ಹೂಗಳ ಕಣ್ಗಳ ದಳಗಳ ತುದಿಗೆ
ಏಕೆ ಜಾರದೆ ಉಳಿದೆಯೇ ಇಬ್ಬನಿ!!?
ನವಿರು ಒಡಲ ಜರಿದೆ ನೀರಾಗುತ
ಹೊಸ್ತಿಲಲುಳಿದೆಯಾ ಚಿಂತಿಸಿ ನೀ!!?
ತಡೆಯಿತು ಪಾಪ ಹಿಡಿಯುತ ದಳವು
ಬಿಟ್ಟ ಗುರುತುಗಳ ಅಳಿಸುತಲಿ
ಜಾಡಿಸಿ ಒದ್ದೆ ಕೋಮಲ ಮಡಿಲ,
ಅಳಿಸದ ಗುರುತನ್ನಿಡಿಯುತಲಿ
ಹುಟ್ಟಿಸಿ ತಪ್ಪಿಗೆ, ಬಿಕ್ಕಲು ಕೊಡದೆ
ಹಿಡಿದಿಟ್ಟಿತು ದುಃಖದ ಹೊರೆಯ
ಒರಟಿಗೆ ನೀನು ಸಿಕ್ಕಿದರೆ
ಶಪಿಸುತಲಿ ತಡೆಗಟ್ಟಿದ ಪೊರೆಯ
ವಾಲಾಡುವೆ ತುಸು ಮೆಲ್ಲನೆ ಗಾಳಿಗೆ
ಹಿಂಗುವ ಅವಸರವೇ ನಿನಗೆ?
ಮಿಟುಕಿಸದೆ ಕಣ್ತೆರೆದು ನೋಡಿವೆ
ದಳಗಳು ನಿನ್ನನು ಕೊನೆಗಳಿಗೆ
ಜಾರಿದವೆಷ್ಟೋ ಮಣ್ಣಿನ ಒಡಲಿಗೆ
ಹಾರಿದವೆಷ್ಟೋ ಪಕ್ಕದ ಮಡಿಲಿಗೆ
ನೀನಾದರು ಮಿನುಗಿ, ಸಿಂಚನವಾಗುವೆಯಾ,
ಅಂಜನವಾಗುತ ಹೊತ್ತವುಗಳಿಗೆ?
ಮತ್ತೇ ಹೊಸದಾಯಿತು ಮುಂಜಾನೆ
ಮತ್ತೇ ಬಸಿರಾದವು ತರು ಲತೆಗಳು
ಮತ್ತೆ ಸಂದಿಸುವ "ಋಣವಿದ್ದರೆ"
ಮಂಜಿನ ಮುಸುಕಿನ ಬೆಳಕಿನೊಳು........
--ರತ್ನಸುತ