ಕಡಲ ಸಾಕ್ಷಿ !!

ಹುಚ್ಚೆಬ್ಬಿಸುವ ಮನೋರಥಗಳು 
ಒಂದರ ಹಿಂದೆ ಮತ್ತೊಂದರಂತೆ 
ತಮ್ಮ ಪಾಡಿಗೆ ತಾವು ಗಾಂಧಾರಿಯರಂತೆ  
ಕಣ್ಣಿಗೆ ಪಟ್ಟಿ ಬಿಗಿದು ಸೆಳೆಯುತ್ತಿವೆ 
 
ಅಮಾನುಷ ಬೇಡಿಕೆಗಳ ಬೆಂಬಲದ 
ಮೈಥುನದ ನಂತರದ ದಣಿವು 
ಯಾವ ಅಮೃತ ಕಡಲನ್ನೂ ಒಪ್ಪದೇ 
ಬತ್ತಿದ ಬಾವಿಗಳ ದಿಟ್ಟಿಸುತ್ತಿವೆ 
 
ನಕ್ಷತ್ರಗಳ ಕಿತ್ತು ಗರ್ವಿಸಿದ ರೋಮಗಳ 
ತುದಿಗೆ ಬಿಗಿದಾಗಲೇ
ರೊಮಾಂಚನಕೆ ಬಿಡುವು 
ಚಂದ್ರನಲ್ಲದ ನನ್ನಲ್ಲಿ ಜೊನ್ನ ತಿಮಿರು 
 
ಬರಿ ತೊದಲ ವಯ್ಯಾರದಿಂಚರ 
ಇನ್ನಷ್ಟು ಅಸ್ಪಷ್ಟ, ಮತ್ತಷ್ಟು ಪಕ್ವ 
ಇಡಿ ಮೈಯ್ಯ ಹಿಂಡಿ ಹಿಡಿದಿಟ್ಟ ಕಣ್ಣ ಕುಂಬದ 
ಜೇನ ಬುಟ್ಟಿಯ ಸತ್ವ 
 
ಹೂವಲ್ಲಿನ ಘಮಕೆ ಒಡಲ ಬೀಡು 
ಮಾತಿಲ್ಲದಾಗಲೇ ಮೌನ ಹಾಡು 
ಚಿವುಟಿದ ರತಿಯೊಳಗೆ ಮನ್ಮಥನ ಭಂಗ 
ಸಮರವಾಯಿತು ಪ್ರಣಯ ನಾಟ್ಯ ರಂಗ 

ಪುಷ್ಕರದ ಮಡಿಲಿಗೆ ಹೂ ಬಾಣ 
ವಿನಿಮಯದ ಮೈತ್ರಿಗೆ ಸೋತ ತ್ರಾಣ 
ನಿರ್ಲಿಪ್ತ ನೋಟದಲಿ ಗೆದ್ದ ತೃಪ್ತಿ 
ಪ್ರಕೃತಿಗೆ ಪರಿಪೂರ್ಣತೆಯ ಪ್ರಾಪ್ತಿ 

ಕೊಳಲ ಗಾತ್ರದ ಮಿಂಚು
ಸ್ಖಲಿಸಿ ತಣ್ಣಗೆ ಮುದುಡಿ
ತಲೆ ಬಾಗಿದೆ ಕೊನೆಯ ಉಸಿರ ದೋಚಿ 
ಅಲೆಯ ಅವರೋಹಣಕೆ ಕಡಲೇ ಸಾಕ್ಷಿ !!

                                   -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩