Friday 23 May 2014

ರಣರಂಗದಲ್ಲಿ

ಕೆಂಪು ಕೋಟೆಯ ಸುತ್ತ
ಹಸಿರು ಗರಿಕೆ
ಹಳದಿ ಹೂವಿನ ಪಕಳೆ
ಮುದುಡಿತೆದಕೆ?
ಕೊಡಲಿ ಹಲ್ಲಿಗೆ ಸಿಕ್ಕಿ
ಒಣಗಿ ರಕುತ
ಕುಪ್ಪೆ ಶಿರಗಳು ಉದುರಿ
ಉರುಳಿ ಅಳುತ!!

ಯಾರೋ ಹಾಕಿದ ಕೇಕೆ
ಬೆಚ್ಚಿ ಕೂಸು
ಹುಟ್ಟು ಕಿವುಡಾಗಿದ್ದ-
-ರೆಷ್ಟು ಲೇಸು?!!
ಕಣ್ಣು ಹಿಂಗಿದ ಕೆಥೆಗೆ
ಅಂತ್ಯವೆಲ್ಲಿ?
ಪೇಟೆ-ಸಂತೆಯ ಬೆಳಕು 
ಆತ್ಮ ಕೊಳ್ಳಿ!!

ಗುಂಡು ಹಾರುವ ವೇಗ
ಕಂಡು ಹಿಡಿದು
ಕನಸ ವೇಗಕೆ ಪಾಠ
ಕಲಿಸುವಾಗ
ಕೋವಿ ಹಿಡಿದರೆ ಚೂರು
ಕಲಿವುದೇನೋ?
ಸಾವು ಸವರಲು ಬೇಗ
ಒಲಿವುದೇನೋ?!!

ಖಾಲಿ ಬಯಲಿಗೆ ಬೇಲಿ
ಮೌನವಾಗಿ
ಆದ ಗಾಯವು ಹೀಗೇ
ಮಾಗಿ-ಮಾಗಿ
ಹದ್ದು ಕುಕ್ಕಿತು ಅಲ್ಲಿ
ದೇಹ ಮುಕ್ತಿ
ಸ್ಪೂರ್ತಿಯಾಯಿತು ಸತ್ತ
ದೇಶ ಭಕ್ತಿ!!

ನನ್ನ ಗೋರಿಗೆ ನೀನು
ನಿನ್ನ ಗೋರಿಗೆ ಅವನು
ಅವನ ಗೋರಿಯ ಯಾರು
ಮುಚ್ಚುವವರು;
ನಾಮ ಫಲಕಗಳೆಲ್ಲ
ನೆನ್ನೆಗಳ ಗುರುತು
ನಾಳೆ ಸತ್ತರೆ ಯಾರು
ಕೆತ್ತುವವರು?!!

ಸಿದ್ಧ ಉತ್ತರಕಿಲ್ಲಿ
ಪ್ರಶ್ನೆಯಿಲ್ಲ
ಎದ್ದ ಪ್ರಶ್ನೆಗೆ ಸೂಕ್ತ
ಕುರುಹೂ ಇಲ್ಲ್ಲ;
ಇರುಳ ಕನಸುಗಳೆಲ್ಲ
ನನಸಾಯಿತು
ಹಗಲುಗನಸಿಗೆ ಸಮಯ
ಇರದಾಯಿತು!!

            -- ರತ್ನಸುತ

1 comment:

  1. "ಕಣ್ಣು ಹಿಂಗಿದ ಕೆಥೆಗೆ
    ಅಂತ್ಯವೆಲ್ಲಿ?
    ಪೇಟೆ-ಸಂತೆಯ ಬೆಳಕು
    ಆತ್ಮ ಕೊಳ್ಳಿ!!"

    ಮನಕಲುಕಿತು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...