ಸಾವುಗಳ ನಡುವೊಂದು ಬದುಕು !!

ದಣಿದ ಕಣ್ಣನು ಮೆಲ್ಲ 
ಮುಚ್ಚಿಕೊಳ್ಳುವ ಗಳಿಗೆ 
ಎದುರಾದ ಸ್ವಪ್ನದಲಿ 
ನಾ ಸಾಯುತಿದ್ದೆ 
ನಾನೇ ಕೂಡಿಟ್ಟು 
ಕಾವಲಿಟ್ಟ ಬಯಕೆ-
-ಗಳ ಉರಿ ಜ್ವಾಲೆ-
-ಯಲಿ ಬೇಯುತಿದ್ದೆ 
 
ಅತ್ತು ಕರೆದರೂ ತಾನು 
ಎತ್ತ ಹೋಯಿತೋ ತೇಲಿ 
ಇದ್ದಲ್ಲಿ ಕಲ್ಲಾಗಿ 
ಉಳಿದಂಥ ಮೋಡ?
ಕಣ್ಣ ತಪ್ಪಿಸಿ ಬೆನ್ನ 
ಹಿಂದೆ ಅಡಗಿತು ಪವನ 
ಮಾತನಾಡದೆ ಉಳಿಯಿತು 
ನದಿಯು ಕೂಡ 
 
ಸುಟ್ಟ ಚರ್ಮದ ಬೊಬ್ಬೆ 
ನೀರ ಗುಳ್ಳೆ ರೀತಿ 
ಮೂಡಿ ಹಿಂದೆ ಹಾಗೇ 
ಒಡೆದು ಬಿಡುತಿತ್ತು 
ಹಸಿ ಮಾಂಸ ಮುದ್ದೆ
ಚೀರುತ್ತಿತ್ತು ನೋವಲಿ 
ಎಲುಬಿಗೂ ಕೂಡ ಅದು 
ಕೇಳುತ್ತಲಿತ್ತು 
 
ನೂರು ಹದ್ದಿನ ಕಣ್ಣು 
ನನ್ನ ಚಿತೆ ಸುತ್ತ 
ಗೊಲಾಕಾರದಲಿ 
ಹಾರಾಡಿದಂತೆ 
ಬೆಂದ ಮೈ ಅಲ್ಲೂ 
ಭಯವನ್ನು ಬಿಟ್ಟಿಲ್ಲ 
ಮುಂದೆ ಉಂಟಾಗುವ 
ನೋವಿನದೇ ಚಿಂತೆ 
 
ಕೈ ಕಟ್ಟಿ ನಿಂತವರು 
ಕಂಬನಿ ಹರಿಸಿದರು 
ನನ್ನ ಹಿಡಿ ಭಸ್ಮವ 
ಕಳಶದಲಿ ತುಂಬಿಸಿ 
ಉಳಿದಂತೆ ಎಲ್ಲವನು 
ಅಲ್ಲೇ ಬಿಟ್ಟರು ನನ್ನ 
ಪಂಚಭೂತಗಳಲ್ಲಿ 
ಒಂದಾಗಿಸಿ 
 
ಸತ್ತದ್ದು ನಿಜ ನಾನು 
ಅಂದಿಗಷ್ಟೇ ಅಲ್ಲ 
ಹಿಂದೆಯೂ, ಇಂದಿಗೂ 
ಮುಂದೆಯೂ ಸಾಯುವೆ 
ಸಾವಿನ ನಡುವೆ 
ಬದುಕೆಂಬುದೊಂದಿದೆ ನೋಡಿ 
ಅದರ ಸಲುವೇ ಮತ್ತೆ 
ಉಸಿರಾಟ ಬೆಳೆಸುವೆ ..... 
 
                    -- ರತ್ನಸುತ 

Comments

  1. ಉಸಿರು ನಿಂತರಷ್ಟೇ ಮರಣವದಲ್ಲ
    ನಿರ್ವೀರ್ಯ ರೂಡಿಗೆ ಬಿದ್ದ ಮನಸೂ ಮರಣ ಸದೃಶವೇ.
    ಉತ್ತಮ ಕವನ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩