Friday 27 December 2013

ಜಾಯೆಯೆಂಬ ಮಾಯೆ!!

ತಾಂಬೂಲಕೆ ಸುಣ್ಣ ಹೆಚ್ಚಿ
ಕೆಂಪೇರಿ ಸುಟ್ಟ ನಾಲಿಗೆಯ
ಗಾಳಿಗೆ ಚಾಚಿ, ಸಕ್ಕರೆ-
ಅಕ್ಕರೆ ಬೀರುವಾಕೆ, ಭಾವ ನೌಕೆ 
 
ಬೇಕಿದ್ದ ಬೇಡದೇ ಪಡೆಯೆ 
ಗುನುಗದೆ, ಗೊಣಗದೆ
ಹೆಗಲ ಬಿಟ್ಟಿಳಿಯದೆ 
ಅಂಟಿ ಕೂರುವಾಕೆ, ಮುದ್ದು ಕೂಸು   
 
ಮುನಿಸಿನ ಜೊತೆಗೂಡಿ 
ಮಾತಿನೊಡನೆ ಕಣ್ಣ ಮುಚ್ಚಾಲೆ-
ಆಡುತಲೇ ಕೊನೆಗೆ ತಾನೇ 
ಸೋಲೊಪ್ಪುವಾಕೆ, ಆಲೆಯ ಜಲ್ಲೆ 
 
ಭೇದವಿಲ್ಲದ ಬೆವೆರ 
ಕೊಡಿಸುವ ಕಾಯಕದಿ 
ಸಮಪಾಲು ಬೆಂಬಲವ 
ಸೂಚಿಸುವಾಕೆ, ಕಾರ್ಯೇಷು ದಾಸಿ 
 
ನರಕ ನಾಕದ ನಡುವೆ 
ಜೀಕು ಉಯ್ಯಾಲೆಯಲಿ 
ಶಿಥಿಲಗೊಳ್ಳದ ಹಿಡಿಗೆ 
ತಡೆಯೊಡ್ಡದಾಕೆ, ನೆರಳಿನ ಸಾಥಿ
 
ಒಗಟಾಗಿಯೇ ಉಳಿದು 
ಬಾಳೆಂಬ ಒಗಟನ್ನು-
ಬಿಡಿಸುತಲೇ ತನ್ನಿಲುವ 
ಸಾಬೀತು ಪಡಿಸುವಾಕೆ, ಬಾಳ ಕನ್ನಡಿ 

ಹೊರೆಗಳಿಗೆ ತೊರೆಯಾಗಿ
ಹರಿದಲ್ಲಿ ಚಿಗುರಾಗಿ
ಹರಿಣಿಯೇ ತಾನಾಗಿ
ಎದೆಯಲ್ಲಿ ಜಿಗಿದಾಕೆ, ಪದ ವೈಖರಿ

ಅಳಿದರೂ ಮುಗಿಯದ 
ನೆನಪುಗಳ ಬಿಡಿ ಹೂವ 
ಉಚಿತ ಕಟ್ಟಿ ಕೊಟ್ಟ 
ಹೂವಾಡಗಿತ್ತಿ, ರಮ್ಯ ಕಾದಂಬರಿ 

                         -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...