ಯಥಾಪ್ರಕಾರ !!

ಮರುಭೂಮಿಯ ಮರಳಿಗೆ ನೆಲೆಯೆಲ್ಲಿ?
ಬೀಸುವ ಗಾಳಿಯ ದಿಕ್ಕಿಗೆ ಮೈಯ್ಯೊಡ್ಡಿ 
ಇದ್ದಷ್ಟೂ ಸಾಲದೇ, ಇನ್ನೂ ಮರುಳಾಗಿ 
ಉರುಳುರುಳಿ ತಲುಪುವ ತೀರ, ಯಥಾಪ್ರಕಾರ
 
ಬಯಲೊಳು ಹಿಡಿದ ದೀಪದ ಬೆಳಕು, ಬಳುಕು 
ನನ್ನ ಪದಗಳ ಹುಟ್ಟು, ಸಾವಿನ ಗುಟ್ಟು 
ಹೊತ್ತಿಕೊಳ್ಳುವುದೇ ಅಪರೂಪ, ಇನ್ನು ಹೊಂದಿಸಿ,
ಕಾಯಿಸಿ ಬಿಟ್ಟರೆ; ಬತ್ತಿ ಊದುವುದು ಬಂಗಿ 
 
ತರಂಗದೊಳಗೆ ಇಣುಕಿದಾಗ ಗೋಚರಿಸುವ-
-ನಾನು, ಅದೇ ನನ್ನ ಭಾವ 
ಎಲ್ಲವೂ ಸ್ಪಷ್ಟವಾಗದೊಡಗಿದರೆ ನಾನು ನಾನೇ 
ಆಗ, ಉಳಿದದ್ದೂ ಮರೆಯಾಗುವುದದರ ಸ್ವಭಾವ 
 
ಕಟ್ಟಿ ಹಾಕಿ, ಪೆಟ್ಟು ಕೊಟ್ಟು, ಬಂಡಾಯವಗಿ 
ನೆತ್ತರಿನಲ್ಲಿ ಬರೆದೆ, ಚೂರೂ ಕನಿಕರವಿಲ್ಲದೆ 
ಮುಗಿದ ಶಾಯಿಗೆ ಕಣ್ಣೀರೇ ಆಸರೆ 
ಹಾಳೆಗೂ ಅರ್ಥವಾಗದ ಸಾಲು, ನನಗೂ ಸಹಿತ 
 
ಪ್ರೇಮಕೆ, ಮೋಹಕೆ, ದುಃಖಕೆ ಒಂದೆರಡು ಸಾಲು 
ಹಿಂದೆ ಕುರಿ ಮಂದೆ ಸಾಲು 
ಎಲ್ಲವೂ ಬಡಕಲು ಭಿಕ್ಷುಕ ಪಶುಗಳು 
"ಭವತಿ ಭಿಕ್ಷಾಂದೇಹಿ", ಓದುಗರೆದುರು  

ಅನುಕರಿಸಿ, ಅನುಸರಿಸಿ ಅನವರತ  
ಅನುಭವಿಸುವುದನ್ನೇ ಮರೆತಿರುವೆ, ಗಮನಿಸಿಲ್ಲೀ-
-ತನಕ, ಹಿಂದಿನ ಸಾಲು ಮುಗಿವನಕ 
ಇನ್ನೂ ಗಮನಿಸದೆ ಹೋದ ಅಜ್ಞಾತ ನಾನು
 
ಮುದಿ ಎಲೆಗಳ ಮತ್ತೆ-ಮತ್ತೆ ಜೋಡಿಸಿ 
ಮೆತ್ತಿಕೊಂಡೆ ಬೋಳು ಮರದ ರೆಂಬೆಗೆ 
ಉದುರುವುದನ್ನೂ ಸಂಭ್ರಮಿಸಿ, 
ಮತ್ತೆ ಮೆತ್ತುವುದನ್ನೂ.
ಇದರ ನಡುವೆ ಒಂದು ಕವನ. ಯಥಾಪ್ರಕಾರ

                                           --ರತ್ನಸುತ  

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩