ಅನಾಮಿಕ ಗೆಳತಿ!!

ಕಡಲ ತೀರದಲ್ಲಿ ಗೀಚೆ 
ಅಳಿಸಿ ಹೋಗುತ್ತಿತ್ತು ಹೆಸರು
"ಅನಾಮಿಕ" ಎಂದು ನಿನಗೆ
ನಾಮಕರಣ ಮಾಡುವಾಸೆ


ಕತ್ತಲ ಹಂಬಲಿಸಿದ ಮನ 
ಏಕಾಂತದಿ ಮರುಗಿರಲು 
ಬೆಳಕ ತಂದ ಗೆಳತಿ ನಿನ್ನ 
"ಪ್ರಣತಿ" ಎಂದು ಕರೆವ ಆಸೆ 

ಬರಡು ಬಿರುಕಿನೆದೆಯ ಮೇಲೆ 
ಸೋನೆ ಪಸರಿ ಹೋದೆ ನೀನು 
ಮೇಘ ಸಾಲು ಸಾಲ ಕೊಟ್ಟ 
ಚಿತ್ತ ಮಳೆಯ ಮುತ್ತು ನೀ

ಅಡುಗೆ ಒಲೆಯ ಕಾವಿನಲ್ಲಿ 
ಚಿತ್ತು ಮಾಡಿ ಗೀಚಿಕೊಂಡ 
ಇದ್ದಲ ರೇಖೆಯ ರೂಪಿ 
ಕೃಷ್ಣವೇಣಿ ರಾಗಿಣಿ  

ನಿದ್ದೆ ತರಿಸದಂತೆ ಕಣ್ಣ 
ರೆಪ್ಪೆ ಮೇಲೆ ನಾಟ್ಯವಾಡಿ 
ಹೆಜ್ಜೆ ಗುರುತ ಬಿಡದೆ ಹೋದ 
ಮತ್ಸಕನ್ಯೆ ನೈದಿಲೆ 

ಎಲ್ಲೇ ಹೋದರಲ್ಲಿ ನಿನ್ನ 
ಬೇಡಿ ಕಾಡುತಿತ್ತು ನೆರಳು 
ವಶೀಕರಣ ಮಾಡಿಕೊಂಡ 
ಮಾಯಗಾತಿ ಅನ್ನಲೇ?

ಸುತ್ತ ಮುತ್ತ ಘಮಲು ಸೂಸಿ 
ಪಾನಮತ್ತ ಮಾಡಿದವಳೇ 
ಗತ್ತಿನಲ್ಲಿ ಮೆಟ್ಟಿ ನಿಂತ 
ಷೋಡಶಿ ಶಿರೋಮಣಿ 

ಕುಂಬ ತುಂಬ ಪಾನಕಕ್ಕೆ 
ಬೆಲ್ಲ ಹೆಚ್ಚು ಬೆರೆಸಿ ತಂದು 
ಕಾಣದಂತೆ ರುಚಿಸಿ ಕೊಟ್ಟ 
ದೈವ ರೂಪಿ ಕನ್ಯೆ ನೀ

ಚಿಗುರು ಮೀಸೆ ಹೈದನಲ್ಲಿ 
ಪ್ರೌಢತನದ ಮಿಂಚು ಹರಿಸಿ 
ಪೋಲಿ ತುಂಟನೆಂದು ಕರೆದ 
ಪ್ರಣಯರಾಣಿ ಕಾಮಿನಿ 

ನಾಲ್ಕು ಮಾತಿನಲ್ಲೇ 
ನಾಕವನ್ನು ತೋರಿದವಳು ನೀನು 
ಮಾಯೆ, ಜಾಯೆ, ತಾಯೇ 
ಬಾಳ ಕಟ್ಟಿಕೊಟ್ಟ ಮಾಲಿನಿ 
                  
                        -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩