ಈ ನಡುವೆ ಹೀಗಾಗಿರುವೆ !!

ಮಂಪರುಗಣ್ಣಿನ ಮುಂಪಹರೆಯಲಿ 
ಅಡಗಿದ ನಿನ್ನ ಗುರುತಿಸುವೆ 
ಅಂಕಣವಿಲ್ಲದೆ ಹೋದರೂ ನಿನಗೆ 
ಮನಸಲೇ ಕಾವ್ಯವ ಗೀಚಿಡುವೆ 
 
ಮುತ್ತಿಗೆ ಹಾಕುವ ಮೋಹವ ಸೀಳಿ 
ಮುತ್ತಿಗೆ ಕಾಯುವ ಗುಣವಿಡುವೆ 
ಸಣ್ಣಗೆ ನಕ್ಕರೂ ಅಂದಿಗೆ ಸಾರ್ಥಕ-
-ತೆಯ ದಿನಚರಿ ತುಂಬಿಸುವೆ 
 
ಬಿಕ್ಕಳಿಕೆಯ ಬರಿಸದೆ ಇರಿಸಲು ನಾ 
ನೆನಪನು ದೂರ ಸರಿಸಿರುವೆ 
ಅಂಟಿ ಜೊತೆಗಿರುವ ನೆರಳೊಂದಿಗೆ 
ಒಪ್ಪಂದಕೆ ಸಹಿ ಹಾಕಿರುವೆ 
 
ಗುಟ್ಟಿನ ಬೆನ್ನನು ಹತ್ತಿ ನಿನ್ನಯ
ರೇಖಾ ಚಿತ್ರವ ಬಿಡಿಸಿರುವೆ 
ತೀರದಿ ಬಿಟ್ಟ ಹೆಜ್ಜೆ ಹಚ್ಚೆಯ 
ಒಂದೂ ಬಿಡದೆ ದೋಚಿರುವೆ 

ನಾಳೆಯ ದಿನಗಳ ಕಾಣಲು ಆಗಲೆ 
ಲೆಕ್ಕಾಚಾರಕೆ ಇಳಿದಿರುವೆ 
ನುಲಿಗೆಯ ನಾಲಿಗೆ ತಾಳಕೆ ಈಗಲೆ 
ನಿನ್ನ ಜಪಿಸುತ ಕೂತಿರುವೆ 

ನಿನ್ನೊಲುಮೆಯನು ಸಂಪಾದಿಸುವ 
ಕಾಮಗಾರಿಯಲಿ ಮುಳುಗಿರುವೆ 
ನನ್ನವಳಾಗಿ ಒಲಿಯುವುದಾದರೆ 
ಕಾಯುವಿಕೆಯಲೇ ಉಳಿದಿರುವೆ 

ಕೈಯ್ಯಲಿ ಕೈಯ್ಯಿ, ಹೆಜ್ಜೆಗೆ ಹೆಜ್ಜೆ 
ಜೊತೆಯಾಗಲು ಸ್ವರ್ಗವ ಪಡೆವೆ 
ನಿನ್ನ ಸನ್ನೆಯೇ ನನಗೆ ಆಜ್ಞೆ 
ಬೇಕಾದರೆ ಉಸಿರನೇ ಬಿಡುವೆ

                             -- ರತ್ನಸುತ 

Comments

  1. the best lines :
    "ಅಂಟಿ ಜೊತೆಗಿರುವ ನೆರಳೊಂದಿಗೆ
    ಒಪ್ಪಂದಕೆ ಸಹಿ ಹಾಕಿರುವೆ "

    ಒಲುಮೆಯ ಅರ್ಪಣೆಯ ಭಾವತೀವ್ರತೆ ಇಲ್ಲಿ ಮೈತಳೆದಿದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩