Thursday, 31 October 2013

ತೊಟ್ಟು ಹನಿಗಳು !!

ರಕ್ಕಸ
*******
ಸೆರಗಿಗೆ ಕೈ ಹಾಕಿದವನು 
ತೇಪೆಯ ಲೆಕ್ಕಿಸದೆ ಹೋದ
ಕಾಮದ ಹಸಿವಿಗೆ ಕಿವುಡಾದವ 
ಕೇಳಿಯಾನೆ "ಹರಿ"ವ ನಾದ ??

ಜೀವನ 
********
ನಾಳೆಯ ಬೆಳಕಿದೆ ಮುಂದೆ 
ಇಂದಿಗೆ ನಮ್ಮ ಪಯಣ 
ಹಿಂದೆ ನೆನಪಿನ (ನೆರಳಿನ) ಕವನ 

ರಾಜಕಾರಣ 
***********
"ಕೈ ಕೆಸರಾದರೆ 
ಬಾಯ್ಮೊಸರು" 
ಕಮಲವ ಕಿತ್ತ 
ಕೈ ಪಾಳಯದವರೇ 
ಇಂದಿನ ಶಾಸಕರು 

ಹಸಿವು 
*******
ನಕ್ಕಾಗ ಮುತ್ತು 
ಉದುರಿದಂತೆ 
ಅತ್ತಾಗ ತುತ್ತು 
ಸಿಕ್ಕಿದ್ದರೆ??

ಗುಂಡೇಟು 
**********
ಗಾಂಧಿ 
ದೇವದಾಸ್ 
ಇಬ್ಬರೂ ಸತ್ತದ್ದು 
ಗುಂಡೇಟಿಗೇ !!

ಗಾಂಧಿ ಜೇಬಲ್ಲಿ ನೋಟಾದ 
ದೇವದಾಸ್ ಪ್ರೀತೀಲಿ ಗ್ರೇಟಾದ 

                        -- ರತ್ನಸುತ 

Wednesday, 30 October 2013

ರಾಜ, ರಾಣಿ, ಅರಮನೆ !!

ರಾಜಿಯಾಗುವುದು ಬೇಡ
"ಅರಮನೆ" ಅಂದರೆ 
ಅರಮನೆಯನ್ನೇ ಕಟ್ಟೋಣ 
ಮನಸಿನಿಟ್ಟಿಗೆ ಜೋಡಿಸಿ 
ಒಲುಮೆಯ ಸಿಮೆಂಟು ಸುರಿದು 
ಬೆವರ್ಹರಿಸಿ ದೃಢವಾಗಿಸಿ  
ಕನಸುಗಳ ಬಣ್ಣ ಹಚ್ಚಿ 
ಆಸೆಗಳ ಬಾಗಿಲನ್ನಿರಿಸಿ 

ಕಟ್ಟೋಣ ಒಂದನು 
ನಮ್ಮೊಲವಿನ ವ್ಯಾಪ್ತಿಗೂ ಮೀರಿ 
ಉಂಡ ಕಹಿಗಳ ಆಳಕೆ ಕೊರೆದು 
ಅಡಿಪಾಯವಾಗಿಸೋಣ 
ಉಂಡಷ್ಟೂ ಅನುಕೂಲ ನಮಗೆ 
ನಮ್ಮರಮನೆ ಶಾಶ್ವತಗೊಳಲು 
ರಾರಾಜಿಸುವುದು ಬೇಡ ಬೆಳಕಲ್ಲಿ 
ನಂಬಿಕೆಯ ಹಚ್ಚಿಟ್ಟರೆ, ನಿತ್ಯ ಹೊನಲು 

ನನ್ನೆದೆ ಸಿಂಗಾರಗೊಂಡ ಅಂತಃಪುರ 
ಅಲ್ಲಿ ವಿಹರಿಸಲು, ವಿರಮಿಸಲು ಅನುಮತಿ ಇಲ್ಲ 
ಬೇರಾರಿಗೂ ನಿನ್ನ ಹೊರತು 
ನಿನ್ನ ಸಖಿಯರಿಗೂ ನಿಷೇಧ  
ಇನ್ನು ನಿನ್ನದೋ !!
"ಛೀ ತುಂಟ"ನಲ್ಲ"...." ಅನ್ನದಿರು 
ಮಥಿಸದೇ ಸುಧೆಯೀವ ಸಾಗರ 
ಅಲ್ಲಿ ಪ್ರೇಮ ಪಗಡೆ ಆಟ ನನ್ನದು 

ಹೊರಾಂಗಣ ಸಾರಿಸಿದ ಗಂಧ ಲೇಪ 
ಆಧಾರ ಸ್ತಂಬಗಳು ಬೆಳ್ಳಿ ಸಾಲು 
ಕಿಟಕಿಯ ಕೋಲಿಗೆ ಚಿನ್ನದ ಸ್ಪರ್ಶ 
ಪರದೆಯೋ ಮುಟ್ಟಲು ರೇಷ್ಮೆ ನೂಲು 
ಸಿಂಹಾಸನದ ಮೇಲೆ ಉಕ್ಕು ನೋಟ 
ನೀ ನನ್ನ ಪಕ್ಕದಲಿ ಪಟ್ಟದರಸಿ 
ಸಭೀಕರೆಲ್ಲರೂ ಶೃಂಗಾರ ಕವಿಗಳೇ 
ಬಣ್ಣಿಪರು ನವ್ಯ ಪದಗಳ ಶೋಧಿಸಿ 

ನಮ್ಮ ಸಾಮ್ರಾಜ್ಯದಲಿ ನಮ್ಮದೇ ನೇಮ 
ನಿನಗೆ ನನ್ನದು, ನನಗೆ ನಿನ್ನ ಪ್ರೇಮ 
ಸಂಭೋಗ ಕೇವಲ ಕ್ಷಣಿಕ ಅಭಿವ್ಯಕ್ತಿ 
ಅದಕೂ ಮೀರಿದ ಸುಖಕೆ ಇಲ್ಲ ಕ್ಷಾಮ 
ಮಾತಲ್ಲೇ ಮುಳುಗಿಸಿ ಗಿಂಜಿದೆ ಮುತ್ತಿಟ್ಟು
ಇಂದಿಗೆ ಈ ಗಂಜಿ ಕುಡಿಯೇ ನಂಜಿ 
ಇಂದಿನರಮನೆಯುರುಳಿಸಿ ಕಟ್ಟುವ ನಾಳೆ -
- ಮತ್ತೊಂದನು, ಕಟ್ಟಿ ನೋಡು ಬಾಜಿ !!

                                        -- ರತ್ನಸುತ 

Tuesday, 29 October 2013

ಸರ್ವಾಂತರ್ಯಾಮಿ !!

ಹಸಿವನ್ನ ಬದಿಗೊತ್ತಿ 
ಕಾವಿ ತೊಟ್ಟಾಗ 
ನಮ್ಮೊಳಗಿನ್ಹಸಿವು 
ಬಡವಾಯಿತಲ್ಲ ಪ್ರಭು 
ನೀ ಸೃಷ್ಟಿಸಿದ್ದೇ ತಾನೇ 
ಆಸೆ, ಮೋಹ, ಮತ್ಸರ  
ಒಂದು ದುಃಖಕೆ ಮೂಲ
ಮತ್ತೊಂದು ಬದುಕೇ?

ನೀ ಕೊಟ್ಟ ಸುಳುವ್ಹಿಡಿದು 
ಬ್ರಹ್ಮ ಗುಟ್ಟನು ಅರಿತೆ 
ಇಟ್ಟೆ ನಾಲ್ಕು ತಲೆ 
ಕೊಟ್ಟೆ ಒಳ್ಳೆ ರೂಪ 
ಕಮಲವೇರಿಸಿ ಅವನ 
ಹಣೆಬರಹ ಬರೆದೆ 
ಹಣೆಬರಹವ ಬರೆವ 
ಕೆಲಸವನು ಕೊಟ್ಟು 

ಪರಶಿವನ ಮಸಣವ 
ಮನ್ಮಥನ ಬಾಣವ 
ಒಗ್ಗೂಡಿಸುವ ಕಲೆ 
ನನಗಿತ್ತೆ ಗುರುವೇ 
ಕಾಲ ಕಾಲಕೆ ತಿದ್ದಿ 
ರೂಪಿಸಿದೆ ಹೊಸಬರನು 
ಪಾಪ ಕಾರ್ಯಕೆ ಪ್ರತಿ 
ಪುಣ್ಯ ದೇವರ ಹೆಸರು 

ಏರಿಸಿದೆ ಒಬ್ಬನ ಶಿಲುಬೆಗೆ 
ಮತ್ತೊಬ್ಬನಿರುವಿಕೆಯ 
ಸಾಬೀತು ಪಡಿಸಲು 
ಹುಟ್ಟು ಹಾಕಿದೆ ಪ್ರೊಫೆಟ್ಟನ 
ಮನೆ ಬಿಟ್ಟು ಹೊರ ನಡೆಸಿ 
ಜ್ಞಾನಿಗಳ ಮಾಡಿದೆ 
ಅವರವರ ತತ್ವಾಧರ್ಷಗಳ 
ಹೊಸ ಧರ್ಮಗಳಾಗಿಸಿ 

ಮುಗಿಸಿದೆ, ಬಾಗಿಸಿದೆ 
ಮಂಡಿ ಊರಿಸಿ ನಿಲ್ಲಿಸಿ 
ಏಕ ಮತದ ಬಾಳಿಗೆ 
ಸೌಹಾರ್ದತೆಯ ಪ್ರೀತಿಗೆ 
ಅದೇ ಮುಳುವಾಯಿತೇ 
ತಿದ್ದಬೇಕೆ ಮತ್ತೆ ಈಗ ?
ಎಲ್ಲವನ್ನೂ ಅಳಿಸಿ ಹಾಕಿ 
ಮತ್ತೊಮ್ಮೆ ಗೀಚಿ ಕೂತು

ಅಜ್ಞಾನಿ ನಾನು 
ಕೈ ಹಿಡಿದು ಬರೆಸೈಯ್ಯ  
ಧರ್ಮ ಯಾವೊದೋ 
ಅಧರ್ಮ ಯಾವುದೋ ತಿಳಿಸಿ 
ಬೆತ್ತಲಾಗಿರುವೆ ತಂದೆ 
ಇನ್ಯಾರ ಮಾನ ಕಾಯಲಿ 
ದೀಕ್ಷೆ ನೀಡು ಬಾರ 
ಸಮಾನತೆಯ ಉಡುಪು ತೊಡಿಸಿ!!

                            -- ರತ್ನಸುತ 

ಮಧುರ ಮೊದಲಿನ ಮಾಯೆ !!

ಆಕೆಯನ್ನ ಮಾತನಾಡಿಸಲೇಬೇಕು!! ಎಂಬ
ಕಲ್ಪನೆಯೇ ವಿಶೇಷವಾಗಿತ್ತು 
ಮಾತನಾಡಿಸಿ ಆದ ಪರಿಣಾಮ
ಕಲ್ಪನೆಗೂ ಎತ್ತರ, ಆಳ, ವಿಸ್ತಾರ

ಅದ್ಯಾವುದೋ ದಟ್ಟ ಅಲೆಯೊಂದು
ದಿಢೀರನೆ ಹಾರಿ, ಮೈ ಹೊದ್ದು
ನಿಮಿಷವಾದರೂ ಉಸಿರಾಡಗೊಡದೆ
ಆನಂತರ ಜೀವದಾನ ಕೊಟ್ಟಂತೆ ಭಾಸ

ಕಣ್ಣುಗಳು ಥೇಟು ನಾ ಅನಿಸಿದಂತೆಯೇ
ಈ ತುದಿಯಿಂದಾತುದಿ, ದಿಗಂತಗಳ ವ್ಯಾಪ್ತಿ
ಅಲ್ಲಲ್ಲಿ ವಿಶ್ರಮಿಸಿ ಪಯಣಿಸಬೇಕಾಗಿತ್ತು
ಮುಟ್ಟಲು ಕೊನೆಯನ್ನ ಮೊದಲಿಂದ ಬೆಳೆಸಿ

ಮಂದಹಾಸವ ಬೀರಿ ಜಗ್ಗಿದಳು ತುಟಿಯ
ಕೆನ್ನೆ ಹಾದು ಬರಲು ಮೂಗನ್ನು ಬಣ್ಣಿಸಿ
ಗುಳಿಯೊಳಗೆ ಸಿಲುಕಿಸಿ ಒದ್ದಾಡಿಸಿದಳೆನ್ನ
ಪದಗಳಿಗೆ ಮತ್ತಷ್ಟು ದಣಿವನ್ನು ಉಣಿಸಿ

ಮುಖ ಮುದ್ರೆಯೊಂದು ಕೆತ್ತಿಟ್ಟ ಕಲಾಕೃತಿ
ನಾನೊಬ್ಬ ಮಾಮೂಲಿ ಹೊಗಳು ಬಂಟ
ಕೆಲವನ್ನು ಮಾತ್ರವೇ ಬಣ್ಣಿಸಿದೆ, ಮಿಕ್ಕವ
ಮನದೊಳಗೆ ಬೆಚ್ಚಗೆ ಆಸ್ವಾದಿಸುವ ತುಂಟ

ಅವಸರದ ಅವಲೋಕನದಲಿ ಮೆತ್ತಿತ್ತು
ಅವಳ ಕಣ್ಣಂಚಿನ ಕಾಡಿಗೆಯ ಕಪ್ಪು
ಗುರುತಾಗಿಸಿದೆ ದಿನಚರಿಯ ಆ ದಿನಕೆ
ಪುಟದ ಪಾಲಿಗೂ ಸಿಕ್ಕಿದಂತಾಯ್ತು ಹುರುಪು !!

                                           -- ರತ್ನಸುತ 

Monday, 28 October 2013

ನೋಟೀಸು, ನೋಟೀರ್ಸು !!

ಹಿಡಿದಿಟ್ಟ ಕಂಬನಿ ಪದವಾಗೋ ಮುನ್ನ 
ಮೆಲ್ಲಗೆ ತುಟಿ ಅರಳಿ ಮಾತಾಡಲೆನ್ನ 
ಅಪ್ಪಿ ಸಾಂತ್ವನಕೆ ಮುಂದಾಗದಿರು ಗೆಳತಿ 
ಇದ್ದಂತೆ ಇರಲು ಬಿಡು ಹೀಗೆಯೇ ಚನ್ನ 

ಬಿಗಿದಿಟ್ಟ ಮುಷ್ಟಿಯಲಿ ತಗೆದಿಟ್ಟ ಹೃದಯವಿದೆ 
ಬೆರಳ ಸಂದಿಗಳಿಂದ ರಕ್ತ ಚಿಮ್ಮಿ 
ಇನ್ನೂ ಬಡಿದಾಡುತಿದೆ ನೋವಿನಲ್ಲೇ 
ನೋಡಿ ಬೆಚ್ಚದಿರು ಈ ಕೃತ್ಯವನ್ನ 

ಬೆನ್ನ ಮೇಲೆ ಬಾಸುಂಡೆ ಏಟಿನ ಗುರುತು 
ಕಾಣದಂತೆ ಅಡಗಿಸಿಟ್ಟಿರುವೆ ನಾನು 
ಏನೆಂದು ಕೇಳಿದರೆ, ನನ್ನ ಉತ್ತರ ಮೌನ 
ಎದುರಿಸಲಾರೆ ನಿನ್ನ ಪ್ರಶ್ನೆಗಳ ಬಾಣ 

ಬರುವ ಮುನ್ನವೇ ಮನವ ಗುಡಿಸಿಡುವೆ ಸ್ವಚ್ಛ 
ಎಲ್ಲವೂ ಮೊದಲಿನಂತೆಯೇ ಇರುವ ಹಾಗೆ 
ನೀ ಅಲ್ಲಿ ಲೋಪಗಳ ಹುಡುಕಿ ಕೂರದಿರು 
ಮತ್ತೆ ಹಳೆ ನೆನಪುಗಳ ಬಯಸುವುದು ಪ್ರಾಣ 

ನಿನಗೆ ನಾ ಕೊಟ್ಟ ಆ ಮೊದಲ ಹೂ ಗುಚ್ಛದಲಿ  
ಹಿಡಿ ಭಾಗದಲ್ಲಿ ಮುಳ್ಳುಗಳ ಸೆರೆಯಾಗಿದೆ 
ದಳಗಳೆಲ್ಲವೂ ಉದುರಿ ಹೋದವು ದಿನಗಳೆದು //ಒಲವಂತೆ//
ಮುಳ್ಳಿನ ಅಸ್ತಿತ್ವವದರ ಅಸಲೀತನ 

"ಮರೆತು ಬಿಡು" ಅನ್ನುವುದು ತುಸು ಕಷ್ಟವೇ ಸರಿ 
ಹೇಳುಗರಿಗೂ, ಕೇಳುಗರಿಗೂ, ಓದುಗರಿಗೂ, ನೋಡುಗರಿಗೂ 
ಅದಕಾಗಿಯೇ ದೂರವಾದೆ ನುಡಿಯದೆ ಏನೂ 
ಓಹ್ ಜೀವವೇ ಒಮ್ಮೆ ಕ್ಷಮಿಸಿ ಬಿಡು ನನ್ನ !!

                                                -- ರತ್ನಸುತ 

Thursday, 24 October 2013

ಒಂದ್ಚೂರ್ ಇತ್ಲಾಗ್ಕೇಳಮ್ಮಿ

ಕಾದಿದ್ದೆ ದಾರೀಲಿ
ನಿಂಗೋಸ್ಕ್ರ ಅಂತ
ಗಡಿಯಾರ ಹಿಂದಿತ್ತಾ ?
ತಡ್ವಾಗ್ ಬಂದೆ !!
ಹೂ ಕೊಟ್ಟು ಕಾಲೂರಿ
ನಾ ನಾಚಿದ್ದೆ
ನೀ ಕಾಲು ಬೆರ್ಳಲ್ಲಿ
ಏನೋ ಬರಿತಿದ್ದೆ !!

ಮನ್ಸಲ್ಲಿ ಏನೋ
ಇದ್ದಂಗಿತ್ತು
ಆದ್ರೂ ಓಡೋದೆ
ಏನೂ ಹೇಳ್ದೀರ
ನಂಗೂ ಏನೂ
ತೋಚ್ದೆ ಹೋಯ್ತು
ನನ್ಪಾಡಿಗ್ ಹಿಂದಿರ್ಗ್ದೆ
ಸುಮ್ಕೆ ಕಲ್ದೀರ

ಆವತ್ತು ಏನಾರ
ಮಾತಾಡ್ಬೇಕಿತ್ತು
ಇತ್ಯರ್ಥ ಆಗೋದು
ಎರ್ಡ್ರಲ್ಲೊಂದು
ಏಟಾದ್ರೂ ಕೊಟ್ಟಿದ್ರೆ
ನೆಮ್ದಿ ಇರ್ತಿತ್ತು
ನಾನಂದ್ರೆ ನಿಂಗಿಷ್ಟ
ಇಲ್ಲ ಅನ್ಕೊಂಡು

ಬದ್ಕೇ ಪ್ರಶ್ನೆ
ಆಗ್ಬಿಟೈತಮ್ಮಿ
ಬ್ಯಾಸ್ರ ಉಸ್ರಾಟುಕ್ಕೂ
ಈಗೀಗ
ನೀನೆ ನೋಡೇಳು
ಬಾ ಇತ್ಲಾಗ್ಚೂರು
ವಾಸಿ ಆಯ್ತಿಲ್ಲ
ಯಾವ್ದೀ ದೊಡ್ರೋಗ ?!!

              -- ರತ್ನಸುತ

ಹವಾಮಾನಕೆ ಅವಮಾನ/ ಗುಣಗಾನ

ಬಣ್ಣ ಹಚ್ಚಿದೆ ಬಾನು
ನೂತನ ದಿನದಾಟಕೆ
ಹೊತ್ತೊತ್ತಿಗೊಂದೊಂದು ಪ್ರಕಾರದಲ್ಲಿ

ಇಂದೇಕೋ
ಶೋಕ ನಾಟಕವಿರಬೇಕು
ಜಾರಿಸದೆ ಕಣ್ಣಂಚಿನಲಿ
ಹಿಡಿದಿಟ್ಟಿದೆ ಕಂಬನಿಯ

ಆಸಕ್ತರೋ ನಿರಾಸಕ್ತರೋ
ಒಮ್ಮೆ ತಲೆಯೆತ್ತಿ
ಗಮನಿಸುವರು ಚೂರು

ಅಲ್ಲಿ ಶೋಕ ವಿಪರೀತಗೊಂಡರೆ
ಇಲ್ಲಿಯ ನಾಟಕಕ್ಕೆ ತೆರೆ
"ಅನಾವರಣ/ಅಂತ್ಯ "

ಆದರೊಬ್ಬಳಿದ್ದಾಳೆ,
ರೆಪ್ಪೆ ಅಲುಗಿಸದೆ ನೋಡುತ
ಅವಳೇ ಈ "ಧರೆ"

ನಾಟಕ ಸುಳ್ಳಾದರೆ
ಕೋಪ ಶಮನಕ್ಕೆ
ಉರುಳುವುದೊಂದೆರದು ಪ್ರಾಣ  //ಅವಮಾನ //

ನಿಜವಾದರೆ
ನಿಲ್ಲದ ಗುಣಗಾನ
ಪಾತ್ರಧಾರಿಗಳಿಗೆ ಸನ್ಮಾನ

                   -- ರತ್ನಸುತ

ದ್ಯಾವ್ರು ಬೇಜಾರಾಗ್ಬಾರ್ದು!!!

ದ್ಯಾವ್ರೆಲ್ಲಿ ಕಣ್ಮುಚ್ಚಿ ಕುಂತವ್ನೋ ?
ಗುಡಿಯೊಳ್ಗೆ ಮಡಿಕಟ್ಟಿ ಮಲ್ಗವ್ನೋ ?
ಕೈ ಮುಗ್ದ್ರೆ ಕಣ್ಬಿಟ್ಟು ನೋಡ್ತಾನ ?
ಗಂಟೇನ ಬಾರ್ಸಿದ್ರೆ ಏಳ್ತಾನ ?
ಐನೊರಿಗೊಂದ್ಹತ್ತು, ಹುಂಡಿಗೆ ಇಪ್ಪತ್ತು 
ಕಡ್ಡಿ-ಕರ್ಪೂರ, ಹೂವು, ಚೂರ್ಗಾಯಿ 
ಹಾಕಿದ್ರೆ ಏನಾರ ಖುಸಿ ಪಡ್ತಾನ ? ಇಲ್ಲ 
ನಮ್ಮಂತೋರ್ ಸಿನಿಮಾನ ಬಿಟ್ಟಿ ನೋಡ್ತಾನ ?

ಬಂದೋರು ಹೋದೋರು ಎಷ್ಟೊಂದು ಮಂದಿ 
ಪರ್ಕಿಂಗು ಫುಲ್ಲಾದ್ರೂ ಇನ್ನೂ ವೇಟಿಂಗು 
ಮೈಲಿಗೂ ಉದ್ದದ ಕ್ಯುವ್ವಲ್ಲಿ ನಿಂತು 
ಏನೇನೋ ಚಿತ್ರ-ವಿಚಿತ್ರ  ಡ್ರೀಮಿಂಗು 
ಹೊಸ ಚಪ್ಲಿ ಚಿಂತೆ ಆಚೆ ಬಿಟ್ಟೋರ್ಗೆ 
ಒಡವೆ ಮೇಲ್ಚಿಂತೆ ಹಾಕಿಕೊಂಡೋರ್ಗೆ 
ಜೀವ್ನಕ್ಕೆ ದಾರಿ ಚಪ್ಲಿ ಕಾಯೋನ್ಗೆ 
ಲಕ್ಷ್ಮಿನೇ ಕಂಡ್ಳು ಕತ್ರಿ ಹಾಕೋನ್ಗೆ 

ನಾಲಿಗೆ ತುಪ್ಪಕ್ಕೆ ಚಪ್ಪರಿಸ್ತಿದ್ರೂ 
ದೀಪಕ್ಕೆ ಸುರ್ದು ಕಡ್ಡಿ ಗೀರೌರೆ 
ಎಣ್ಣೆ ಆದ್ರೇನು, ತುಪ್ಪ ಆದ್ರೇನು  
ಉರಿತಾದೆ ಬತ್ತಿ ಬೆಂಕಿ ಹಚ್ಚಿಟ್ರೆ 
ನಗ್ನಗ್ತಾ ಎಲ್ಲೋ ಆಡ್ತಿತ್ತು ಹೂವ 
ಯಾಮಾರ್ಸಿ ತಂದು ಕಟ್ಟಿ ಹಾಕೌರೆ 
ಮುಡಿಯೇರಿ ಕುಂತೈತೆ ಹಿಂಗಂದ್ಕೊಂಡು 
"ಎಡ್ಗಡೆ ಬೀಳ್ಸಪ್ಪ, ಓಹ್ ನನ್ನ ದ್ಯಾವ್ರೆ!!"

ಹೊಗೆ ಎದ್ದು ಗುರ್ತು ಹಿಡಿಯೋದೇ 
ಕಷ್ಟ ಆಗೈತೆ ಈ ಕಲ್ಲು ದ್ಯಾವ್ರ್ಗೆ 
ಒಂದ್ಚೂರು ತಾಳಿ ತಳ್ಳಾಡ್ಬ್ಯಾಡಿ 
ನಿಲ್ಲೋಕೆ ಬಿಡ್ರಪ್ಪ ಗುರ್ತ್ಹಿಡಿಯೋ ವರ್ಗೆ 
ಕುಂಕ್ಮಕ್ಕೂ ಕಾಸು ಕೊಡ್ಬೇಕು ಚಿಟ್ಕೆಗೆ 
ತೀರ್ಥಾವ ಕುಡ್ದು ಕಾಲ್ಕಿತ್ತೆ ಮೇಲ್ಗೆ 
ಅಲ್ಲೊಂದು ಕ್ಯುವ್ವು ಪೊಂಗಲ್ಲು, ಮೊಸ್ರನ್ನ 
ಕಾದಿದ್ಕೂ ಮೋಸಿಲ್ಲ ನನ್ನಂತೋರ್ಗೆ 

ಹಬ್ಬ ಬಂತಂದ್ರೆ ಓವರ್ ಟೈಮು 
ಮಲ್ಗೋಕೂ ಬಿಡ್ರಪ್ಪ ಸ್ವಲ್ಪ 
ಫ್ಯಾಮಿಲಿ ಜೊತೆಯಲ್ಲಿ ವರ್ಲ್ಡ್ ಟೂರು ಹೋಗ್ಬರ್ಲಿ 
ಪರ್ಮಿಷನ್ ಕೊಟ್ನೋಡಿ ಪಾಪ  
ದ್ಯಾವ್ರ್ಗೂ ಇರ್ಬೇಕು ವರ್ಕು ಟೆನ್ಶನ್ನು 
ವೀಕೆಂಡು ರಜೆ ಕೊಟ್ರೆ ವಾಸಿ 
ನನ್ನತಿರೇಕಕ್ಕೆ ಹಿಂಗೆಲ್ಲ ಬರ್ದೆ 
ಬೇಜಾರಾದೋರು ಕ್ಷಮ್ಸಿ 

                                          --ರತ್ನಸುತ 

Tuesday, 22 October 2013

ಸುಳ್ಳು ಸತ್ಯಗಳ ನಡುವೆ!!

ಲೋಕವೇ ಮಂಜು ಮಂಜು 
"ತಡಿಯಿರಿ ಒರೆಸಿಕೊಳ್ಳುವೆ ಕನ್ನಡಕ" 
ಲೋಕ ಇನ್ನೂ ಮಂಜು ಮಂಜು 
"ಮತ್ತೊಮ್ಮೆ ಕಣ್ಣುಜ್ಜಿಕೊಳ್ಳುವೆ ತಾಳಿ" 
ಲೋಕ ನಿಜಕ್ಕೂ ಮಂಜು ಮಂಜು? ಇನ್ನೂ ಸಮ್ಮತಿಯಿಲ್ಲ!! 

ಕಂಡ ನಿಜವ ನಂಬಲಾಗಿಸದ 
ನಮ್ಮೊಳಗಿನ ಅಳುಕು, ಕೊಳಕುಗಳ 
ಪ್ರಶ್ನಿಸದೆ, ಪ್ರಮಾಣಿಸದೆ ನಂಬಿಸುವ 
ನಮ್ಮೊಳಗಿನ ಮೊಂಡುತವೇ ಸತ್ಯ 
ಪುಕ್ಕಲುತನವೂ ಸತ್ಯ, ಮತ್ತಿನ್ನಾವುದು ಸುಳ್ಳು?

ಮುಖವಾಡ ಧರಿಸಿದವ ತಿಳಿವನೇ?
ನಿಜ ಬಣ್ಣದಲಿ ಕಣಕ್ಕಿಳಿದವರ ಆಟ 
ತಾನು ಸುಳ್ಳೆಂಬುದು ಸತ್ಯವಾದರೂ
ಸತ್ಯಶೋಧಕನಂತೆ ಅಲೆದಾಡುವ 
ಸುಳ್ಳಾಗಿ ಉಳಿದು, ಒಪ್ಪದೆ ಪರರ ಸತ್ಯ 

ಕತ್ತಲೇ ಸತ್ಯ, ಹುಸಿ ಬೆಳಕು ಉಡುಪು 
ಬೆತ್ತಲೆ ಜಗತ್ತೇ ಇದಕ್ಕೆಲ್ಲಾ ಸಾಕ್ಷಿ 
ನಾನೆಂಬುದು ನನಗೆ ಸಮಾದಾನದ ಗೆಲುವು 
ಅವರಿವರ ಗೆಲುವು ಟೀಕೆಗೆ ನಾಂದಿ 
ಬೆತ್ತಲಾಗಲು ಬೇಕು ಕತ್ತಲು, ಬೆಳಕು "ನಕಲಿ" 

ನನ್ನೋಳಗಿನನ್ನನ್ನು ಕಲ್ಲೊಳಗೆ ಇರಿಸಿ 
ನಾನು ನಾನಾಗಲ್ಲದೇ ನೋಡುವ ಗಳಿಗೆ 
ಕಲ್ಲ ಮೇಲೆ ನನಗೆ ಎಲ್ಲಿಲ್ಲದ ಕೋಪ 
ಅಸಡ್ಡೆ, ತಿರಸ್ಕಾರ, ಸಿಟ್ಟು, ಮುನಿಸು 
ಓ ನನ್ನತನವೇ ಇದೇ ಸತ್ಯ, ನನ್ನನ್ನು ಕ್ಷಮಿಸು 

ಲೋಕ ಮಂಜುಗಟ್ಟಿಯೇ ಇದೆ 
ಆದರೂ ನಿಷ್ಪ್ರಯೋಜಕ ಪ್ರಯತ್ನ 
ಕನ್ನಡಕದ್ದೂ ಆಯ್ತು, ಕಣ್ಣಿನದ್ದೂ ಆಯ್ತು 
ಇನ್ನು ಮನಸನ್ನು ಸ್ಪಷ್ಟವಾಗಿಸಬೇಕು  
ಸತ್ಯವೇನೆಂದು ತಿಳಿಯಲು, ನಾನು ಸುಳ್ಳೆಂದು ಅರಿಯಲು!!

                                                        --ರತ್ನಸುತ

ನನ್ಹಾಡು-ನನ್ಪಾಡು!!

ಇದ್ದ ಬಂದ ಸಂಬ್ಳಾನ 
ಪೆಟ್ರೋಲ್ ಟ್ಯಾಂಕಿಗ್ ಸುರಿ 
ವೀಕೆಂಡು ಬಂತಂದ್ರೆ 
ಮನೆ ದಾರಿ ಮರಿ 
ಎಣ್ಣೆ, ಹೊಗೆ ಅಂತ ಹೋಗಿ 
ಸೀದಾ ಮೋರೀಗ್ಬಿದ್ದು 
ಬೆಳ್ಗೆದ್ದು ಸ್ನಾನಕ್ಕೆ 
ಸೋಪು, ಶಾಂಪೂ ನೊರೆ 

ಹಾವು ಸಾಯ್ಬಾರ್ದು ಅಂತ 
ಇದ್ದ ದೊಣ್ಣೆ ಮುರ್ದು 
ಸೂಸೈಡು ಮಾಡ್ಕೊಳ್ದೆ 
ಇಟ್ಟೆ ನೋಟು ಬರ್ದು 
ಬೊಜ್ಜು ಬೆಳ್ದು ತೂಕ ಹೆಚ್ತು 
ಇದ್ದ ಕಡೆಗೆ ಕೂತು 
ಹತ್ತಿಲ್ಲ ಇಳ್ದಿಲ್ಲ 
ಜೀವ್ನ ಆಯ್ತು ತೂತು 

ಕಲ್ಲೇಟು ತಿಂದ ನಾಯಿ 
ಪಕ್ಕ ಬೀದಿಗೋದ್ರೂ 
ಆ ಬೀದಿ ನಾಯ್ಗಳು 
ಸುಮ್ನೆ ಬಿಡ್ತಾವ?
ಕುಂಟ್ತಾನೆ ಬಿದ್ದಿರ್ಬೇಕ್- 
-ಅಂತ ಬರ್ದಿದ್ರೆ 
ಯಾರು ಬದ್ಲಾಯ್ಸೋರು 
ಹಣೆ ಬರ್ಹಾವ?

ಒಂದಿಷ್ಟು ಖುಷಿ ಕೊಟ್ಟು 
ಜೀವ್ನಾನೇ ಕಿತ್ಕೊತು 
ಹಾಳಾದ್ ಚಿಲ್ರೆ ಕಾಸ್- 
-ಮೂರ್ದಿನಕ್ಕಷ್ಟೇ 
ಕುಟ್ಟೋದು ಬಿಟ್ರೆ 
ಈ ಲೋಕದೊಳ್ಗಡೆ 
ನಮ್ಗೇಂತ ಇರೋದು 
ಸುಡುಗಾಡೊಂದಷ್ಟೇ !!

ಏನ್ ಹೇಳಿ ಏನ್ ಪಡ್ದೋ 
ದಕ್ಕಿದ್ರಲ್ಲೊಂದಿಷ್ಟು  
ಪಾಪಾನೋ ಪುಣ್ಯಾನೋ 
ನಮ್ಗಂತ ಇರ್ಲಿ 
ಸಾಕೂಂತ ಡಾಟಿಟ್ಟು 
ಮುಂದ್ವರ್ಸೋ ಆಟಕ್ಕೆ 
ಗೆಲ್ವನ್ನೋದಿರ್ದಿದ್ರೂ 
ಆಡ್ಸೋರು ಬರ್ಲಿ 

ಫ್ರಿಜ್ಜಲ್ಲಿ ಗೊಜ್ಜೈತೆ 
ರಾತ್ರಿದು ತಂಗ್ಲೈತೆ 
ಹೊಟ್ಟೆ ತುಂಬ್ಸೋಕೆ 
ಈ ಹೊತ್ತಿಗಾದ್ರೆ 
ನೆನ್ನೆವು ನೆನ್ಪುಗ್ಳು  
ಹಿಂಗ್ಯಾಕೆ ಆಡ್ತಾವೋ 
ಒಂದೊಂದೂ ಸದ್ಮಾಡೋ 
ಖಾಲಿ ಪಾತ್ರೆ !!

ಕ್ಯಾಮೆ ಇಲ್ದೋನು  
ಮೂಗೊಳ್ಗೆ ಬಿಟ್ಕೊಂಡ 
ಬಿರ್ಳನ್ನ ತೀಡಾಡಿ 
ಎನೇನೋ ಪಡ್ದು 
ನನ್ಮೇಲಾಣೆ ಹಾಕ್ಬೇಕ್ರಪ್ಪ- 
-ಎಲ್ರೂ 
ನನ್ಪಾಡು ಗೊತ್ತಾಗಿ 
ಯಾರೂ ನಗ್ಬಾರ್ದು !!!

               --ರತ್ನಸುತ 

Monday, 21 October 2013

ನನ್ನವುಗಳ ನಾನೇ ಮರೆತು !!

ನನ್ನವುಗಳ ನಾನೇ ಮರೆತು 
ನನ್ನದಲ್ಲದ ದಿಕ್ಕಿನಲ್ಲಿರಿಸಿ 
ಅಂತೆಯೇ ದಿಢೀರ್ ಪಥ ಬೆಳೆಸಿ 
ಅಚಾನಕ್ಕು ಕಣ್ಣಾಯಿಸಿ 
ವೇಗ ಚೂರು ಹಗುರಗೊಳಿಸಿ 
ಹಾಗೇ ನಿಂತು ನೋಡುತ್ತಾ 
ಉನ್ಮತ್ತನಾಗಲೇ ಬೇಕು
ಸಿಟ್ಟು, ಬೇಸರ, ಅತೃಪ್ತತೆಯಿಂದ 

ನನ್ನವುಗಳ ನಾನೇ ಮರೆತು 
ನನಗೆಟುಕದ ಎತ್ತರದಲ್ಲಿರಿಸಿ 
ಆ ಎತ್ತರಕೆ ಹೇಗೋ ಬೆಳೆದು 
ಏನನ್ನೋ ಅರಸುತ್ತಿರುವಾಗ 
ಧೂಳು ಸರಿಸಿ, ಸ್ವಲ್ಪ ತೆರೆದು 
ಕದ್ದು ಮುಚ್ಚಿ ಓದಿಕೊಂಡು 
ಅರ್ಥವನ್ನೇ ತಿರುಚ ಬೇಕು 
ಅಲ್ಪ ಶ್ರದ್ಧೆ ಅಹಂಮ್ಮಿನಿಂದ 

ನನ್ನವುಗಳ ನಾನೇ ಮರೆತು 
ಗಾಳಿಯಲ್ಲಿ ಬಿಟ್ಟು ಕೊಟ್ಟು  
ನಂಟಿಗೆಳ್ಳು ನೀರೆರೆದು 
ಬೆನ್ನು ಮಾಡಿ ನಿಂತಿರಲು 
ಉಸಿರುಗಟ್ಟಿ ಬಿಕ್ಕಳಿಸೆ 
ನನ್ನ ಮುಖವ ಸವರ ಬೇಕು 
ಖಾಸಾತನವ ಪ್ರಶ್ನಿಸದೆ 
ಮತ್ತೆ, ಮತ್ತೆ ಭಕುತಿಯಿಂದ 

ನನ್ನವುಗಳ ನಾನೇ ಮರೆತು 
ನನ್ನ ಬಳಿಯೇ ಇರಲು ಬಿಟ್ಟು 
ನಾನೇನೆಂಬುವ ಒಗಟಿಗೆ 
ಮತ್ತೊಂದು ಶಿಥಿಲ ಗಂಟಿರಿಸಿ 
ಎಳೆದರೆ ಬಿಗಿವುದೋ?!! ಇಲ್ಲ, 
ಬಿಡಿಸಿಕೊಲ್ಲುವುದೋ?!! ಎಂಬ 
ನೂರು ಒಗಟು ಹುಟ್ಟ ಬೇಕು 
ತಪ್ಪು ಲೆಕ್ಕದಾಟದಿಂದ 

ನನ್ನವುಗಳ ನಾನೇ ಮರೆತು 
ಹೂತು ಹಾಕಲೆನಿಸಿ ಬಗಿದು 
ಸತ್ಯ ಅಂತರಂಗದಲಿ  
ಸುಳ್ಳು ನೆಪದಿ ಹಪಹಪಿಸಿ
ಬೇರಾರದೋ ಮುಖವಾಡದ
ಹಂಗಿನಲಿ ನಡೆಯುವಾಗ 
ಗುರುತು ಹಿಡಿದ ನನ್ನವುಗಳ 
ಅಪ್ಪ ಬೇಕು ತಪ್ಪೊಪ್ಪಿನಿಂದ 

                   -- ರತ್ನಸುತ 

Friday, 18 October 2013

ದ್ಯಾವ್ರಾಟ!!

ಬಿದ್ರಿನ್ ಕಾಲು, ಬಿದ್ರಿನ್ ಕೈಯ್ಯಿ
ಇಟ್ಟ ಕಣ್ಣು, ಮೂಗು, ಬಾಯಿ
ತೂತು ಮಡ್ಕೆ ತಲೆ ಬುಳ್ಡೆ
ಹರ್ದೊದಂಗಿ ಹುಲ್ಲಿನ್ ಮಯ್ಯಿ
ಕಿವಿ ವಕ್ರ ಸೊಟ್ಟಂಬಟ್ಟ
ಕಾಲಾಗ್ ಚಕ್ರ ಭೂಮೀಗ್ಗೂಟ
ಅವ್ನೇ ಮಾಡಿದ್ ಬೆದ್ರಿನ್ ಗೊಂಬೆ
ನಾನು, ನೀನು, ಆನು, ತಾನು                              [1]

ಮಳೆ ಸುರ್ದು, ಬಿಸ್ಲು ಬಂತು
ಕೊಡೆ ಹಿಡ್ದೋರ್ಯಾರೂ ಇಲ್ಲ
ಕಣ್ಣು ಕರ್ಗಿ ನೀರಾಗೋಯ್ತು
ಒರ್ಸೋಕ್ಕೈಯ್ಯಿ ತಯಾರಿಲ್ಲ
ನಗ್ಸಿದ್ರೆ ನಗೋರ್ನಾವು
ಅಳ್ಸಿದ್ರೆ ಅಳೋರು
ಎಲ್ಲಾ ಅವ್ನು ಆಡಿಸ್ದಂಗೆ
ಅವ್ನ್ದೇನೇ ದರ್ಬಾರು                                        [2]

ಅವ್ನು ತಪ್ಪು ಮಾಡೋದಾದ್ರೆ 
ನಮ್ಗೆ ಬೀಳೋದ್ ಬರ್ರೆ
ಪ್ರೀತಿ ಪ್ರೇಮ ಅನ್ನೋದೆಲ್ಲ
ಜೀವ್ನಕ್ಕೊಸಿ ಹೊರೆ
ಬೆಳೆ ಬೆಳ್ದು ಪಸ್ಲು ಬಂತು
ತೆನೆ ಕೊಯ್ದ ಹೊರ್ತು
ಕಾವ್ಲಿಗಿದ್ದೆ ಅಲ್ಲಿ ವರ್ಗು 
ಮೂಲೆಗೆಸ್ದ ಮರ್ತು                                          [3]

                     --ರತ್ನಸುತ 

ಮುತ್ತು ಜಾರುವ ಹೊತ್ತು

ಪೋಣಿಸಿ ಒಗ್ಗೂಡಿಸಿ 
ಬಿಡಿಸಿಕೊಳ್ಳದಂತೆ ಕಟ್ಟಲು 
ಮುತ್ತುಗಳಿರುವಷ್ಟು ಹೊತ್ತು
ಹಿಡಿದಿಟ್ಟ ನೂಲು ಮಾಲೆ 

ಒಂದು ಜಾರುವ ಸೂಚನೆಯಿದೆ 

ಯಾರು ತುಂಬಿಸಬಲ್ಲರು ಅಂತರ?
ಶಿಥಿಲವಾದವು ಮಿಕ್ಕ ಮುತ್ತುಗಳು
ನೂಲು ನೂಲಾಗಿ ಗೋಚರಿಸಲು 

ಕಣ್ಣಿಂದ ದೂರಾದವು 

ಸೇರಲಿ ಅವರವರ 
ಚಿಪ್ಪಿನ ಮಡಿಲುಗಳ ಕ್ಷೇಮವಾಗಿ 

ನೆನಪುಗಳು ಆಗಾಗ ಮರುಕಳಿಸಲಿ 
ಮನದ ತೀರದಲ್ಲಿ 
ಅಳಿಯದ ಹೆಜ್ಜೆ ಗುರುತುಗಳಾಗಿ                                                       
                           
                          -- ರತ್ನಸುತ

Thursday, 17 October 2013

ನನ್ನೊಳಗೆ ನಾನು!!

ಇದ್ದಷ್ಟೂ ಅನುಕೂಲ ಒಳಗೆ 
ಹೊರಗೆ ಇಣುಕಿದಷ್ಟೂ ಕೇಡು ಹೆಚ್ಚು 
ಇದ್ದಂತೇ ಇರುವುದು ಒಲಿತು  
ಬದಲಾವಣೆಯ ಬಯಕೆ ಹೇರು ಕಿಚ್ಚು 

ಹಸಿದರೆ ಹೊಟ್ಟೆಗಷ್ಟೇ ನಷ್ಟ 
ಒಡಲಿಗಿಲ್ಲದ ಬಾದೆ, ಎಲ್ಲ ನಿಶ್ಚಲಗೊಂಡವು 
ಬಾಗಿಲ ಹಾಯುವ ಧೈರ್ಯ ಮಾಡಿದೆ 
ಕಾಗೆ, ಹದ್ದುಗಳು ಹದ್ದು ಮೀರಿ ಎರಗಿದವು 

ಕಣ್ಣಿದ್ದುದು ಅವಲೋಕಿಸಲು 
ಮೇಲ್ಪದರವ ಮಾತ್ರವೇ ಹೊರತು 
ಆಳಕ್ಕಿಳಿದು ಹೂಳು ಸರಿಸುವ ದೃಷ್ಟಿ 
ದೂರವೂ ಅಲ್ಲ, ದಿವ್ಯವೂ ಆಗಿರಲಿಲ್ಲ 

ನಾಲಿಗೆ ತಕ-ತಕ ಕುಣಿವುದು ಒಳಗೆ 
ಮೂಲ ಅರ್ಥ ತಪ್ಪುವುದು ಸೊಲ್ಲು 
ಹೃದಯವೆಂಬುದು ಎಚ್ಚರ ವಹಿಸಿಕೊಳ್ಳದೇ
ಬರೇ ಬಡೆದಾಡಿಕೊಂಡಿರುವ ಕಲ್ಲು 

ಏರು ಬುಜಗಳಿಗೆ, ಕೆಟ್ಟ ಕುಜ ದೋಷ 
ಹಿಂದೆಯೇ ಬೆನ್ನು ಹತ್ತಿರುವ ಶನಿ 
ಹಸ್ತ ರೇಖೆಗಳು, ಭವಿಷ್ಯ ರೂಪಿಸುವ ಬದಲು
ಕಾಯುತುವೆ ಚಾಚಿ, ಕೇಳಬಯಸಿ ಕಣಿ  

ಜಿಜ್ಞಾಸೆಯ ಕೊನೆಗೆ ನಿರ್ಲಿಪ್ತ ಭಾವ 
ಅಲ್ಪತನದೊಳಗೂ ಅಹಂ ಸಂಭವ 
ಕಿಟಕಿಯ ಕಿಂಡಿಯಲಿ ತಿಳಿ ಬೆಳಕ ನುಸುಳು 
ಅದ ಕಂಡ ಕತ್ತಲಿಗೆ ಉಂಟಾದ ದಿಗಿಲು 

ಇನ್ನೂ ಬರಲಾಗಿಲ್ಲ ಹೊರಗೆ 
ಶವ ಪೆಟ್ಟಿಗೆಯೊಳಗುಳಿದ ಜೀವಂತ ಹೆಣ
ಸೋಲುವ ಭಯವಿದೆ ಎದುರಿಸಲು ನನ್ನ 
ನನ್ನೊಳಗೆ ಹೀಗೊಂದು ರಣ ಕಾರಣ 

                                   -- ರತ್ನಸುತ 

ಮುಂದೈತೆ ಬಕ್ರೀದ್ ಹಬ್ಬ !!

ನಿನ್ನೆ ಬಲಿತ ಬಕರಿಗಳೆಲ್ಲ
ಬಿಕರಿ ಆದವು

ಪಿಚ್ಕೆ, ಮೇವು,
ಮೆಹ್ಹಹ್ಹ್ ಸದ್ದು
ಕೊಟ್ಟಿಗೆ
ಎಲ್ಲವೂ
ಎಳೆ ಮರಿಗಳದ್ದೇ
ಇನ್ನು ಮುಂದೆ

ಎಂದಿನಂತೆ
ತಲೆ ತಗ್ಗಿಸಿ
ಬತ್ತಿದ ಗದ್ದೆಯೆಡೆಗೆ
ಸಾಗಿವೆ ಹಿಂಡು
ಒಂದಿಷ್ಟು ಆಪ್ತರ
ಕಳೆದುಕೊಂಡು

ಕಾಯುವವ
ಹೊರಟ ಹಿಂದೆ
ಮುಂಬರುವ ಈದಿಗೆ
ಬಲಿವವುಗಳ
ಲೆಕ್ಕ ಹಾಕಿಕೊಂಡು !!!

              -- ರತ್ನಸುತ 

Wednesday, 16 October 2013

ಹೀಗಾಗಬೇಕಿತ್ತು!!

ನೀ ಒಮ್ಮೆ ನೋಡಬೇಕಿತ್ತು 
ನಾ ಎಂದೂ ಇರದಂಥಿದ್ದುದ 
ಇಷ್ಟು ಸನಿಹ ಇದ್ದೆಯಲ್ಲ ?!!
ಅದಕ್ಕಾಗೇ ನನ್ನ ಈ ವಿತಂಡತನ   

ನೀ ಗಮನಿಸಬೇಕಿತ್ತು 
ಕಂಬನಿಯ ಹಿಡಿದಿಟ್ಟಾಗ 
ಒತ್ತಾಯಕೆ ತುಟಿ ಅರಳಲು 
ದುಃಖ ಕಿವಿಯ ಕೆಂಪೆಬ್ಬಿಸಿದ್ದ   

ನಾ ಕನವರಿಸಿ ಬೆಚ್ಚಿದ್ದ ನಿಜವ 
ಕಥೆಯಾಗಿ ಕೇಳಿ ಮೆಚ್ಚಿದವಳು 
ಹಿಂದೆಯೇ ಮೂಡಿದ ಚಿಂತಾ ರೇಖೆಗಳ,  
ಉರಿ ಬೆವರಿಳಿದುದ್ದ ಪರಿಗಣಿಸಬೇಕಿತ್ತು  

ಚಿಟ್ಟೆ ಸ್ವಭಾವವ ಬಿಟ್ಟು 
ಒಂದೆರಡು ಕ್ಷಣವಾದರೂ ನಿಲ್ಲಬೇಕಿತ್ತು 
ಸುಡುವ ಅಂತರಂಗದೊಳಗೆ 
ಕೊನೆ ಪಕ್ಷ, ಬೇಗೆಯ ಅರಿವಾಗುತಿತ್ತು ನಿನಗೆ 

ಎಷ್ಟೋ ತುಮುಲಗಳ ಅಡಗಿಸಿಟ್ಟಿದ್ದೆ  
ಸೋಗೆ ಅಂಚಲ್ಲಿ ಕೆದಕ ಬೇಕಿತ್ತು 
ಬಿಕ್ಕುತ ಎಲ್ಲವನು ಹಂಚಿಕೊಂಡು 
ಹಗುರಾಗುವ ಮನಸಾಗಬಹುದಿತ್ತು 

ಋಣ ತೀರಿತೆಂದು ತೊರೆವ ಮುನ್ನ 
ಸುಳುವೊಂದ ಕೊಟ್ಟು ಸಲಹಬೇಕಿತ್ತು 
ಹೃದಯಕೆ ಉಗುರಷ್ಟು ಗಾಯವ ಮಾಡಿ 
ತೆರೆದು ಬಿಡಬೇಕಿತ್ತು ನೆನಪಿನ ಮಳಿಗೆ 

                                   -- ರತ್ನಸುತ 

Tuesday, 15 October 2013

ಅಸಹಾಯ"ಕಥೆ"

ನೋವುಂಟು ಎದೆಯೊಳಗೆ 
ನೂರೆಂಟು ಅಳುಕುಂಟು 
ಹಂಚಿಕೊಳಲಾಗದ ಮೌನದೊಡನೆ 
ಕಾಲುಂಟು ಕಂಬನಿಗೆ 
ಕೋಲು ರೆಪ್ಪೆಯ ಬಡಿತ 
ಕಣ್ಣು ತುಂಬುವ ಸುಳುವು ಸಿಕ್ಕಿದೊಡನೆ 

ಕತ್ತಲಲಿ ನೆರಳಿರಿಸಿ
ಬೆಳಕಿನಲಿ ಬೆವರಿಳಿಸಿ 
ಆತಂಕದ ಹೆಜ್ಜೆ ಇಟ್ಟೆಡೆಯಲಿ 
ಅನುಚಿತ ಒಡನಾಟ 
ತಿರುಚು ದೂರದ ನೋಟ 
ಅಪನಂಬಿಕೆಯೇ ನಿಜ ತಾ ಕಡೆಯಲಿ 

ದುಪ್ಪಟ್ಟು ದಿಗಿಲೊಡನೆ 
ದಾಪುಗಾಲಿನ ಕನಸು 
ಇರುಳು ದಾಹವ ನೀಗಿಸದ ಬಾವಿಯು
ಹೆಬ್ಬೆಟ್ಟು ಅಚ್ಚಿನಲಿ 
ಚಕ್ರವ್ಯೂಹದ ನಕ್ಷೆ 
ಕಪಿಮುಷ್ಟಿಯಲಿ ಬೆವರ ಹೆಣಭಾರವು 

ನೆನ್ನೆಗಳು ನಿಕೃಷ್ಟ 
ನಾಳೆಗಳು ಅಸ್ಪಷ್ಟ 
ಈ ದಿನವೇ ಎಲ್ಲಕೂ ಮೂಕ ಸಾಕ್ಷಿ 
ಮುರಿದ ರೆಕ್ಕೆಯ ತೋಳು 
ದಟ್ಟ ಅಡವಿಯ ಬಾಳು 
ದಿಕ್ಕು ದೆಸೆಗಾಣದವ ಸೋತ ಪಕ್ಷಿ 

ರಾಮ ರಕ್ಕಸರಿಬ್ಬರೂ 
ಒಂದು ಕೈಯ್ಯಲ್ಲಿ 
ತಕ್ಕಡಿಯ ಮತ್ತೊಂದು ಕೈ ನನ್ನದು 
ಮುಗಿವೆ ರಾಮನಿಗೆ, ಇಲ್ಲವೇ
ಒಲಿಸಿಕೊಳ್ಳುವೆ ರಕ್ಕಸನ 
ಏನು ಮಾಡಲಿ?!! ನನ್ನ ಅಸಹಾಯ"ಕಥೆ"ಯಿದು 

                                             -- ರತ್ನಸುತ 

Monday, 14 October 2013

ಹುಂಜನ ತೇಗು

ಪಕ್ಕದ ಮನೆಯ ಹುಂಜ ಕಂಡರೆ 
ಕೈಗೆ ತುರಿಕೆ ಪುಕ್ಕ ಕೀಳಲು 
ತುದಿಯ ತಗೆದು ಕಿವಿಗೆ ತಿರುವಲು 

ರೆಕ್ಕೆ ಹಿಡಿದು ಸೊಕ್ಕು ಮುರಿದು 
ಕಾಲು ಕಟ್ಟಿ ಕೊಕ್ಕು ಬಿಗಿದೆ 
ಬಂಡೆ ಕಲ್ಲಿಗೆ ಖಾರ ಹರಿಯಲು 

ತಂದೂರಲ್ಲಿ ಸುಟ್ಟರೂ ಸರಿಯೇ 
ಸಾರಲಿ ಸೇರಿ ಬೆಂದರೂ ಸರಿಯೇ 
ಒಂದೇ ನಾಲಿಗೆ ಸಾಲದು ಸವಿಯಲು 

ಮೂಳೆ ಕಡಿದು ನುಣ್ಣಗೆ ಜಗಿದರೂ 
ನಾಳೆ ಎಂಬ ಭಯ ಚೂರಿದ್ದರೂ 
ಚಿಂತೆ ಇಲ್ಲ ತುಂಡೆದುರಿರಲು 

ಕಳುವಿನ ಬೊಬ್ಬೆ ಏಳುವ ಮುನ್ನ 
ಸೃಷ್ಟಿಸಬೇಕು ಕಟ್ಟು ಕಥೆಯ 
ಬೀಸೋ ದೊಣ್ಣೆಗೆ ತಪ್ಪಿಸಿಕೊಳಲು 

ತೇಗಲು ಸಂಶಯ ಬರಬಹುದೇನೋ ?!!
ನಾಯಿಯ ಮೂತಿಗೆ ಸವರಿದೆ ನೆತ್ತರು 
ಬಾಲಕೆ ಪುಕ್ಕವ ಸಿಕ್ಕಿಸಿ ಬಿಡಲು 

ಚಪಲದ ನಾಲಿಗೆ ರೂಢಿಗೆ ಸಿಕ್ಕಿ 
ನಾಳೆಗೂ ಒಂದು ಬೆಕನಿಸುತಿದೆ 
ಪಾಪ, ಕೋಳಿಯೂ ಒಂಟಿ ಅನಿಸುತಲಿರಲು 

                                       -- ರತ್ನಸುತ 

Friday, 11 October 2013

ನೀ.........!!!

ನೀ ನುಡಿದೆ, ಕಡೆಗೆ 
ಅದೇ ಆಗಿದ್ದು ಸಾಹಿತ್ಯ 
ನೀ ಸೆಳೆದೆ ಮನವ 
ಅದೇ ಎಲ್ಲಕ್ಕೂ ಸ್ವಾರಸ್ಯ 
ನೀ ಹಿಡಿದೆ ಹಠವ 
ಅದೇ ನನ್ನೋಪ್ಪಿಗೆ ದಾರಿ 
ನೀ ಹೋದ ಕಡೆಗೆ 
ನಾ ಸಂಚಾರಿ ಗೋರಿ 

ನೀ ಕೊಟ್ಟ ಪೆಟ್ಟು 
ಅದು ಮುನ್ನೆಚ್ಚರ ನನಗೆ 
ನೀ ಇಟ್ಟ ಕಣ್ಣೀರು 
ಕೈ ಬೆರೆಳ ತೆರಿಗೆ 
ನೀ ಸುಟ್ಟ ಕನಸುಗಳು 
ದುಸ್ವಪ್ನ ದೂರ 
ನೀ ಬಿಟ್ಟ ಗುರುತುಗಳು 
ನನ್ನೆದೆಯ ತೀರ 

ನೀ ಬಯಸುವ ದಾರಿ 
ಜೀವನದ ಮಾರ್ಗ 
ನೀನಿರುವ ಜಾಗವದು 
ಗುರುತ್ವ ವರ್ಗ 
ನೀ ಬೇಡದ ಬೆಳಕು 
ನನಗದು ಶೂನ್ಯ 
ನೀ ಆಸೆ ಪಟ್ಟಂತೆ 
ಕತ್ತಲೇ ಧನ್ಯ 

ನೀ ಬೆಂಕಿಯಾದರೆ 
ನಾ ಉರಿವ ಸೌದೆ 
ನೀ ಬಿಂಕವಾದರೆ 
ನಾ ಮಸೂದೆ 
ನೀ ಹಿಡಿದ ಲೇಖನಿ 
ನಾ ಹರಿವ ಶಾಯಿ 
ನೀ ಹಸಿವ ನೀಗಿಸೋ 
ನನ್ನ ಹೆತ್ತ ತಾಯಿ 

ನೀ ಚಿತ್ರವಾದರೆ 
ನಾನೇ ಚೌಕಟ್ಟು 
ನೀ ಪತ್ರವಾದರೆ 
ನಾನದರ ಗುಟ್ಟು 
ಲೋಕಕೆ
ನೀನು ನೀನೆ 
ಇಲ್ಲಿ ನಾನು ನಾನೇ 
ನಮ್ಮೊಳಗೆ
ನೀನು-ನಾನು 
ಎಂದೂ ಒಂದೇ ತಾನೇ !!

                  --ರತ್ನಸುತ 

Thursday, 10 October 2013

ಬೇಟೆ!!


ಮುಳ್ಳಿನ ಬೇಲಿಗೆ ಹೊದಿಸಿದೆ ಸೀರೆ 
ಹರಿಯುವ ಮೊದಲು ಬಿಡಿಸುವ ಬಾರೆ 
ಮನಸೊಪ್ಪದ ಮುಳ್ಳಿಗೂ ಮನಸುಂಟು 
ತ್ರಾಣ ಇರುವನಕ ಮುಳ್ಳಿನ ನಂಟು 

ಮತ್ತೆ ಮಡಿಚಿರೆ ಸೀರೆಯ ತಂದು 
ಹಾರಿಸಿ ಹೊದಿಸಲು ಬೇಕಿದೆ ಮತ್ತೆ 
ಹಿಡಿದ ಕೈಗಳು ಬಿಟ್ಟಿವೆ ಸುಕ್ಕು 
ಬೆವರಿ ಬಿಡಿಸಿದೆ ಸೀರೆಯು ನಕ್ಕು 

ಹಸಿದ ಹುಲಿಗಳು ದಿನಕ್ಕೊಂದಂತೆ 
ಜಿಂಕೆಗೆ ರೂಢಿ ಆಗಿದೆ ಬೇಟೆ 
ಕಾಯಿಸಿ ಚೂರು ಕೈ ತಪ್ಪಿದರೂ 
ಶರಣಾಗಲದುವೇ ಶ್ರಾವ್ಯ ಗೀತೆ 

ಬೆಳಕಿಗೆ ನಾಚಿ ಕತ್ತಲ ಅಪ್ಪಿ 
ಮುಚ್ಚುವ ಕಣ್ಣಿಗೆ ಕಾಣದು ಏನೂ 
ನೆಲಕೆ ಹಾರಿ ತುಸು ಒದ್ದಾಡಿ 
ನೀರಿಗೆ ಹಾರಿತು ಬಣ್ಣದ ಮೀನು 

                         --ರತ್ನಸುತ 

Friday, 4 October 2013

ಕಾವ್ಯಾಂಜಲಿ !!!

ಮತ್ತೆ, ಮತ್ತೆ "ಮತ್ತೆ!!" ಎಂದು 
ಮೆತ್ತಗೆ ಮತ್ತೇರಿಸುವಂತೆ
ಮಾತಿಗೆ ಎಡೆಮಾಡಿಕೊಟ್ಟ 
ನಿನ್ನ ಮೃದುತ್ವಕ್ಕೆ ಮೆತ್ತಿಕೊಂಡೆ 
ಸತ್ತೇ ಹೋಗಿರುವೆ ಎಂದು 
ಅಂದುಕೊಂಡಿದ್ದ ಭಾವನೆಗಳಿಗೆ 
ನಿನ್ನ ಹೆಸರಿಂದ ಹೊಮ್ಮುವ 
ಬಿಸಿಯುಸಿರ ಬೀಜವ ಬಿತ್ತಿಕೊಂಡೆ 

ಬಸವಳಿದು ಬೆಂದ ಒಡಲಿಗೆ 
ತಂಪೆರೆದ ನಿನ್ನ ಅಪ್ಪುಗೆಯ 
ಸ್ಪರ್ಶದೊಳಗಿನ ಕಾವು 
ನಿಶ್ಕಲ್ಮಷ ಕಾಮನೆಯ ಎಬ್ಬಿಸಿತ್ತು 
ನಿನ್ನ ಕಾಣುವ ಹಂಬಲದ 
ತುದಿಗೆ ನೆಮ್ಮದಿಯ ಭಾವ 
ಕೈ ಮುಗಿಯಿತೆನ್ನ ಮನವು 
ಇಟ್ಟು, ನಿಂತಲ್ಲೇ ಮೂರು ಸುತ್ತು 

ನಿನ್ನ ಕಣ್ಣಿನ ಸುತ್ತ 
ಸುಕ್ಕು ಹಿಡಿಸುವ ಚಿಂತೆ 
ಕಂಡೊಡನೆ ಎನ್ನ ಮನ 
ಮೌನ ಮುರಿದ ವೀಣೆ 
ಮಿಡಿಯಿತು ತಂತಿಗಳ 
ಬಿಕ್ಕಿತು ತುಸು ಬಹಳ 
ಎದೆಗೆ ಒರಗಿಸಿ ಸುಕ್ಕ 
ಬಿಡಿಸುವಗಸನು ನಾನೇ !!

ನಾಲ್ಕಾಣೆ ಕುಂಕುಮ 
ಎಂಟಾಣೆ ದಿಂಡು 
ಮೈ ತುಂಬ ಸಂಭ್ರಮ 
ನೋಟಕೆ ತಂದು 
ನಿನ್ನ ಹಾಡಿ, ಹೊಗಳಿ 
ಚೂರು ಸುಳ್ಳು ಬೊಗಳಿ 
ಸಿಕ್ಕಿ ಬಿದ್ದು ಕ್ಷಮೆಯ 
ಕೋರಲೇ ಇಂದು ?!!

ಲೋಕವನ್ನೇ ಮರೆತು 
ನಿನ್ನನ್ನೇ ಕುರಿತು 
ಹೊಗಳುವ ಸಾಲುಗಳ 
ನೂಕು-ನುಗ್ಗಲು ಈಗ 
ನಾ ಹಿಡಿದ ಲೇಖನಿ 
ನಿನ್ನ ತೋರು ಬೆರಳಾಗಿ 
ಕರೆದೊಯ್ಯುವ ತಾಣ 
ನಿನ್ನ ಹೃದಯದ ಭಾಗ 

              --ರತ್ನಸುತ 

Thursday, 3 October 2013

ಕಾಡಿ, ಬೇಡಿ ಒಂದಿಷ್ಟು ಹಾಡಿ !!


ತುಂಬು ಬಿಂದಿಗೆಯಲ್ಲಿ ತಂದೆ ನೋಡು 
ನನ್ನೆದೆಯ ಭಾವ ಕೊಳದ ಒಂದು ಪಾಲು 
ಇಷ್ಟಕ್ಕೇ ಬೆಚ್ಚುವೆ ಏಕೆ ಬಾಲೆ ?
ಇದು ಕಣಜದೊಳಗಿನ ಕೇವಲ ಒಂದು ಕಾಳು 

ಹಾಳೆಗಟ್ಟಲೆ ಬರೆದ ಕರೆಯೋಲೆಯ ನೀ 
ಓದಲಾರದೆ ಬೇಸತ್ತರೆ ಹೇಗೆ ?
ಕೇವಲ ವೇದನೆಯ ಮರೆಸಿದ ಸಾಲಿದು 
ಮೂಲ ಅಕ್ಷರಗಳೊಳಗೆ ಉಳಿದಿವೆ ಹಾಗೇ 

ಒಂದು ಮಾತಿಗೇ ನೀನು ನೆಲವನ್ನ ಕೊರೆದೆ 
ಹೆಬ್ಬೆರಳ ಗೀರಿ ನಾಚಿಕೆಗೆ ಹಾರಿ 
ಬಚ್ಚಿಟ್ಟ ಬಯಕೆಗಳ ಬಿಚ್ಚಿಟ್ಟು ಹೊರಟರೆ 
ಗಲ್ಲ ಕೆಂಪಾಗಿಸಿಬಿಡುವೆ ಮಿತಿ ಮೀರಿ 

ಅನುಭವವ ಹಂಚಿದರೆ ಕಟ್ಟು ಕಥೆಯೆಂದೆ 
ಕಥೆಗೆ ಮನ ಸೋತು ನಿಜವಂದುಕೊಂಡೆ 
ಕಥೆಗಾರ ಮೊದಲೇ, ಹುಟ್ಟಿಸುವೆ ನೂರಾರು 
ಬೇಡವೆಂದು ಇದ್ದಂತೆಯೇ ಉಳಿದೆ 

ಉಡುಗೊರೆಯ ಏಟಿಗೆ ನನ್ನವಳಾಗಿಬಿಡುವೆ 
ತಂದು ಕೊಡಬಲ್ಲ ಸಾಮರ್ಥ್ಯ ಇದೆ ನನ್ನಲ್ಲಿ 
ನನ್ನ ಜೀವನವನ್ನೇ ನಿನಗಾಗಿ ಬರೆದಿರುವೆ 
ಅದಕೂ ಮಿಗಿಲು ಉಡುಗೊರೆ ಎಲ್ಲಿ ತರಲಿ 

ನೀ ಇದ ಓದಿ, ಸ್ಪಂದಿಸುವ ರೀತಿಯ 
ಊಹೆಗೈದೇ ಸಂಭ್ರಮಿಸೋ ಹುಚ್ಚ ನಾನು 
ಮಡಚಿ ಅಡಗಿಸಿ ಇಟ್ಟ ಅಷ್ಟೂ ಕವನಗಳ 
ಕಣ್ಣು ಹಾಯಿಸಿ ಜೀವ ತುಂಬಿಸುವೆಯೇನು?!!

                                          --ರತ್ನಸುತ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...