ಹೂಕಲ್ಲು

ಮನಸಿನ ಸ್ತಬ್ಧ ಕೊಳದಲ್ಲಿ
ಒಗೆದ ಕಲ್ಲು
ರಿಂಗಣದ ಅಣುವಾಗಿ
ತಾಳವಿಲ್ಲದ ತಳವ
ಎಷ್ಟು ಬೇಗ ಸೇರುವುದೋ
ಅಷ್ಟೇ ಸಲೀಸಾಗಿ
ಅಲೆಗಳೂ ಸಾಯುವುದು
ಸುಳುವಿಲ್ಲದಂತೆ

ಅದೇ ಮನದ ಕೊಳದಲ್ಲಿ
ತೇಲಿ ತಾ ನೀರ ಹೂ 
ಮಜಲುಗಳಲಿ ಮಂದಗತಿಯ
ಬಿನ್ನು ಹತ್ತಿ ವಿಹರಿಸುವುದು
ಸಣ್ಣ ತಲ್ಲಣಗಳ ಬಿಡಿಸಿ
ಪ್ರಶಾಂತತೆಯ ಕೆಣಕುವುದು 
ಕೊಳದ ನಿದ್ದೆ ಕೆಡಿಸುವುದು
ಮುದ್ದೆಗಟ್ಟಿ ಮಡಿವನಕ 

ಒಗೆದ ಕಲ್ಲು ಗುಪ್ತ ತಾನು 
ಮುಳುಗಿಸಿದೊಡಲ ಪಾಲಿಗೂ 
ಪಡೆವುದು ಹೊಸ ಆಕಾರ 
ನೀರ್ಹರಿವಿಗೆ ಸಿಕ್ಕಿ 
ಕೊಳ ಕೊಳವಾಗಿ ಉಳಿಯದೆ 
ಕಡಲಾಗುವ ಹೊತ್ತಿಗೆ 
ಎದ್ದ ಅಲೆಯ ಜೊತೆಗೆ ಕದ್ದು 
ತಾ ತೀರವಾಗಬಹುದು 

ಕೊಳೆತ ಹೂವ ಮುಕ್ತ ಭಾವ 
ನೆನ್ನೆಗೆ
ಇಂದಿಗೆ? ನಾಳೆಗೆ?
ಹೂವ ನಾರು ನಾರಬಹುದು 
ಬಿಟ್ಟು ಕೊಡದ ಕೊಳದಲಿ 
ಒಂದರ ಸಾವಿನ ಹಿಂದೆ 
ಸಾವಿರದ ಸಾವಿರ ಹೂ-
-ಗಳಿದ್ದರೆ? ಇರದಿದ್ದರೆ?

ಕಲ್ಲು ಕಲ್ಲೇ 
ಹೂವು ಹೂವೇ 
ಕಲ್ಲಿನೊಳಗೊಂದು ಹೂವು
ಹೂವಿನೋಳಗೊಂದು ಕಲ್ಲು 
ಅವುಗಳೊಳಗಿನ ಸಮರ 
ಅದುವೇ ಅವುಗಳಸ್ತಿತ್ವ
ಕಾಲ ಕಾಲಕೆ ಅವವುಗಳಿಗಿದೆ 
ಅವುಗಳದ್ದೇ ಮಹತ್ವ ...... 

                    -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩