ಎಲ್ಲ ಹೇಳಾಗಿದೆ !!

ತಾವರೆ ಎಲೆ, ಮೇಲೆ 
ಕಂಡ ಆ ಲೋಕವ 
ಅದರಡಿಯ ಕೆಸರಿಗೆ 
ವರ್ಣಿಸದೆ ಉಳಿಯಿತು 
ಕೆಸರೆಡೆಗೆ ಮುಖ ಮಾಡಿ 
ಕಚ್ಚಿ ಉಳಿದ ಕಾಂಡ-
-ದ ವೇದನೆಯ ತಾನು 
ಬಚ್ಚಿಟ್ಟುಕೊಂಡಿತು 
 
ಚಾಚಿ ಅರಳಿದ ಹೂವು 
ಗೀಚಿಕೊಂಡಿತು ಓಲೆ 
ಮರುಳಾಗಿ ಮರದ 
ಕೋಗಿಲೆ ಹಾಡಿಗೆ 
ಕೊಕ್ಕರೆಯು ದಾಪು- 
-ಗಾಲಲಿ ಬೇರ ಕೆದಕಿತು 
ಕಚಗುಳಿಯ ಭಾವ 
ದಳಗಳಿಬ್ಬನಿಗೆ 
 
ತಾನೊಬ್ಬ ನೆಂಟ 
ಮೊಗ್ಗನರಳಿಸಿದವ 
ದಂಡೆ ಮೇಲೆ ಕೂತು 
ಬಿಡಿಸಿದ ಚಿತ್ರ 
ಆಕೆಯೋ ಆತನ 
ಕಂಡಾಗಿನಿಂದಲೇ 
ಗುಟ್ಟಾಗಿ ಬರೆದು-
-ಕೊಂಡಳು ಪ್ರೇಮ ಪತ್ರ  
 
ಸಂಜೆ ತಂಪಿಗೆ ತಾನು 
ಮೈದೆರೆದ ಹೂವು  
ಕರಿ ಕಂಬಳಿಯ 
ಹಿಡಿದು ಸಜ್ಜಾಗಿರೆ 
ಗೆಜ್ಜೆ ಸದ್ದನು ಮಾಡಿ 
ಸೆರಗು ಹಾಸಿದ ನಾರಿ 
ಅಲ್ಪ ಸುಖ ನೀಡಿ 
ಆಗಲೇ ಕಣ್ಮರೆ 
 
ಗೂಬೆಗಣ್ಣಿಗೆ ಬಿದ್ದು 
ಇನ್ನಿಲ್ಲವಾದ ನೊಣ 
ಮಾದರಿ ಆಯಿತು 
ತನ್ಮುಂಪೀಳಿಗೆಗೆ 
ವಾರವಾಯಿತು ಒಣಗಿ 
ತೆಂಗಿನ ತೆಕ್ಕೆಯ 
ಬಿಟ್ಟು ಬೀಳದ ಗರಿಯು 
ಒಲೆ ಸೇರೋದ್ಹೇಗೆ?
 
ಬಾನ ಸವರಿ ಹೊರಟು
ಪಡುವಣದ ಎದೆಗೊಂದು 
ಗಾಯ ಮಾಡಿತು ಅಲ್ಲಿ 
ಮುಳುಗಡೆಯ ಸೂರ್ಯ 
ಶಿಳ್ಳೆ ಹೊಡೆಯುತ ಮೇಲೆ 
ಏರು ದೀಪದ ಬತ್ತಿ 
ಹುಚ್ಚು ಕೋಡಿ ಬಯಕೆ 
ಜೊತೆ ಕೆಟ್ಟ ಪ್ರಾಯ 
 
ಹೇಳಿ ಹೊರಟರೆ ಮುಂದೆ 
ನಾಚಿಕೆಯ ಬೇಲಿ 
ನುಲಿದ ಬೆರಳು ಚೂರು 
ಹಿಂಜರಿದಿದೆ 
ಗುಟ್ಟುಗಳು ನನ್ನಲ್ಲಿ 
ಬೆಚ್ಚಗಿವೆ ಮಲಗಿ 
ಇಷ್ಟು ಹೇಳಲು ಎಲ್ಲ 
ಹೇಳಾಗಿದೆ!!

             -- ರತ್ನಸುತ  

Comments

  1. ಹೇಳದಿದ್ದರೂ ಇನಿತೂ ಬಾಯ್ತೆರೆದು, ಹೇಳಲ್ಪಟ್ಟ ಶತ ಭಾವಗಳು ಸಾದೃಶವಾದವು ಭರತ ಮುನಿಗಳೇ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩