ನಾನಾಗಿ ಬರೆದಿಲ್ಲ, ನೀವಾಗಿ ಓದಿ !!

ಸಮಯ ಸಿಕ್ಕಾಗ
ಮುಳ್ಳಿನ ಕಾಲೆಳೆಯಬೇಕು 
ಆ ಸಮಯಕ್ಕಾಗಿ 
ಮುಳ್ಳಿನ ಕಾಲಿಗೇ ಬೀಳಬೇಕು 
 
ಅಲೆಗಳೆದುರು ಈಜುವ
ಮೋಜಿನ ಜೀವನದಲ್ಲಿ 
ಈ ತೀರ ನಿರಂತರ 
ಆ ತೀರ ಅಗೋಚರ 
 
ಮರಳಲ್ಲಿ ಮನೆ ಕಟ್ಟಿ 
ಉಪ್ಪರಿಗೆಯಡಿಯಲ್ಲಿ 
ಬಿತ್ತಿಕೊಂಡ ಕನಸುಗಳು 
ಲೆಕ್ಕ ಮೀರುವಷ್ಟು, ದಂಡ ಪಿಂಡಗಳು 
 
ಗೋಪುರಕ್ಕೆ ಮೆಟ್ಟಿಲಿಂದಲೇ 
ಕೈ ಮುಗಿದು 
ದೇವರಿಗೂ ಅಪರಿಚಿತ ನಾನು 
ನೈತಿಕತೆ ಉಳಿಸಿಕೊಳ್ಳದವ
 
ನೆನಪುಗಳು ಶೂಲ 
ಮಾತೇ ಬಂಡವಾಳ 
ಹೆಜ್ಜೆ ಗುರುತುಗಳಂತೂ 
ನಾರುತಿವೆ ಕೊಳೆತು 
 
ಇದರ ನಡುವೆ
ಅಂಟಿದ ನೆರಳು ಬೇರೆ 
"ಹೋಗ್ಹೋಗಯ್ಯ ದಮ್ಮಯ್ಯ!!" ಅಂದರೂ 
ಜೊತೆಗುಳಿದ ಮಾನಗೆಟ್ಟ ಪೀಡೆ 
 
ಬೆನ್ನಿಗಂಟಿದ ಶನಿಗೂ ಸಾಕಾಗಿ 
ಜಾಡಿಸಿ ಒದ್ದನೇನೋ ಎಂಬಂತೆ
ಆಗಾಗ ಎಡವಿ ಬಿದ್ದೆ 
"ಎಚ್ಚರ" ಅದು ಹಗಲ ನಿದ್ದೆ 

ನೇರ ನೋಡುವನಕ 
ನಾ ಕಂಡ ಲೋಕ 
ನಿಕೃಷ್ಟ, ನೀರಸ, ನಿರಾಕಾರ 
ಅಪೌಷ್ಟಿಕ ಬದಕಲ ಕೂಸು

ನಿಜವೆಂಬುದು 
ಕಣ್ಣಿನೆದುರ ಕನ್ನಡಿ 
ಅದ ಚೂರುಗೊಳಿಸಿದೆನೆಂಬ 
ಮೊಂಡು ತರ್ಕವಾದಿ ನಾನು 

ನಾನೇ ಪ್ರಧಾನ ಪಾತ್ರ-
-ಧಾರಿಯಾದ ಈ ಸಾಲುಗಳಲ್ಲಿ 
ಪರರನ್ನ ಕೂರಿಸಿ, ತೂಗಿಸಿ 
ಖುಷಿ ಪಡುವ ಹುಂಬ 

ನಾನಾಗಿ ಬರೆದದ್ದು ಸುಳ್ಳು 
ನಾನೇ ಬರೆದದ್ದು ಸತ್ಯ 
ನಾನ್ಯಾರೋ ಹುಡುಕಾಡಬೇಡಿ ಮತ್ತೆ 
ನೀವಾಗಿರುವಿರಿ ಸಧ್ಯ...... 

                          -- ರತ್ನಸುತ 

Comments

  1. ಕೈಗನ್ನಡಿಯಂತಹ ಕವನ.


    ಅಸಂಗತದ ಎಳೆಗಳು ಸಂಗತದ ತೆರೆಯಂತೆ ಬದುಕಿನಾಟವನ್ನು ಕಟ್ಟಿಕೊಟ್ಟ ಪ್ರತಿಮೆಗಳು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩