Wednesday 26 March 2014

ಅವಾಂತರ !!

ಗೆಳತಿಯ ಬಚ್ಚಲ ಕೋಣೆಯ ಗೂಟದಲಿ
ಎಂಥೆಂಥದೋ ಉಡುಪುಗಳ ನಡುವೆ
ನನ್ನ ಒಳ ಉಡುಪು 
ಕಾಣದಂತೆ ಅಡಗಿ ಕೂತಿದೆ?!!

ಜೋಪಾನವಾಗಿ ಒಂದೊಂದನ್ನೂ
ಸರಿಸಿ, ಬಿಡಿಸಿ, ಇಳಿಸಿ
ಉಸಿರುಗಟ್ಟಿದ ಆ ಹೆಣವ
ಪತ್ತೆ ಹಚ್ಚಲು ಹೆಣಗಾಡಬೇಕು

ಮತ್ತೂ ಸಿಗದಿದ್ದರೆ
ಒಂದರ ಒಳಗೆ ಮತ್ತೊಂದ
ತಡಕಾಡಬೇಕು;
ಎಲಾಸ್ಟಿಕ್ ಜಗ್ಗದಂತೆ,
ಕೊಕ್ಕು ಮುರಿಯದಂತೆ,
ಉಬ್ಬು ಹಿಗ್ಗದಂತೆ, ತಗ್ಗದಂತೆ!!

ಸಿಗದಿದ್ದರೂ ಪ್ರಳಯವೆಂಬಂತಲ್ಲ;
ಹುಡುಕಾಟದಲ್ಲಿ ಒಂದು ಸುಖವಿದೆ ಅಷ್ಟೆ!!
ಅದೊಂದು ರೀತಿ
ತುಂಬಿದ ಬಸ್ಸಿನ ನೂಕಾಟದಲ್ಲಿ
ಹುಡುಗಿಯರ ಬೆನ್ನಿಗೆ ಆನಿಕೊಂಡಾಗ
ಪಡುವ ಕಷ್ಟದೊಳಗಿನ ಖುಷಿಯಂತೆ!!

ಬೆವರ ವಾಸನೆಗೆ ಆಕೆ ಪಳಗಿದ್ದಾಳೆ;
ಇಲ್ಲೋ; ಒಂದೇ ಸೆಕೆ!!
ಅಪ್ಪಿ-ತಪ್ಪಿ ನನ್ನ ತುಂಟತನ ಆಕೆಗೆ ಗೊತ್ತಾದರೆ
ಮತ್ತೊಮ್ಮೆ ಸಮಜಾಯಿಷಿಕೊಳ್ಳಬೇಕು !!

ಮತ್ತೆ ನೇತು ಹಾಕುತ್ತೇನೆ
ಎಲ್ಲವನ್ನೂ ಮೊದಲಿನಂತೆ ಆ ಗೂಟಕ್ಕೆ
ಮೊದಲಾವುದು? ಮತ್ತೆ....? ಮತ್ತೆ....?
ಗುರುತಿಟ್ಟುಕೊಳ್ಳಬೇಕಿತ್ತು!!
ಎಲ್ಲಿ; ಮೈ ಮರೆತಿದ್ದೆನಲ್ಲ....!!
ಗಾಬರಿಯಲ್ಲಿ ಎಳೆದುಕೊಂಡ ವಸ್ತ್ರದ ಕೊಕ್ಕು
ಇಲ್ಲೇ ಎಲ್ಲೋ ಬಿದ್ದಂತಾಯಿತು
ಕನ್ನಡಕ ಧರಿಸಿಲ್ಲ, ಹೇಗೆ ಹುಡುಕುವುದು??

ಅಲ್ಲಿಗೆ ಬಾಗಿಲು ದಡ, ದಡ ಬಡಿದಳು
ಹಿಂದೆ ಬಹಳಷ್ಟು ಬಾರಿ ಸಿಕ್ಕಿಬುದ್ದಿದ್ದೇನೆ
ಇಂದು ಮತ್ತೊಂದು ಸೇರ್ಪಡೆ;
ಅಷ್ಟರಲ್ಲೆ ಕಿಟಕಿಯ ಆಚೆ 
ಒಣಗಲು ಹಾಕಿದ್ದ ಸಾಹೇಬ್ರು
ಮೈ ಮುರಿದು
"ನಾನಿಲ್ಲಿದ್ದೀನ್ಲಾ" ಎಂದು ನಕ್ಕಂತಾಯ್ತು!!

                                       -- ರತ್ನಸುತ

1 comment:

  1. ತುಸು ಪೋಲಿತನದ ಕವನಗಳು ನಿಜವಾಗಲೂ ಮನೋ ಚೈತನ್ಯವನ್ನು ಹುರಿಗೊಳಿಸುತ್ತವೆ.
    ಸಭ್ಯತೆಯ ಎಲ್ಲೆ ಮೀರದ ಇಂತಹ ಕವಿ ಭಾವಗಳಿಗೆ ಸ್ವಾಗತ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...