೨೦೧೪ರ ಹೊಸ್ತಿಲಲಿ !!

ಹೊಸ ವರ್ಷದ ಮೊದಲ ದಿನ-
ಮಾತ್ರವೇ "ಹೊಸ ವರ್ಷ"
ಮಿಕ್ಕೆಲ್ಲವೂ ಅದೇ ಹಳೆ 
ಬಾಲಂಗೋಚಿಗಳು 
 
ಎಣಿಕೆಗೂ ಮುನ್ನ ಕಳೆವ 
ಇಣುಕಿಗೂ ಮುನ್ನ ಬರುವ 
ಆ ಮುಂದಿನ ದಿನಗಳ ಪಟ್ಟಿ 
ಸಿಕ್ಕಷ್ಟೇ ಸಲೀಸಾಗಿ ಕಳುವಾಗುವಂಥವು 
 
ನೆನ್ನೆ ಮೊನ್ನೆಯಷ್ಟೇ ೨೦೧೩ರರ 
ಅಭ್ಯಂಜನದಲ್ಲಿ 
ಶೀಗೇಕಾಯಿ ಕಣ್ಣಿಗೆ ಬಿದ್ದು 
ಅತ್ತ ಸದ್ದು ಇನ್ನೂ ಮಾಸಿಲ್ಲ 
 
ಅಂದು ತೊಟ್ಟ ಹೊಸ ಉಡುಪು 
ಬೀರೂವಿನಲ್ಲಿ ಹಾಗೇ ಇದೆ 
ಮಡಿಸಿಟ್ಟುದು ಮಡಿಸಿಟ್ಟಂತೆ
ಅದೇ ಹೊಸತು ವಾಸನೆಯ ಹೊತ್ತು 
 
ನೆನಪುಗಳೆಷ್ಟು ಉದಾರ!!
ಇಡಿ ಜೀವಮಾನದ ಸರಕು
ಜೊತೆಗೆ ಹೀಗೊಂದು ವರ್ಷದ- 
ಹಿಂದಿನವುಗಳಿಗೂ ಜಾಗ ಕೊಟ್ಟಿವೆ 
 
ಒಂದೊಂದನೂ ಮರುಕಳಿಸಲು 
ಉಳಿದಿರುವುದಿದೊಂದೇ ದಿನ 
ನಾಳೆ, ಎಲ್ಲವೂ ಹೊಸತು 
ಗೌಪ್ಯ, ಥೇಟು ನಾಳೆಗಳಂತೇ!!
 
ಕನ್ನಡಿಗೇಕೆ ಕಿರು ಪರಿಚಯ 
ಅದೂ ನನ್ನಂತೆ ಹಳಸು ವಸ್ತು 
ಕಣ್ಣೀರು ಉಪ್ಪುಪ್ಪಾಗಿಯೇ ರುಚಿಸಬಹುದು 
ತುಸು ನಗುವಿಗೆ ತುಟಿ ಜಗ್ಗಬಹುದು 
 
ಉತ್ಸಾಹಕ್ಕೇನೂ ಕುಂದಿಲ್ಲ 
ಆದರೆ ಉತ್ಸಾಹ ಪಡುವ ಯೋಗ್ಯತೆಯೇ-
ಒಂದು ಯಕ್ಷಪ್ರಶ್ನೆ 
ಚಿರಪರಿಚಿತ ನಿರುತ್ತರ ಪ್ರಶ್ನೆ 
 
ಬೇಡೆಂದರೆ ಬಾರದೆ ಉಳಿಯದು 
ದೊಣ್ಣೆ ನಾಯಕನಪ್ಪಣೆಗೆ 
ಬರಲಿ ಎಂದಿನಂತೆ 
ನಾನೂ ಬರಮಾಡಿಕೊಳ್ಳುವೆ ಹಿಂದಿನಂತೆ 
 
ಹರಿದು ಬರುವ ಶುಭಾಶಯಗಳೇ 
ಇಗೋ ನನ್ನ ಆಶಯ 
ಶುಭವೋ, ಅಶುಭವೋ 
ಜಾರಿಯಲ್ಲಿರುವುದು ಸಹಜ ಅಭಿನಯ 

                                -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩