯ 
ಆ ನೋವು 
ಕಹಿ ನೆನಪು. 
ಮೈ ಮರೆಯುವಂತಿಲ್ಲ 
ದಿಕ್ಕು ತಪ್ಪಬಹುದು;
ಯಾವ ದಿಕ್ಕು?!!
ತೀರದ ಅನ್ವೇಷಣೆ!!
 
ಗಡಿಯಾರದ
ಸುಳ್ಳು ಬರವಸೆ, 
ಇನ್ನೂ ಸದ್ದು ಮಾಡಿದೆ 
ಟಿಕ್-ಟಿಕ್-ಟಿಕ್ 
ಅದ ನಂಬುವ ಗೀಳು
ಮುಗಿಯುವಂತಿಲ್ಲ; 
ಸಮಯ ಸರಿಯಾಗಿದೆ 
ಹಾಳಾಗಲು!!
 
ಹಸಿದ ತಿಮಿಂಗಿಲಗಳ 
ನಿಲ್ಲದ ಅಳಲು;
ಮುರಿಯಬೇಕು ಹಡಗು 
ದಾಟಿಸಬೇಕು ಹಸಿವ,
ಆಗಲೇ ವಿಮುಕ್ತಿ
ಕಡಲ ಮೊರೆತಕ್ಕೆ;
ನಾ ಎಲ್ಲರಿಗೂ ಬೇಕಾದವ 
ನಿರ್ಜೀವವಾಗಿ!!
 
ಮುಟ್ಟಿ ನೋಡಿಕೊಂಡೆ 
ನಾಡಿ ಮಿಡಿಯುತ್ತಲೇ ಇತ್ತು
ತುಸು ಅವಸರದಲ್ಲಿ;
ಹಣೆಯ ಕಾವಿಗೆ
ಬೆವರೂ ಹರಿದಿತ್ತು 
ತಕ್ಕ ಮಟ್ಟಿಗೆ 
ಸಮತೋಲನದ ಕುರುಹು?!!
ಪ್ರಕೃತಿ ನಕ್ಕಿತು ಉಸಿರುಗಟ್ಟಿ!!
 
ಎಲ್ಲವನ್ನೂ ಒಂದಾಗಿಸಿತು ಕತ್ತಲು 
ಬಾನು, ಭೂಮಿ,
ನಾನು, ಕಡಲು,
ಹಡಗು, ತಿಮಿಂಗಿಲ,
ಗಡಿಯಾರ, ಮುಳ್ಳು;
ಟಿಕ್-ಟಿಕ್-ಟಿಕ್
ಸಮಯ ಸರಿಯುತ್ತಲೇ ಇದೆ 
ನಾಳೆಯ ಘೋರತೆಗೆ ಸಜ್ಜಾಗಿ!!
 
                        -- ರತ್ನಸುತ

1 comment:

  1. ಪ್ರಳಯಕೂ ಮುನ್ನ ದಿವ್ಯ ಮೌನವಂತೆ! ಹಾಗಿದೆ ಈ ಕವನದ ಹೂರಣ. ಭವಿಷ್ಯದ ಅಗೋಚರತೆಯು ಸಾಕಲ್ಲ ಮನೋಧೈರ್ಯವನ್ನು ಸಾವು ಬಡಿಯಲು!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...