ಕೂಗಿಗೆ ಕಾಯದೆ ಎಚ್ಚರವಾಗಿ !!

ಕಥೆಗಳು ಇನ್ನೆಷ್ಟು ದಿನ
ತುಂಬಿಸಬಲ್ಲವು ಹೊಟ್ಟೆಯ?
ಎಲ್ಲಕ್ಕೂ ಅಂತ್ಯವಿದೆ!!
 
ಮೋಡಕ್ಕೂ ಮೈ ಭಾರವಾದಾಗ 
ಸೋ ಎಂದ ಸುರಿ ಮಳೆಗೆ 
ಭೂಮಿ ತತ್ತರಿಸುವುದು ಸತ್ಯ 
ಭ್ರಮೆಗಳೆಲ್ಲ ಹನಿಗೆ ಸಿಕ್ಕಿ
ಮುದ್ದೆಯಾಗುವ ಕಾಗದದ ದೋಣಿಗಳಷ್ಟೇ!!
 
ಬೇಡಿಕೆಯಿಟ್ಟ ಕೈಗಳಿಗೆ 
ಬಾಚುವುದೇನು ದೊಡ್ಡ ಮಾತು?
ಬೆನ್ನಿನ ತುರಿತಕೆ ಎಟುಕದ ಉಗುರು  
ಎದುರಿಗಿದ್ದ ಬೆನ್ನ ಪರಚಲು ಎಷ್ಟು ಹೊತ್ತು?
 
ಕಂಬನಿ ಜಾರಿ ತುಟಿ ಹೊಕ್ಕಾಗ 
ನಾಲಿಗೆ ಚಪ್ಪರಿಸಿ, ಕ್ಷಣ ನಿಲ್ಲುವ ಅಳು 
ಅದು, ದೈತ್ಯ ನೋವಿಗೆ ಆ ಒಂದು
ಹನಿಯ ಸವಾಲು, ಗೆದ್ದ ಪೊಗರು 
 
ಕೊಳೆತ ಕವಳದ ಮೇಲೆ 
ಅಂಡೆರಿಸಿ ಕೂತ ನೊಣಗಳಿಗೆ 
ನಾಳೆ ಕಾಣಬಹುದಾದ ಕ್ರೌರ್ಯದ ಪರಿವೇ ಇಲ್ಲ
ಹುಣ್ಣಲ್ಲಿ ನೆತ್ತರು ಕಾಯೋದಿಲ್ಲ 
 
ಗೋಳಾಡುವ ಕೊರಳು ಘರ್ಜಿಸಬಹುದು 
ಗೋವು ಹುಲಿಯಾಗಬಹುದು 
ಕೆಂಪು ಮಣ್ಣನು ಸೀಳಿ ಕುಡಿಯೊಡೆಯುವ ಬೀಜ
ಮಣ್ಣನೇ ನುಂಗಬಹುದು 
 
ಎಚ್ಚರವಾಗುವ ಕೂಗಿಗೆ ಕಾಯದೆ 
ಮುಂದಾಗಿಸಿ ಕೊಡುಗೈ ಚಾಚಿ 
ಹಸಿವಿನ ರೋಗಕೆ ವೈದ್ಯರು ಬೇಕೆ?
ಹಂಚಲು ನೀಡುವ ಶಿವ ಮೆಚ್ಚಿ !!

                                 -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩