ಸ್ವಪ್ನಾವಲೋಕನ !!

ನೀ ನನ್ನ 
ನೂರು ಮಕ್ಕಳ ತಾಯಿ,
ನಾ
ಸಹಸ್ರಾರು ಭ್ರೂಣಕ್ಕೆ ಕಾರಣ ಕರ್ತ!!
 
ಕಣ್ಣಲ್ಲೇ ಕಚ್ಚಿ
ಮಾಡಿದ ಗಾಯಕ್ಕೆ 
ನೀ ಹಚ್ಚಿದ ಮದ್ದು
ಮತ್ತೊಂದು ಮಿಲನಕ್ಕೆ ಸಾಕ್ಷಿ 
ಮತ್ತೊಂದು ಸ್ಖಲನ, 
ಮತ್ತೊಂದು ಸುದೀರ್ಘ ನಿರ್ಲಿಪ್ತತೆ!!
 
"ತ್ರಾಣಕ್ಕೆ ತುದಿಗಾಣಿಸದ 
ಪ್ರಣಯ ತೊಟ್ಟಿಲಲ್ಲಿ 
ತೂಗಾಡುತ್ತಲೇ 
ತೀರಿಸಿಕೊಂಡ ಋಣ 
ಹೊಸ ಭಾರವ ಹೊರಿಸಿದೆ" 
ಎಂದು ಸನಿಹವಾದಾಗೆಲ್ಲ 
ಒಂದು ಮುಗುಳು 
ಆಸೆ ಮುಗಿಲು!!
 
ಒಂದೊಂದು ಬಾರಿ 
ಭಾರಿ ಕಡಲ ದಾಟಿ 
ಮೈಯ್ಯಲ್ಲಾ ಲವಣಗೊಂಡಾಗ 
ಆಚೆ ದಡದಿ ಕಿತ್ತೆಸೆದ 
ಬೇಡದ ವಸ್ತ್ರಗಳೇ ಬೇಕಾದವು 
ಒಬ್ಬರ ಮೈಯ್ಯನ್ನೊಬ್ಬರು 
ತಡವಲು,
ಶುದ್ಧರಾಗಲು. 
 
ಎಲ್ಲಿಯ ಶುದ್ಧತೆ?;
ಹಾಲ ಬಟ್ಟಲ ಒಳಗೆ 
ಜೇನು ಸಕ್ಕರೆ ಬೆರೆತು 
ಹಾಲು ಜೇನಾಗಿ 
ಜೇನು ಹಾಲಾಗಿ 
ಶುದ್ಧಗೊಂಡದ್ದು ಬಟ್ಟಲು,
ಸವಿದ ನಾಲಿಗೆ,
ಕಿಟಕಿ ಮರೆಯ ಚಂದ್ರ!!
 
ಮತ್ತೊಮ್ಮೆ ನನ್ನ ಹೊತ್ತಿದ್ದೆ ನೀ 
ಗಾಂಧಾರಿಗೆ ಸಮಳಾಗಿ;
ಕಾಮ ನಿಚ್ಚಲವಲ್ಲ, 
ನವ ಮಾಸಂಗಳು ಕಾಯಲಾರದೆ 
ಸವತಿಯರ ಸಂಗಡ 
ಸರಸ-ಸಲ್ಲಾಪ;
ಕಾಮಾಂಧನಿಗೆ ಮೈಯ್ಯೆಲ್ಲಾ ಕಣ್ಣು 
ಕತ್ತಲ ಕೂಪದಲ್ಲಿ!!

ಕನಸಲ್ಲಿ ಕಾಮಿಸಲ್ಪಟ್ಟ 
ಓಹ್ ರಮಣಿಯರೇ!!
ಕ್ಷಮೆಗೆ ಅರ್ಹನಲ್ಲ ನಾನು; 
ನಿಮ್ಮಿಚ್ಛೆಗೆ ಶಿಕ್ಷೆಯನ್ನ 
ನಿಮ್ನಿಮ್ಮ ಕನಸುಗಳಲ್ಲಿ 
ನೀವೇ ವಿಧಿಸಿಕೊಳ್ಳಿ, ನನ್ನಿಂದಾಗದು 
ನನ್ನ ಕನಸುಗಳು ನಿಯಂತ್ರಿಸಲಾಗದಷ್ಟು 
ಎಲ್ಲೆ ಮೀರಿವೆ!!
 
                                   -- ರತ್ನಸುತ 

Comments

  1. ಕನಸುಗಳಲಿ ಕಾಮಿಸಿದ ನೂರಾರು ಭಾಮಿನಿಯರುೂ ಕ್ಷಮಿಸಿದರಂತೆ.
    ಬಹಳ ಅಪರೂಪದ 'openup' ಪ್ರಕಾರದ ಕವಿತೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩