Saturday 22 March 2014

ತಡವರಿಸಿ ಬಂದಾಗ

ಕೆಂಪು ದೀಪದ ಕೆಳಗೆ
ಕಂದು ಬಣ್ಣದ ಸೀರೆ
ಹಾರಿ ಹೋಯಿತು ಅದು ನಿನ್ನದೇನೇ?
ಕಂತು ತೀರಿಸುವಲ್ಲಿ
ಕೊಂಚ ಕಾಲದ ಕೊರತೆ
ತಡ ಮಾಡಿದರೆ ತಾಳಬೇಕು ನೀನೇ!!

ಅಂಚ ಕತ್ತರಿಸುತ್ತ
ಅಂಗೈಯ್ಯ ಮೇಲಿಟ್ಟೆ
ಸಂಚು ಅಲ್ಲದೆ ಅದಕೆ ಏನು ಹೆಸರು?
ಜೋಡಿ ರವಿಕೆಯ ತುಂಡು
ತಡಕಾಡಿ ಸಾಕಾಯ್ತು
ಹೋದ ಸಂತೆಗಳಲ್ಲಿ ಸೋತ ಪಸರು

ನಿನ್ನ ನೆರಳಿಗೆ ಬಂತು
ಬೆತ್ತಲಾಗುವ ಯೋಗ
ಬೀದಿ ದೀಪಕೂ ಬಂತು ಚೂರು ಜೀವ
ಗಾಳಿ ಕೆಟ್ಟ ಪೋಲಿ
ನಿನ್ನ ಕುರುಳಲಿ ಜಾರಿ
ಸೀರೆ ಸಹಿತ ಸೆಳೆಯೆ ಬೀಸುತಾವ

ತಾಳು ಇನ್ನು ನಿಮಿಷ
ಕೊನೆ ತಿರುವ ದಾಟಿರುವೆ 
ನಾ ಮುಗಿಸುವೆ ನೆರಳ ಬೆತ್ತಲಾಟ
ಗೆದ್ದ ಗುರುತುಗಳೆಲ್ಲ
ನಾಳೆಗಳ ನೆನಪಿಗೆ
ಸೋಲು ಕಲಿಸುವುದಿಲ್ಲಿ ತಕ್ಕ ಪಾಠ

ಮತ್ತೆ ಆಗದು ಇಂಥ
ತಪ್ಪು ತಪ್ಪಿಯೂ ಕೂಡ
ಅಳತೆ ತಪ್ಪುವ ಎದೆಯ ಅಳತೆ ಇಡುವೆ
ಬಿಗಿಗೊಳ್ಳದಂತೆ 
ಟಕ್ಕು ಸವಲತ್ತಿನಲಿ
ಸೀರೆಗೆ ಹೊಂದುವ ರವಿಕೆ ತರುವೆ

ಎಲ್ಲ ಸುಖಗಳು ಬರೇ
ನೆರಳಿಗಷ್ಟೆ ಕೊಟ್ಟು
ನಾವು ಕುಟ್ಟುವ ಕೆಲಸ ಯಾರ ಪ್ರೀತಿ?
ಆದದ್ದಾಗಲಿ
ಅಡ್ಡಗಾಲಿನ ನಡುವೆ
"ನಾವೊಂದು ಕೈ ಮೇಲೆ" ನೀಯೇನಂತಿ?!!

                                           -- ರತ್ನಸುತ

1 comment:

  1. ನಿಷಿದ್ಧ ಬದುಕಿನ ಚಿತ್ರಣ ಮನ ಮುಟ್ಟುವಂತೆ ಚಿತ್ರಿಸಿಕೊಟ್ಟಿದ್ದೀರಿ.
    ಪಸರು ಒಳ್ಳಯ ಪ್ರಯೋಗ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...