ಮನೆಗೊಂದು ಬಾಗಿಲು, ಅಜ್ಜಿಯೂ ಇರಬೇಕು !!

ಯಾವ ಪ್ರಶ್ನೆಗೂ ಸಿಗದ ಉತ್ತರ 
ಸಿಕ್ಕರೂ ಅದು ಅಸಮಂಜಸ 
ವಿನಾಕಾರಣ ನಗು, ಕಣ್ಣೀರು 
ತನ್ನಿಷ್ಟದ ಮಾತು, ರಾಗ, ತಾಳ 

ತಲೆ ತುಂಬ ಬೆಳ್ಳಿ ಕುರುಳು 
ಎಲ್ಲೋ ಒಂದೆರಡು ಉಳಿದ ಹಲ್ಲು 
ಸುಣ್ಣಗಾಯಿ ತೀಡಿ-ತೀಡಿ ಬಿಳಿ ತೋರ್ಬೆರಳು 
ದಿನವಿಡೀ ಕುಟ್ಟಾಣಿ ಕುಟ್ಟುವಳು 

ಸೊಂಟಕ್ಕೆ ಸಿಕ್ಕಿಸಿದ ತಾಂಬೂಲ ಚೀಲ 
ಎಲೆ, ಅಡಿಕೆ, ಕಡ್ಡಿಪುಡಿ, ಹೊಗೆ ಸೊಪ್ಪು 
ಚಲಾವಣೆಯಲ್ಲಿಲ್ಲದ ಒಂದು ಪೈಸೆಯಿಂದ್ಹಿಡಿದು 
ನಾಲ್ಕಾಣಿಯ ಹಿಡಿ ಚಿಲ್ಲರೆ 

ತಾತ ಕೊಡಿಸಿದ ಜೋಡಿ ಮೂಗುತ್ತಿ 
ಬಿಳಿ ಕಲ್ಲ ಓಲೆ, ಚಿನ್ನದ ಸರ 
ಕಿತ್ತುಕೊಂಡ ಕುಂಕುಮ, ಹೂವು 
ಮಿಂಚು, ಸಿಂಗಾರ 

ಆದ ವಯಸ್ಸಿಗೆ ಪ್ರತಿಬಾಗಿದ ಬೆನ್ನು 
ಅರುಳು-ಮರುಳು ನೂರರ ಅಂಚು 
ಮಿತಿ ಓಡಾಟ, ಆಹಾರ, ಕಾಫಿ-ಟೀ 
ಸೆಂಚುರಿ ಹೊಡೆವಳು ಗ್ಯಾರಂಟೀ 

ಸಾಯುವಳೆಂದು ಅಪ್ಪನ ಮದುವೆ 
ಮಾಡಿಸಿ ಸತ್ತನು ಆಗಲೇ ತಾತ 
ಸಾವಿನ ಕದವ ತಟ್ಟಿ ಬಂದು 
ತಾತನ ಪಟಕೆ ಮುಗಿದಿಹಳೀಕೆ 

ಮಗುವೊಂದಿರುವ ಹಾಗೆ ಮನೆಯೊಳಗೆ 
ಅವಲಂಬಿತ ಪ್ರತಿಯೊಂದಕ್ಕೂ 
ದೂರ ನೆಂಟರ ಗುರುತು ಹಿಡಿಯಲು 
ನಂಟು ಬೆಸೆಯಲು ಇವಳಿರಬೇಕು 

ನಮ್ಮ ನಾಳೆಯ ದರ್ಶನ ಇಂದೇ 
ಮಾಡಿಸುತಿರುವಳು ಉಚಿತದಲಿ 
ಕೊನೆ ಘಟ್ಟವ ತಲುಪಿಹಳು
ಬದುಕಿನ ಸಿಹಿ-ಕಹಿಗಳ ರುಚಿಸುತಲಿ .... 

                                    --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩