ಆ ಮೂವರ ನಡುವೆ !!!

ಒಂದು, ಎರಡು, ಮೂರು 
ಮರಳಿ ಒಂದರಿಂದ ಶುರು 
ನಾಲ್ಕೈದಾರರ ಸರದಿ?
ಇನ್ನು ಮಿಕ್ಕವುಗಳ ವರದಿ?
ಇದ್ದೂ ಇರದಂತಿದ್ದವು 
ಇದ್ದೇನು ಲೆಕ್ಕ!!
ಲೆಕ್ಕದಲಿ ಪಾಲ್ಗೊಳ್ಳದ ಅಂಕಿ
ಫಲಿತಾಂಶದಲಿ ಇಣುಕೋ ಮೂಖ ಪ್ರೇಕ್ಷಕ
 
ನಾಲ್ಕು ಸದಾ ನೆರಳಾಗಿತ್ತು 
ಮೂರರ ಪಾಲಿಗೆ 
ಮೀರುವ ತವಕವಿದ್ದರೂ, ಅದಕೆ- 
ಸಿಕ್ಕ ಪಟ್ಟವೇ ಬೇತಾಳ 
ಅದರ ಹಿಂದಿನವುಗಳ ಅಬ್ಬರ, 
ಅಬ್ಬಬ್ಬಾ ಒಬ್ಬಿಬ್ಬರಾ?!!
ಎಷ್ಟೇ ಆಗಲಿ, ಲೋಕದ ಕಣ್ಣಿಗೆ 
ಉತ್ತಮರು ಆ ಮೂವರೇ!!
 
ಒಂದಕ್ಕೆ ಒಮ್ಮೆ ಕನಸು ಬಿತ್ತು 
ಎರಡರೆದುರು ಸೋತಂತೆ 
ಎರಡಕ್ಕೂ ಅದೇ ಥರದ ಕನಸು 
ಮೂರರೆದುರು ಸೋತಂತೆ 
ಮೂರಿಗೆ ಇಬ್ಬರನ್ನೂ ಗೆದ್ದಂತೆ 
ಬೊಗಸೆ ಮೀರುವಷ್ಟು ಕನಸು 
ಇನ್ನುಳಿದವುಗಳ ಕನಸು?
"ಬಿಡಿ, ಯಾತಕ್ಕೆ ಕಾಲಹರಣ!!"
 
ಕೊನೆಗುಳಿದ ಅಂಕಿಗೆ ತನ್ನ-
ಯಾರೂ ಮೀರಿಸಲಾರರೆಂಬ ಪೊಗರು 
ಆ ಪೊಗರನ್ನು ಮೀರಿಸುವ ಸಲುವೇ 
ಕೊನೆಗೊಂದು ಸೊನ್ನೆ 
ಮತ್ತಷ್ಟು ಪೈಪೋಟಿ, ಮತ್ತಷ್ಟು ಓಟ 
ಮೊದಲಿದ್ದ ಸೊನ್ನೆಗೆ ಬೆಲೆ ಕಡಿಮೆ 
ಕೊನೆ-ಕೊನೆಗೇ ಹೆಚ್ಚು ಮಹಿಮೆ 
ಇದೇ ಭಾರತೀಯರ ಹಿರಿಮೆ!!
 
ಅನಂತಾನಂತ ಲೆಕ್ಕಾಚಾರದಲ್ಲಿ 
ಪ್ರಚಾರಕ್ಕೆ ಸಿಕ್ಕವು ಅನೇಕ 
ವಿಚಾರಕ್ಕೆ ಸಿಕ್ಕವು ಅನೇಕ 
ಆದರೂ ಆ ಮೂವರೇ ಪ್ರತ್ಯೇಕ 
ಮೊದಲೆಲ್ಲಿಂದಲೇ ಆಗಿರಲಿ,
ಎಲ್ಲೇ ಕೊನೆಗೊಂಡಿರಲಿ 
ಚಿನ್ನ, ಬೆಳ್ಳಿ, ಕಂಚಿನ ಬಿಲ್ಲೆ
ಕುಗ್ಗಿದ ಆ ಮೂವರ ಕೊರಳಿಗೇ!!

ನಾನೆಂಬವ ನಾಲ್ಕನೆಯದರಲ್ಲಿ 
ಒಂದು ಸಣ್ಣ ಚುಕ್ಕಿ ಭಾಗ 
ಅವಗೆ ಮೂರರಲ್ಲಿ ಒಂದನ್ನು
ದಕ್ಕಿಸಿಕೊಳ್ಳುವ ಹುಂಬ ರೋಗ
ಇದ್ದಲ್ಲೇ ಉಳಿದು ತಟ್ಟುವ ಚಪ್ಪಾಳೆ 
ಗಿಟ್ಟಿಸಿಕೊಳ್ಳುವಲ್ಲಿ ಸೋತಿದ್ದರೂ 
ಸೋತವರಲ್ಲಿ ಉತ್ತಮನೆಂಬ 
ತೃಪ್ತಿಗೂ ಇದೆ ಅವನಲ್ಲಿ ಜಾಗ!!
 
                           -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩