ಕೊನೆ ಹನಿಗಳಲ್ಲೊಂದು ವಿನಂತಿ !!

ಈಗಾಗಲೇ ತಂಬಿಗೆ ತುಂಬ 
ನೋವುಗಳು ತುಳುಕಾಡಿ ಚೆಲ್ಲಾಡಿ 
ತೀಕ್ಷ್ಣಗೊಂಡಾಗಿವೆ 
ಅದಕೊಂದು ಮತ್ತಷ್ಟು ಸಿಂಪಡಿಸಿ 
ಮತ್ತೆ ಚೆಲ್ಲುವುದು ಬೇಡ 
ವರ್ಷ ಮುಗಿಯುವ ವೇಳೆ 
ಶುಚಿಗೈಯ್ಯೆ ಮನಸಿಲ್ಲ 
ಮಂಕು ಮನದೊಳಗೆ ಸ್ತಬ್ಧ ನಿರ್ಲಿಪ್ತತೆ 
 
ಕನಸುಗಳು ಕಾಲೂರಿ ಬೇಡಿ 
ನಿದ್ದೆಯಲ್ಲೊಂದಿಷ್ಟು ಜಾಗ ಪಡೆದು 
ಅಸ್ತಿತ್ವವುಳಿಸಿಕೊಂಡಾಗಿವೆ 
ಈ ನಡುವೆ ಚೂರು ಮೊಂಡಾಗಿವೆ 
ಜಾಗರೂಕನಾಗಿ ಅದನು 
ಸಂಬಾಳಿಸಿ ಬಂದಿರುವೆ
ಮುಂದುವರೆಯೆ ಬಿಡಿ ಮುಂದೆ 
ಹೊಂದುಕೊಂಡು ಅವುಗಳೊಡನೆ
 
ನಾನೆಷ್ಟೇ ತಿಳಿಗೇಡಿಯಾದರೂ 
ನನ್ನ ನಾ ಎಂದೂ ಕೊಲ್ಲುವಷ್ಟರ-
ಮಟ್ಟಿಗೆ ದ್ವೇಷಿಸಿದವನಲ್ಲ
ಹಾಗಂತ ಪ್ರೀತಿಸಿದವನೂ ಅಲ್ಲ
ಅದರ ನಡುವಿನ ಸಣ್ಣ ರೇಖೆಯ ಮೇಲೆ 
ಬಾಳು ಬೆಳೆಸಿದ ನಾನು 
ಯಾವುದರ ಪರವೂ ಅಲ್ಲ 
ವಿರೋಧಿಯೂ ಅಲ್ಲ 
 
ಹೀಗಿದ್ದೂ, ಹೀಗಿರುವುದರ ಪಾಲಿಗೆ 
ಅಸಮಾದಾನದ ಅಪಸ್ವರ ಎಬ್ಬಿಸದೆ 
ಸದಾ ಒಂದು ನಗೆ ಬೀರಿ 
ಬೆಂಬಲವಾಗಿದ್ದ ನನ್ನತನವ 
ಹೀಗೆ ಪೋಷಿಸಲು ಬಿಡಿ 
ಕಣ್ಣು ಮಂಜುಗಟ್ಟುವನಕ 
ಉಸಿರು ಭಾರವಾಗುವನಕ 
ಪ್ರಾಣ, ದೇಹ ತೊರೆವ ತನಕ 
 
ಆಗಾಗ ಅನಾಥ ಭಾವ ಶಿಶುಗಳ-
ಕಲೆಹಾಕಿ ಅಕ್ಷರದ ತುತ್ತಿಟ್ಟು 
ಸಾಲುಗಳ ನಿರ್ಮಿಸಿ 
ಚರಣವಾಗಿಸುವಲ್ಲಿನ ಖುಷಿ 
ನನ್ನ ಪಾಲಿಗಿರಲಿ ಹೀಗೆ 
ಹೆಚ್ಚೇನೂ ಬಯಸದೆ 
ಹುಚ್ಚನಾಗುವ ಮುನ್ನ 
ಸ್ವಚ್ಛ ಬರೆಯ ಬೇಕಿದೆ 
 
ಕೊನೆ ಹನಿಗಳೇ!!
ನಿಮಗಿಲ್ಲದ ಜಾಗ ಮಸಲ್ಲೇಕೆ?
ಬನ್ನಿ, ಕೂಡಿಕೊಳ್ಳಿ ಹೃದಯಂಗಮವಾಗಿ 
ಇದ್ದವುಗಳೊಡನೆ ಒಬ್ಬರಾಗಿ
ಅತಿರೇಕವ ಮನ್ನಿಸಿ
ಕಬ್ಬಿಗನಲ್ಲದ ಕಬ್ಬಿಗನ 
ಕಬ್ಬದಿ ಬೆರೆತು ಮುಕ್ತವಾಗಿ 
ನನ್ನಂತರಂಗದಿ ಸಂಯುಕ್ತವಾಗಿ 

                       -- ರತ್ನಸುತ 

Comments

 1. ಹೊಸ ವರುಷದ ಹೊಸಿಲಲಿ ಬ್ಲಾಗ್ ಪುಷ್ಕಳವಾಗಲಿ.

  "ಹೆಚ್ಚೇನೂ ಬಯಸದೆ
  ಹುಚ್ಚನಾಗುವ ಮುನ್ನ
  ಸ್ವಚ್ಛ ಬರೆಯ ಬೇಕಿದೆ "
  ಕವಿಗೆ ಇದಕಿಂತಲೂ ಆದ್ಯ ಕರ್ತವ್ಯ ಮತ್ತು ಮೂಲೋದ್ದೇಶ ಬೇರೊಂದಿಲ್ಲ ಅಲ್ಲವೇ.

  ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩