Wednesday 14 May 2014

ತಿಪ್ಪೆ ಗೊಬ್ಬರ

ಪದಗಳ ಕುಪ್ಪೆ,
ಭಾವಗಳ ತಿಪ್ಪೆ,
ನನ್ನ ದಿನಚರಿ;
ತಳದಲ್ಲಿ ಕೊಳೆತವು,
ನಡುವಲ್ಲಿ ಸತ್ತವು,
ಮೇಲೊಂದಿಷ್ಟು ಉಸಿರಾಟದ
ಕೊನೆಯ ಸರದಿ!!

ಯಾರೋ ತಿಂದುಗುಳಿದ 
ಬೀಜಕ್ಕೂ ಇದೆ 
ಸ್ಥಳಾವಕಾಶ;
ಚಿಗುರುಗೊಡುವ
ಔದಾರ್ಯತೆಗೆ
ಎಳ್ಳಷ್ಟೂ ಕುಂದಿಲ್ಲ!!

ಆಳಕ್ಕೆ ಕೆದಕಿದಷ್ಟೂ
ಎರೆ ಹುಳುಗಳಂತೆ
ಕವಿತೆಗಳ ಹಿಂಡು;
ತಲೆ ಯಾವುದೋ,
ಬುಡ ಯಾವುದೋ
ಅರ್ಥವಾಗದವು;
ಎಲ್ಲವೂ ಓದಿಕೊಂಡವರ
ಊಹೆಗೆ ನಿಲುಕುವವು!!

ನಾರುವುದು ದಿಟ,
ಕಣ್ದೆರೆದರೆ ನಷ್ಟವಿಲ್ಲ
ಮೂಗಿಗಷ್ಟೇ ಘಾಸಿ;
ಮನಸನ್ನ ತಟ್ಟಲೂ ಬಹುದು
ಒಂದಿಷ್ಟು ಸವಿಗಂಪು 
ಕ್ಷಮಾದಾನದ ಓದುಗರಲ್ಲಿ!!

                    -- ರತ್ನಸುತ

1 comment:

  1. ಮನಸು ಭೂಮಿಯಂತಾದಗಲೇ ತಾವು ಹಲವು ಭಾವಗಳಿಗೂನೂ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...