Monday 19 May 2014

ಆಸೆಗಳಂದಮೇಲೆ ಹೀಗಿರಬೇಕು

ಒಂದೇ ದಿನಕ್ಕೆ ಹೆಮ್ಮರವಾದ
ಆಸೆಗಳ ಆಯಸ್ಸು ಅದೊಂದೇ ದಿನ;

ಆಸೆಗಳಂದಮೇಲೆ ಚಿಗುರಬೇಕು,
ಸತಾಯಿಸಿ ಬೆಳೆಯಬೇಕು,
ಅಚ್ಚರಿಯಂತೆ ಹಬ್ಬಬೇಕು,
ಸೊಕ್ಕಿನಿಂದ ಕೊಬ್ಬಬೇಕು,
ಬಿಡಿಸಿಕೊಳ್ಳಲಾಗದಂತೆ ಬೆಸೆದು,
ಬಸಿದು ಬಿಡಬೇಕು ಮನಸನು
ಪೂರ್ವ ಪೀಡಿತ ಖಾಯಿಲೆಯಂತೆ!!

ನೆರಳಾಗಬೇಕು ಮರಿ ಚಿಗುರಿಗೆ
ಮಡಿಲಾಗಬೇಕು ಕಪಿ ಮನಸಿನ
ಕೊಂಬೆ ಕೊಂಬೆಯ ಜಿಗಿತಕ್ಕೆ;
ಒಣಗಿ, ಬೋಳು-ಬೋಳಾಗಿ
ಮತ್ತೆ ಹೊಸತನ್ನುಟ್ಟು
ಮೆರೆಯಬೇಕು ಮರೆಯದೆ
ಹುಟ್ಟಿಕೊಂಡುದರ ಮೂಲವನ್ನ!!

ಬೇರು ತಾ ಹರಡಿ
ಗಟ್ಟಿ ಬುಡ-ಕಾಂಡಗಳ ಸಹಿತ
ಆಳವ ಕೆದಕಬೇಕು
ಆಗಸಕ್ಕೆ ಲಗ್ಗೆಯಿಡಲು!!

ಗಾಳಿ, ಬಿಸಿಲು,
ಬರ, ನೆರೆಗಂಜದೆ
ದೃಢವಾಗಿ ನಿಲ್ಲಬೇಕು
ಗಂಡೆದೆಯೊಳಗೊಂದು
ಹೆಣ್ಮಯತೆಯ ಕಾದಿರಿಸಿ!!

ನೀಗಿದ ಬಳಿಕ
ನೆಲಕುರುಳಬೇಕು
ಗುರುತಲ್ಲೇ ಮತ್ತೆರಡ
ಚಿಗುರುಗೊಡುತ!!

ಮಿತಿಯಿಲ್ಲದ 
ಆಸೆ ಪಡುವ ಮನಸು 
ಬುದ್ಧನೆದುರು ನೈವೇದ್ಯವ
ಮುತ್ತಿಕೊಂಡ ನೊಣದಂತೆ!!

                      -- ರತ್ನಸುತ

1 comment:

  1. ನಿಜ ನಾನು ಹದಿರಾರಾಣೆ ಆಸೆ ಪಟ್ಟರೆ ತುಸುವಾದರೂ ದಕ್ಕೀತು ನಮಗೆ!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...