ನಾ ಕಾವ್ಯವಾಚಿಸಿದಾಗ

ಕಂಪಿಸಿದ ಕೈಯ್ಯಲ್ಲಿ ಹಿಡಿದ
ಅದೆಂಥದೋ ಹೂವಿನ ದಳಗಳೂ ಕಂಪಿಸಿದ್ದವು
ಆಗತಾನೇ ಅರಳಿದ ಆ ಹೂವ
ಮೊಗ್ಗಾಗಿಸುವ ಹುಂಬನೊಬ್ಬ ನನ್ನಲ್ಲಿದ್ದ

ಎಲ್ಲರೂ ಕೇಳಿದವರೇ
ಕಂಪನಕೆ ಕಾರಣವೇನೆಂದು
ನನ್ನದೂ ಅದೇ ಪ್ರಶ್ನೆ
"ಕಾರಣವೇನು?"

ಇಡಿ ಜಗತ್ತು ನೆಟ್ಟ ನೋಟಕ್ಕೆ
ನನ್ನ ಬಡ ಜೀವ
ಸಹಿಸುವುದಾದರೂ ಹೇಗೆ?!!
ಅದಕ್ಕಾಗೇ ಆಗಿರಬಹುದೇನೋ ಹಾಗೆ?!!

ಅಕ್ಷರಗಳಲ್ಲಿ ತಕ-ತಕ ಕುಣಿಯಲು
ನಾನು ಮಾತ್ರ ಸ್ಥಿರವಾಗಿದ್ದರೆ!!
ಛೆ..ಛೆ.. ನಾ ಅವಕೆ ಮಾಡಿದ ಅವಮಾನ
ನಡುಕವೇ ಸೂಕ್ತ ಸನ್ಮಾನ!!

ನಾನು ನಾನೆಂಬುದ ಮರೆತು
ಸಾಲುಗಳು ನನ್ನವೆಂಬುದನ್ನೇ ಮರೆತು
ಒಪ್ಪಿಸಿ ಮುಗಿಸಿದ ಮರುಕ್ಷಣ ಮೌನ
ನನ್ನೊಳಗಿನ ತಲ್ಲಣಕ್ಕೆ ಚಪ್ಪಾಳೆಯ ಉಪಶಮನ

ಚಿತೆಯಲ್ಲಿ ಅಗ್ನಿಸ್ಪರ್ಶಿಸಿಕೊಂಡು
ಅಲ್ಲಿಂದ ಹಾರಿ ಹರಿವ ನದಿಗೆ ಜಿಗಿದು
ದಂಡೆಗೆ ಈಜಿ ಮೈ ತಡವಿಕೊಂಡೆ
ಸಧ್ಯ ಬೊಬ್ಬೆಗಳಾವೂ ಮೂಡಿರಲಿಲ್ಲ ...

                                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩