Monday 12 August 2013

ಇಷ್ಟವಾಗುತ್ತಾಳೆ ಅವಳು !!!

ದೀಪಾವಳಿಗೆ ಸುಟ್ಟ ಕಜ್ಜಾಯ
ಮುಗಿಯುತ್ತಾ ಬಂದಿರಲು
ಕೊನೆಗುಳಿದೊಂದನು ಮನಸಾರೆ ಸವಿದಂತೆ

ಪಕ್ಕದ ಬೀದಿಯ 

ಖಾಲಿ ಸೀಸಾ ಅಂಗಡಿಗೆ ಓಡಿ 
ಹಳೆ ತಗಡು ಡಬ್ಬ ಮಾರಿ, ಹತ್ತಿ ಮಿಠಾಯಿ ತಿಂದಂತೆ 

ಹಸಿದಾಗ ಪಾತ್ರೆ ತೀಡಿ
ಸಿಕ್ಕ ಮುಷ್ಟಿಯಷ್ಟು ಅನ್ನವ
ನೀರು ಮಜ್ಜಿಗೆಯೊಡನೆ ಕಲೆಸಿ, ಸೊರೆದುಕೊಂಡು ಕುಡಿದಂತೆ

ರಾಮನವಮಿ ಬೇಸಿಗೆಯ
ದಾರಿ ಮಧ್ಯದಲಿ ಸಿಕ್ಕ 
ಗುಡಿಯಲ್ಲಿ ಹಂಚುತಿದ್ದ ಬೆಲ್ಲದ ಪಾನಕದಂತೆ

ದಿನಸಿ ಕೊಂಡು ತಂದು 
ಮಿಕ್ಕ ಚಿಲ್ಲರೆಯ ಮರಳಿಸಲು 
ಕಿಸೆಯಲ್ಲಿ ಒಂದು ನಾಣ್ಯ ಅರಿವಿಲ್ಲದೆ ಉಳಿದಂತೆ

ದೂರ ನೆಂಟರು ಸಿಕ್ಕಿ 
ಮುದ್ದು ಮಾತನಾಡಿಸಲು
ನಾಚಿಕೊಂಡು ಬುಜಕೆ ಅಪ್ಪಳಿಸುವ ಪುಟ್ಟ ಮಗುವಂತೆ

"ಶುಭಂ"ಗೊಂಡ ಸಿನಿಮಾದಂತೆ
ಖಾಯಂಗೊಂಡ ನೌಕರಿಯಂತೆ
ನೋಯುವ ಮೈಯ್ಯಿಗೆ ಸಿಕ್ಕ ಮೆತ್ತನೆಯ ಹಾಸಿಗೆಯಂತೆ!!!

                                                            --ರತ್ನಸುತ

1 comment:

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...