ಮೌನ ಮುರಿದ ಮರುಗಳಿಗೆ !!

ಅಕ್ಕ ನೋಡೆ, ಅವನೇ ನನ್ನವ 
ನನ್ನ ಎತ್ತಿ, ಬಳಸಿ, ಕುಕ್ಕಿ 
ಮೈಯ್ಯೆಲ್ಲ ನೇವರಿಸಿ, ಹಿಂಡಿ 
ಹುಣ್ಣಾಗಿಸಿದವ, ಹಣ್ಣಾಗಿಸಿದವ 

ಇದಕ್ಕೂ ಮೊದಲು ನಾ ಕಲ್ಲು 
ಆಕಾರವಿಲ್ಲದ ಜಡ ಕಲ್ಲು 
ಎಲ್ಲರೂ ಕಂಡದ್ದು ಅಂತೆಯೇ 
ಈತನೇ ಅದರೊಳಗೆ ನನ್ನ ಕಂಡವನು 

ಎಷ್ಟು ಜೋಪಾನ ಮಾಡಿದ ಗೊತ್ತೇ?
ನಿರ್ಜೀವಿ ನನಗೆ ತವಕ ಹುಟ್ಟಿಸಿದ 
ಉಸಿರಾಡಲು, ಹೆಸರಾಗಲು 
ಕಣ್ಣಲ್ಲೇ ಚಪ್ಪರವ ಕಟ್ಟಿ ಮೈನೆರೆಸಿದಾತ 

ಈತನ ಜೊತೆ ಕಳೆದ ಆ ರಾತ್ರಿ
ನಿದ್ದೆಗೆಟ್ಟು ಕಣ್ಣ ಕೆತ್ತಿಸಿಕೊಂಡ ಪರಿ!!
ಆಗಲೇ ನಾ ಇವನ ಕಂಡು ನಾಚಿದ್ದು 
ನಾ ಹೆಣ್ಣೆಂದು ತೋಚಿದ್ದು!!

ನನ್ನೊಂದಿಷ್ಟೂ ಮರೆಮಾಚದೇ 
ಅಂದವ ಸಂಪೂರ್ಣ ಗ್ರಹಿಸಿದಾತ 
ನನ್ನೆದೆಗೆ ಉಳಿಯಿಟ್ಟ ಚೋರ 
ತುಟಿ ಪಕ್ಕ ಚುಕ್ಕೆಯೇ ಭಾರ 

ಇಂದು ನೋಡೆ ಅವನಲ್ಲಿ, ನಾನಿಲ್ಲಿ 
ನನ್ನ ಕೈಗಳ ಕಟ್ಟಿ ಆತ ಜೋಡಿಸಿಹನು 
ಹೆಣದ ಮೇಲೆ ಸತ್ತ ಹೂವಿಗೆ ತಾನು 
ಬೊಗಸೆಯೊಡ್ಡಿ ಬೇಡಿ ಕಾದಿಹನು 

ನನ್ನ ತಾಕುವ ಜನ, ನನ್ನವರಲ್ಲ 
ನನ್ನಂತರಂಗವ ಬಲ್ಲವರಲ್ಲ 
ನಾನಿಲ್ಲಿ ಪ್ರದರ್ಶನದ ವಸ್ತು ಮಾತ್ರ 
ನನ್ನ ಹೆಸರಲ್ಲಿ ಅಗೋ ಧರ್ಮ ಚತ್ರ 

ಹೊರಟ ನೋಡೆ ಅಕ್ಕ, ತಡೆ ಅವನ ಚೂರು 
ಹೇಳಲು ಉಳಿದ ಮಾತುಗಳಿವೆ ನೂರು 
ದೇವರಾಗುವ ಮುನ್ನ ನಾ ಅವನ ದಾಸಿ 
ಈಗಲೂ ಅವನಲ್ಲೇ ಮನಸಿಟ್ಟ ಪ್ರೇಯಸಿ 

ಯಾಕೆ ಅಕ್ಕ ನಿನಗೆ ಕಣ್ಣಲ್ಲಿ ನೀರು?
ನಿನ್ನ ಮನಸಲ್ಲಿನ್ನೂ ಉಳಿದವನು ಯಾರು 
ನನ್ನವನೇ? ಹಾಗಿದ್ದರೆ ನಾ ನಿನ್ನ ಸವತಿ?
ನಿನ್ನ ಕಥೆ ಹೇಳೆ, ಕೇಳೋಣ ಪೂರ್ತಿ 

//ಮೌನ ಮುರಿದ ಮರುಗಳಿಗೆ//

ತಂಗಿ ಕೇಳೆ, ನಿನ್ನವನೇ ನನ್ನವ...... 

                                  -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩