Monday 19 May 2014

ಮಲ್ಲಿ-ಕಳ್ಳಿ

ಕಿಳ್ಳಿಗೂ ಮಲ್ಲಿಗೂ ಮನ್ಸು;
ಮಲ್ಲಿ ಮೂಗಿಗ್ ಕಂಪು,
ಕಳ್ಳಿ ಮುಳ್ಳು ಚೂಪು!!

ಕಳ್ಳಿ ಮಲ್ಲೀನ್ ಕಾದಿದ್ಕೂ
ಮಲ್ಲಿ ಕಳ್ಳೀನ್ ನಂಬಿದ್ಕೂ
ಅರ್ಥ ಐತೆ ಅಂತ ಹೇಳೋದ್
ಬೋ ಕಷ್ಟ ತಗಳಿ.. !!

ದಾಟ್ಕಂಡ್ ಕಿತ್ತೋರ್ 
ಕೈನ ಪರ್ಚಿ
ಶಾಪ ಹಾಕ್ಸೊಂಡ್ ಕಳ್ಳಿ
ಅದ್ನೇ ನಂಬಿ
ಹಬ್ಕೊಂಡಿತ್ತು
ಪಾಪ ಮಲ್ಲಿ ಬಳ್ಳಿ...!!

ಮೇಲ್ಮೇಲ್ ಹೆಂಗೋ
ಆಳ್ದಾಗ್ ಹಂಗೇ
ಬೇರೂ ಬಿಗಿಯಾಗೈತೆ,
ತವ್ರಿಗ್ ಬಂದ್ ಮಗ್ಳೂ ಪಟ್ಳು-
ಆಸೆ; ಸಂದಾಗೈತೆ!!

ಅಣ್ಣ ಬೇರಿಗ್ ಚೂರಿ ಹಾಕಿ
ಕಿತ್ಕೊಟ್ನೊಂದ್ ಕಡ್ಡಿ
ಕೇಳಿಲ್ವೇನೋ ಪಾಪ ಅವ್ನ್ಗೆ
ಕಣ್ಣೀರ್ ಹಬ್ಸಿದ್ ಸುದ್ದಿ!!

ಮಲ್ಲಿ ಬೇರಿಗ್ ಅಂಟ್ಕೊಂಡಿತ್ತು
ಕಳ್ಳೀದ್ ಒಂದಿಷ್ಟ್ ಬೇರು
ಒಂದೇ ಮಣ್ಣ ಹಂಚ್ಕೊಂಡ್ ಬೆಳ್ದೋ
ಬ್ಯಾರೆ ಮಾಡೋರ್ಯಾರು?!!

ಮಗ್ಳು ಹಿತ್ಲಾಗ್ ಬಿತ್ತಿದ್ ಬಳ್ಳಿ
ಹೂವ ಏನೋ ಬಿಡ್ತು
ಸುತ್ತ ಹಬ್ಬಿದ್ ಕಳ್ಳಿ ಮುಳ್ಳು
ಕೈಯ್ನ ಚುಚ್ಚ್ತಾಯಿತ್ತು;

ಕಳ್ಳೀನ್ ಕಿತ್ತ್ರೆ ಮಲ್ಲಿ ಇಲ್ಲ
ಮಲ್ಲೀನ್ ಕಿತ್ತ್ರೆ ಕಳ್ಳಿ
ಎಲ್ಲಿ ಋಣ ಗಂಟ್ಬೀಳ್ತದೋ
ಹೇಳೋರ್ಯಾರು ಹೇಳಿ?!!

                      -- ರತ್ನಸುತ

1 comment:

  1. ಗ್ರಾಮೀಣ ಸೊಗಸಿನ ಮುದನೀಡುವ ರಚನೆ.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...