ನಾ ನಿಜಕ್ಕೂ ಬದಲಾದವ?!!

ಮೌನ ನಿನಗೆ ಒಪ್ಪುತ್ತದೆ
ಅದರ ಆಚರಣೆಯ ಭರದಲ್ಲಿ
ಮಾತುಗಳ ಕಟ್ಟಿ 
ಮೂಲೆಗುಂಪು ಮಾಡಿದ ನಿನ್ನ 
ಮಾತನಾಡಿಸಿದಷ್ಟೂ ಸಿದ್ಧಿಸದ-
ಉತ್ತರ, ಸಮ್ಮತಿಯೋ?
ನನ್ನ ಕಣ್ತಪ್ಪಿಸಲು ನೆಪವೋ?
ಅಥವ ಘೋರ ಜಪವೋ?
 
ಹೆಜ್ಜೆ ಗುರುತ ಬಿಟ್ಟು ಹೋದೆ 
ಒಗಟಿಗೆ ತಿರುವು ಕೊಟ್ಟು 
ಹಿಂಬಾಲಿಸಲೆಂದೇ?
ಸಂಬಾಳಿಸಲೆಂದೇ?
ನಾನಂತೂ ಎರಡೂ ಮಾಡದೆ 
ಮಗ್ನನಾಗಿ ಕಾಯುತ್ತ ಕುಳಿತೆ 
ಆ ಗುರುತುಗಳನ್ನೇ ಹೊಣೆ ಮಾಡಿ 
ನಿನ್ನ ಸೇರದ ಸೋಲಿಗೆ 
 
ಅದೆಷ್ಟೋ ಬಾರಿ ನೀ 
ಮೌನದಲ್ಲೇ ಕಪಾಳಕೆ ಬಾರಿಸಿದ್ದೆ!!
ಅದು ನನಗೆ ಸಿಹಿ ಮುತ್ತಾಗಿತ್ತು 
ತೇಲಾಡಿಸುವಷ್ಟು ಮತ್ತಾಗಿತ್ತು 
ಹಸಿದ ಮನಸಿಗೆ, ಕಾದ ಕನಸಿಗೆ 
ಹೊಟ್ಟೆ ತುಂಬಿಸುವ ತುತ್ತಾಗಿತ್ತು 
ನಿರ್ಗತಿಕನ ಪಾಲಿಗೆ 
ಕೂಡಿಟ್ಟ ಸ್ವತ್ತಾಗಿತ್ತು 

ನೀ ಜಗ್ಗಿದ ತುಟಿಗೆ 
ನಾ ತುಂಡಾಗುವ ಭೀತಿಯಲ್ಲಿ 
ಕಣ್ಣು ಮುಚ್ಚಿದ ನೆನಪು 
ಪ್ರಸ್ತುತದಲ್ಲೂ ಕಣ್ಮುಂದಿದ್ದಂತಿದೆ 
ನೀ ಹೆಸರ ಮರೆತಾಗ 
ನಾ ನಕ್ಕು ತೊದಲಿದ್ದು 
ನೀ ಗೊತ್ತಿದ್ದೂ ಮರೆತಂತೆ ನಟಿಸಿದ್ದು 
ನನಗೂ ಗೊತ್ತಿತ್ತು, ನಾನೂ ನಟನೇ?!!

ಕಣ್ಣಂಚಿನ ಹನಿಯ 
ಕಿರುಬೇರಳಿಂದ ಮೀಟಿ 
ಅಂಗಿಗೆ ಒರೆಸುವಾಗ
ಸಿಕ್ಕಿ ಬಿದ್ದ ನನಗೆ 
ಅದು ನಿನ್ನ ಬೀಳ್ಗೊಡುಗೆಗೆ  
ಗುರುತೆಂದು ಹೇಳುವ ತಾಕತ್ತು 
ಇರಲಿಲ್ಲವೆಂಬ ವಿಷಯ 
ನಿನಗೂ ತಿಳಿದಿತ್ತು?

ಇದ್ದಷ್ಟೂ ದಿನ ನೀ ಮೌನಿ
ನೆನಪಲ್ಲಿ ನಿನ್ನ ಮಾತಿಗೆ ತಲೆ ಬಾಗಿ 
ಮೌನಕ್ಕೆ ವಾಲೀರುವೆ,
ಅನುಚಿತವೆನಿಸಿದರೂ ನಿಜವಾಗಿ 
ನಾನು ನಾನೆಂಬ ಸತ್ಯ 
ನಿನಗೂ ಸುಳ್ಳನಿಸಬಹುದು 
ಒಮ್ಮೆ ಧಾವಿಸು, ಕಣ್ಹಾಯಿಸು 
ನಿನಗೆ ಯೋಗ್ಯನಾಗಬಹುದು, ನಾ ಈಗಲಾದರೂ..............?!!
 
                                                -- ರತ್ನಸುತ 

Comments

  1. ಮೌನಿಗೆ ಮೌನದೇ ಉತ್ತರ, ನಿರೀಕ್ಷೆ ನಿರಂತರ...
    ಇಷ್ಟವಾಯಿತು 

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩