"ಮುಖ್ಯಾಂಶಗಳು - ನರರು ನಾಡಿನಿಂದ ಕಾಡಿನೆಡೆಗೆ"

ಬಂದವೋ ಹಿಂಡು ಹಿಂಡಾಗಿ 
ಉದ್ದ, ಗಿಡ್ಡ ಬಾಲವುಳ್ಳವು 
ಕೆಂಪು, ಕಪ್ಪು ಮೂತಿಯುಳ್ಳವು  
ಪಿಳ್ಳೆಗಳ ಅಪ್ಪಿ ಹೊತ್ತುಕೊಂಡವು 
ಕರೆಂಟು ತಂತಿ ಮೇಲಿಂದ 
ಮನೆ ಮಾಳಿಗೆ ಮೇಲೆ ಹಾರಿ 
ತೆಂಗಿನ ಮರದಲ್ಲಿ ತಂಗಿ 
ಜೋಳದ ಹೊಲಗಳಿಗೆ ತೂರಿ 
 
ಊರಾಚೆ ಕೆರೆಯಲಿ ಈಜಿ 
ದಂಡೆ ಮೇಲೆ ಮೈ ಒದರಿ 
ವಾನರ ಸೇನೆಯ ದಾಳಿ 
ಈ ಕೇರಿ, ಆ ಬೀದಿಗಳಲಿ 
ಪಟಾಕಿ ಸಿಡುಕಿಗಿನ್ನೆಷ್ಟು ದಿನ 
ಬೆಚ್ಚಿ ಬೀಳಿಸುವ ಸಂಚು?
ಅವುಗಳಿಗೂ ಅನುಭವವುಂಟು 
ಬಲಾಬಲ ಈಗ ಮ್ಯಾಚು 
 
ದಿನಸಿ ಅಂಗಡಿ ಡಬ್ಬಿಯೊಳಗೆ 
ಒಣ ದ್ರಾಕ್ಷಿ ಮಂಗ ಮಾಯ
ಪುಟ್ಟ ಕಂದನು ಕೈಲಿ ಹಿಡಿದ 
ಲಾಲಿಪಪ್ಪಿಗೆ ಪರಚು ಗಾಯ  
ಮನೆ ಆಚೆ ಒಣಗಿಸಿಟ್ಟ 
ಸಂಡಿಗೆ ಸೀರೆ ಸಹಿತ ಲೂಟಿ 
ಕಲ್ಲು ಹೊಡೆದರೆ ಬೆನ್ನು ಹತ್ತುವ 
ಒಂದೊಂದೂ ಭಾರಿ ಘಾಟಿ 
 
ತಾಳಲಾರದೆ ಇವುಗಳ ಕಾಟ 
ಊರು ಬಿಟ್ಟವರೆಷ್ಟು ಮಂದಿ 
ಉಳಿದವರು ಮನೆಗಳಿಗೆ ಗ್ರಿಲ್ಲು 
ಹಾಕಿಕೊಂಡು ತಾವೇ ಬಂದಿ 
ಅಧಿಕಾರಿಗಳು ಬಂದು ಹೋದರು 
ತಾವೂ ವೀಕ್ಷಿಸಿ ಮಂಗನಾಟ 
ಭಯದ ಬದುಕಿಗೆ ಮುಕ್ತಿಯಿಲ್ಲದೆ 
ಕಾಣು ಜನರ ದೊಂಬರಾಟ 
 
ಕಾಡ ಕಡಿದರು ನಾಡ ಬೆಳೆಸಿ 
ಹಸಿರ ಮೇಲೆ ಕಾಂಕ್ರೀಟ್ ಸುರಿದು 
ಎತ್ತರದ ಕಟ್ಟಡಗಳೆದ್ದವು  
ಅಭಿವೃದ್ಧಿಯ ಹೆಸರ ಪಡೆದು 
ಬಂಡ ಮೃಗಗಳು ಕೆರಳಿದವು 
ಬಂಡಾಯ ಗುಣವ ಮೈಗೂಡಿಸಿ 
ಮುತ್ತಿಗೆ ಹಾಕಿದವು ಮೆಲ್ಲಗೆ 
ತಮ್ಮ ಮನೆ-ಮನಗಳನು ಅರಸಿ 
 
ಬುದ್ಧಿ ಜೀವಿಯ ಪೆದ್ದತನದಲಿ 
ಭೂ ಮಾತೆಯ ಅತಿಕ್ರಮಣ 
ನೆನ್ನೆಗುಳಿದವು ಇಂದಿಗಿಲ್ಲ 
ಇಂದಿಗಿದ್ದವು ನಾಳೆ ಮರಣ 
"ಮುಖ್ಯಾಂಶಗಳು - 
ನರರು ನಾಡಿನಿಂದ ಕಾಡಿನೆಡೆಗೆ"
ಕಾಡು ಪ್ರಾಣಿಗಳ ಸುದ್ದಿ ವಾಹಿನಿ
ದಿನವೂ ಸಾರುವುದು ಇದೇ ಸುದ್ದಿಯನ್ನ .... 

                                 -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩