Friday, 28 February 2014

ವಿಷದ ಮರ

ಗೆಳೆಯನಲ್ಲಿ ಕೋಪ; 
ನನ್ನೊಳಗ ಕ್ರೂರಿಗೆ ಹೇಳಿದೆ,  
ಕ್ರೂರಿ ಸತ್ತ. 
ವೈರಿಯಲಿ ಕೋಪ;
ಯಾರಲ್ಲೂ ಹೇಳಿಲ್ಲ,
ಕ್ರೌರ್ಯ ಚಿಗುರಿ ಬೆಳೆಯತೊಡಗಿತು.  

ಭಯವೆಂಬ ನೀರೆರೆದೆ 
ಹಗಲು-ಇರುಳನ್ನದೆ ಕಣ್ಣೀರ ತೋಡಿ;
ನಗುವಿನ ಕಿರಣಗಳ ಸುರಿದೆ,
ಹುಸಿ ಕೊಡಲಿಯಲ್ಲಿ ಮೆದುವಾಗಿ ಕೆತ್ತಿ

ಪೋಷಿಸುತ್ತ ದಿನಗಳುರುಳಿದವು,
ಮರದಲ್ಲೇ ಹಣ್ಣೊಂದು ತುಂಬು ಮಾಗಿತ್ತು; 
ವೈರಿಯ ಕಣ್ಣು ಬಿತ್ತದರಮೇಲೆ,  
ನಾನು ಬೆಳೆಸಿದ ಮರದ ಹಣ್ಣೆಂದು ಅರಿತು. 
 
ಅಂದೊಮ್ಮೆ ಕಗ್ಗತ್ತಲ ರಾತ್ರಿ ವೇಳೆ, 
ಕಳ್ಳತನಕೆ ಹೊಂಚು ಹಾಕಲಾಗಿತ್ತು; 
ಮುಂಜಾನೆ ಪುಳಕಕೊಂದು ಕಾರಣ ನನಗೆ,  
ಮರದಡಿ ವೈರಿಯ ಹೆಣ ಬಿದ್ದಿತ್ತು!!

                     -- ರತ್ನಸುತ (ಮೂಲ- ವಿಲಿಯಂ ಬ್ಲೇಕ್)

A Poison Tree
******************
I was angry with my friend:
I told my wrath, my wrath did end.
I was angry with my foe:
I told it not, my wrath did grow.


And I watered it in fears,
Night and morning with my tears;
And I sunnèd it with smiles,
And with soft deceitful wiles.


And it grew both day and night,
Till it bore an apple bright;
And my foe beheld it shine,
And he knew that it was mine,


And into my garden stole
When the night had veiled the pole:
In the morning glad I see
My foe outstretched beneath the tree.


                                    -- William Blake

Thursday, 27 February 2014

ಗುಬ್ಬಿ ಗೂಡಲ್ಲಿ !!

ಗದ್ದಲದ ಕಾಡಲಿ 
ಸದ್ದು ಮಾಡದೆ ಗುಬ್ಬಿ
ಪುಟ್ಟ ಗೂಡಲಿ ತನ್ನ
ತಾಯ ತಬ್ಬಿತ್ತು 
ಹೊರಗೆ ಗುಡುಗು-ಸಿಡಿಲು
ಆಲಿಕಲ್ಲ ಮಳೆ 
ಅಮ್ಮ ಗುಟುಕ ತರಲು
ಹೊರಟು ನಿಂತಿತ್ತು 
 
ನಿದ್ದೆ ಕಣ್ಣನು ಉಜ್ಜಿ 
ಮೈ ಮುರಿಯುತ ತಾನು 
"ಎಲ್ಲಿ ಹೋದೆ ಅಮ್ಮ?"
ಅಂತು ಮರಿ ಗುಬ್ಬಿ 
"ಚಂದಾ ಮಾಮನು ಇಂದು 
ಮನೆಗೆ ಬರುವನು ಕಂದ; 
ತಿಂಡಿ ತರಬೇಕಲ್ಲ?"
ಅಂತು ತಾಯ್ಗುಬ್ಬಿ 
 
"ನನಗಾರೆ ಕಾವಲು 
ಹದ್ದು ಗುಮ್ಮ ಬಂದು 
ಹೊತ್ತು ಹೊರಟರೆ ನನ್ನ 
ಆರ ಕೂಗಲಿ ಅಮ್ಮ?!!
ಹಾರಲೇ, ಉಳಿಯಲೇ
ಇಲ್ಲ ಸೆರೆಯಾಗಲೇ?
ಎಳೆಸು ಉಗುರು ಪರಚೆ 
ಹೆದರುವನೇ ಗುಮ್ಮ?"
 
"ಕಂದಮ್ಮ ಅಳದಿರು 
ನಾ ಗದರಿ ಹೋಗುವೆ 
ನನ್ನ ಕಂಡರೆ ಗುಮ್ಮ 
ಹೆದರಿ ಸಾಯುವನು!!
ನನ್ನ ಹೊರತು ನಿನ್ನ 
ಯಾರೇ ಕೂಗಿದರೂ 
ಬಿಟ್ಟು ಬರದಿರು ನೀನು 
ನಮ್ಮ ಗೂಡನ್ನು"
 
ಒಂದು ಪುಕ್ಕವ ಕಿತ್ತು 
ಹೊದಿಸಿತು ಮೈ ಮೇಲೆ 
"ಹೋಗಿ ಬರುವೆ ಕಂದ
ಗುಟುಕಿನೊಂದಿಗೆ ಎಂದು"
ಹಾರಿ ಹೋಯಿತು ಅಮ್ಮ 
ದಿನ ಕಳೆದರೂ ಬರದೆ,
ಮರಿ ಗುಬ್ಬಿ ಗೂಡನ್ನು 
ಬಿಟ್ಟು ಬರಲಿಲ್ಲ 
 
ಇರುಳಲ್ಲಿ ಬಂದನವ 
ಚಂದಾ ಮಾಮನ ಕಂಡು 
ಕೇಳಿತು ಮರಿ ಗುಬ್ಬಿ 
"ಕಂಡೆಯಾ ಅಮ್ಮನ?"
ಚಂದಿರನು ನಗುತಿದ್ದ,
ತೇಲಿ ಬಂದ ಮುಗಿಲ
ಮರೆಯಲ್ಲಿ ಆಗಾಗ 
ಒರೆಸುತ ಕಣ್ಣ 

ಹೇಳದ ಕಥೆಯನ್ನೇ 
ಮತ್ತೆ ಮತ್ತೆ ಕೇಳಿ 
ಗೂಡಲ್ಲೇ ಅಸುನೀಗಿತು 
ಒಂದು ಹಾಡು 
ಬುಡ ಸಹಿತ ಉರುಳಿತು 
ಗೂಡು ಹೊತ್ತ ಮರ 
ನಿಮಿಷ ಮೌನವ ವಹಿಸಿತು 
ದಟ್ಟ ಕಾಡು !!

                    -- ರತ್ನಸುತ

ನಾನು, ನನ್ನ ಲೋಕ

ಓಡುತ್ತಿದೆ 
ತಡೆದರು;
ಈಗ ಓದುತ್ತಿದ್ದೇನೆ 
ಅವರನ್ನೇ 

ಹಾಡುತ್ತಿದ್ದೆ 
ನಕ್ಕರು;
ನಗು ಹುಡುಕುತ್ತಿದ್ದೇನೆ 
ಅವರಲ್ಲೇ 

ಬೀಳುತ್ತಿದ್ದೆ 
ಬಿದ್ದರು;
ನಾನೇ ಕೈ ಚಾಚಿದ್ದೇನೆ 
ಮನಸಲ್ಲೇ 

ಹಾರುತ್ತಿದ್ದೆ
ಅತ್ತರು;
ನಾನೂ ಅಳುತಲಿರುವೆ 
ಕಣ್ಣಲ್ಲೇ 

ಚೀರುತ್ತಿದ್ದೆ 
ಸತ್ತರು;
ನಾನೂ ಸಾಯುತ್ತಿದ್ದೇನೆ 
ಮೌನದಲ್ಲೇ 

ನಾನಿರಲಿಲ್ಲ;
ಅವರಿದ್ದರು;
ಇದ್ದು ಇರಿಸಿಕೊಂಡಿದ್ದೇನೆ 
ಜೊತೆಯಲ್ಲೇ 

ನಾನಿರುವೆ 
ಅವರಿಲ್ಲ;
ನಾನೇ ಹುಟ್ಟಿಸಿಕೊಂಡಿದ್ದೇನೆ 
ಕಥೆಯಲ್ಲೇ 

ನಾನಿರುವೆ 
ಎಲ್ಲರೊಡನೆ;
ಲೋಕ ಸೃಷ್ಟಿಸಿಕೊಂಡಿದ್ದೇನೆ 
ಇಷ್ಟರಲ್ಲೇ 

                -- ರತ್ನಸುತ

Wednesday, 26 February 2014

ಬ್ಯಾಡ್ ಚಾಕ್ಲೇಟ್ ಅಂಕಲ್ !!

ಫಾರಿನ್ ಅಂಕಲ್ ಬರ್ತಾರೆ 
ಬಣ್ಣ ಬಣ್ಣದ ಚಾಕ್ಲೇಟ್ ಹೊತ್ತು 
ಮುದ್ದು ಮಾತಲ್ಲಿ ಕರ್ದು 
ಮಡ್ಲಲ್ಲಿ ಕೂರುಸ್ಕೊಂಡು  
ಕೊಡ್ತಾರೆ ಕೈ ತುಂಬ ಚಾಕ್ಲೇಟು 
"ನನ್ನ ಮುದ್ದು ಗೊಂಬೆ 
ಥೇಟು ಚಂದ್ರನ ಮಗಳಂತೆ" ಅಂತ 
ಎದೆಗೆ ಅಪ್ಪಿ, ಗಿಂಡ್ತಾರೆ ಕೆನ್ನೆನ 
ಪ್ರೀತಿ ತೋರ್ತಾ ಎಲ್ಲರ್ಮುಂದೆ !!

ಫಾರಿನ್ ಅಂಕಲ್ ಬರ್ತಾರೆ
ನನ್ಗರ್ಥ ಆಗೋ ಹಂಗೆ ಮಾತಾಡ್ದೆ 
ಕೈ ಹಿಡಿತಾರೆ, ಜೋರಾಗಿ ಎಳಿತಾರೆ 
ಬೇರೆನೇ ದನಿಯಲ್ಲಿ ಮತ್ತೆ 
"ನನ್ನ ಮುದ್ದು ಗೊಂಬೆ
ಥೇಟು ಚಂದ್ರನ ಮಗಳಂತೆ" ಅಂತಾರೆ 
ಅಪ್ಕೋತಾರೆ, ಜೋರಾಗಿ ಕೆನ್ನೆ ಗಿಂಡಿ
ಮೈಯ್ಯೆಲ್ಲಾ ಒತ್ತಾರೆ 
ಬಾಯ್ಮುಚ್ತಾರೆ ಬಿಗಿಯಾಗಿ 
ನಾ ಚೀರಾಡ್ದಂಗೆ !!

ನಾ ಜೋರಾಗೇ ಚೀರ್ತಿದ್ದೆ !!
ಯಾರ್ಗೂ ಕೆಳಿಸ್ದಂಗೆ 
ತುಂಬಾನೇ ನೋವಾಗ್ತಿತ್ತು;
ತಪ್ಪು ಮಾಡ್ದಾಗ ಮಿಸ್ಸು 
ಏಟು ಕೊಟ್ಟಾಗಿದ್ಕೂ ಜಾಸ್ತಿ ನೋವು. 
ಬಟ್ಟೆ ಎಲ್ಲ ಹರ್ದೋಗ್ತಿತ್ತು 
ನನ್ ಫೇವರೆಟ್ ಕೆಂಪು ಫ್ರಾಕು 
ಹಾಳಾಗಿದ್ದು ಹಿಂಗೇನೆ 

ಏನಂತಾರೆ ಇದನ್ನ?
ಯಾರ್ಗ್ ಹೇಳ್ಳಿ ಇದ್ನೆಲ್ಲ?
ಅಪ್ಪ, ಅಮ್ಮ ಬೈದ್ರೆ?!!
"ಹೊಸ ಫ್ರಾಕ್ ಯಾಕ್ ಹರ್ಕೊಂಡೆ?" ಅಂತ
ಅಂಕಲ್ ಬೇರೆ ಹೆದ್ರಿಸಿದ್ರು 
ಯಾರ್ಗೂ ಹೇಳ್ಬಾರ್ದಂತ 
ಯಾಕ್ ಹೇಳ್ಬಾರ್ದು?
ಅಂಕಲ್ ಯಾಕ್ ಹಿಂಗ್ ಮಾಡ್ತಾರೆ?

ಈವತ್ತೂ ಬಂದಿದಾರೆ 
ನಂಗೆ ಹೊರ್ಗೆ ಆಟಾಡೋಕೆ ಹೋಗ್ಬೇಕು 
ನಾಳೆ ಬರ್ಬಾರ್ದಿತ್ತ ಈ ಅಂಕಲ್ಲು?!
ನಾಳೆ ಅನ್ನೋದು ಬರೋದೇ ಬೇಡಪ್ಪ ದೇವ್ರೆ!!

"ಈವತ್ತೆಲ್ಲ ಆಟಾಡ್ಕೊಂಡೇ ಇದ್ಬಿಡ್ತೀನಿ 
ಚಾಕ್ಲೇಟ್ ಮೇಲೆ ನಂಗೆ ಇಷ್ಟ ಇಲ್ಲ 
ಬೇಡ ನನ್ನ ಬಿಟ್ಬಿಡಿ" ಅಂದಾಗೆಲ್ಲ 
ಮತ್ತೆ ಕೂಡ್ಹಾಕ್ತಾರೆ ಮನೇಲಿ 
ಎಲ್ಲಾರೂ ಇದ್ದಾಗ ಅಂಕಲ್ ಒಳ್ಳೇವ್ರೇ 
ನಗ್ನಗ್ತಾ ಮಾತಾಡ್ತಾರೆ ಇಷ್ಟ ಆಗೋ ಹಂಗೆ;
ನಾನು ಒಬ್ಳೇ ಇದ್ದಾಗ ಯಾಕೆ
ಹೇಗ್ಹೇಗೋ ಆಡೋದು?!!

ಚಾಕ್ಲೇಟ್ ಕೊಟ್ರು 
ಬೇಡ ನಂಗೆ ಅಂದೆ, ಸುಮ್ನಾದ್ರು 
ಈಗ ನೋವ್ ಕೊಡ್ತಾರೆ  
ಬೇಡ ಅಂದ್ರೂ ಬಿಡಲ್ಲ 

ಅಮ್ಮ..... ಅಮ್ಮ......
ಸದ್ದು ಹೊರ್ಗೆ ಬರ್ಲೇ ಇಲ್ಲ.... 

ಹಿಂದಿ ಚಿತ್ರ "ಹೈವೇ (Highway)"ಯ ಕಾಡಿದ ಒಂದು ಸನ್ನಿವೇಶ ಹುಟ್ಟಿಸಿದ ಒಂದು ಪದ್ಯ ಇದು. ಯಾವ ಹೆಣ್ಣು ಮಗಳಿಗೂ ಈ ಕಷ್ಟ ಸಂಭವಿಸುವುದು ಬೇಡ ಎಂಬ ಅಭಿಲಾಷೆಯೊಂದಿಗೆ ಬರೆದುಕೊಂಡದ್ದು. 

                         
                                                                                     -- ರತ್ನಸುತ 

ಒಂದೆರಡು ಮಾತು ಪ್ರೀತಿಯಲ್ಲಿ

ಹಿಡಿಗೆ ಸಿಗದ ಜಡೆಯ
ಹೆಣೆದವರು ಯಾರೆಂದು
ಹೇಳದೆ ಓಡುವೆ
ಸರಿಯೇನು ಹುಡುಗಿ?
ಕಡೆಗೆ ಸಿಗುವ ನಿನ್ನ
ತುಂಟ ನಗು ಯಾಕೆಂದು
ಹೇಳದೆ ಉಳಿಸಿದೆ
ಹೋದೇನು ಕರಗಿ!!

ಸುಡುವ ಕತ್ತಲಿನಲ್ಲಿ
ಉರಿದ ತಣ್ಣನೆ ದೀಪ
ಪಿಸುಮಾತ ಹೇಳಿದೆ
ಕೇಳು ದಯ ಮಾಡಿ
ಬರಿಯ ಅಕ್ಷರದಲ್ಲಿ
ಎಲ್ಲ ಬರೆದಿಡಲಾರೆ
ಮೌನವನು ಕೆದಕಿಬಿಡು 
ಮಾತಿನೆಡೆ ದೂಡಿ

ಬಿಟ್ಟು ಹೋದರೆ ಹೇಗೆ
ಬಲಗಾಲ ಗೆಜ್ಜೆಯನು
ಎತ್ತಿಟ್ಟ ಕಿಸೆಯಲ್ಲಿ
ಅಡಿಗಡಿಗೂ ಹಾಡು
ದಿಕ್ಕು ತಪ್ಪಿದ ಹಾಗೆ
ಒಮ್ಮೊಮ್ಮೆ ನಟಿಸುವೆ
ಕೈ ಚಾಚಿ ನೀನಾಗ
ಕಂಗಳನು ನೋಡು

ಎಕಾಂತದಲಿ ಒಮ್ಮೆ
ಎದೆಯ ಚಿವುಟಿ ಹೋದೆ
ಆ ನೊವಿನಲ್ಲೊಂದು
ವಿಷಯವನ್ನಿಟ್ಟು
ಅಂದದ್ದು, ಕೊಂಡದ್ದು
ಎಲ್ಲವೂ ಮುಗಿದಿದೆ
ಬೇಕಿದ್ದ ಆ ಒಂದು
ವಿಷಯವ ಬಿಟ್ಟು

ತಾಳೆ ಬೀಸುವ ಜಾಗ
ನನಗಷ್ಟೇ ಗೊತ್ತಲ್ಲಿ
ಗುಟ್ಟುಗಳ ಆಲಿಸೋ
ಕಳ್ಳ ಕಿವಿಯಿಲ್ಲ 
ಆಣೆ ಪ್ರಮಾಣಗಳು
ತರವಲ್ಲದವರಿಗೆ
ನಮ್ಮ ನಡುವೆ ಅವು
ಲೆಕ್ಕಕ್ಕೇನಿಲ್ಲ 

ಭಯದಲ್ಲಿ ಆದದ್ದು
ವಿಸ್ಮಯ ಪ್ರೇಮ
ಅನುಭವ ನೂತನ
ಅವಿಸ್ಮರಣೀಯ
ಮಾತಿಗೂ ಹಾಡಿಗೂ
ನಡುವೆ ಗೀಟೆಳೆದು 
ಹಾಕುವ ಖುಷಿಗಳಿಗೆ
ಬಿಗಿ ಅಡಿಪಾಯ

ಹಿಂಡು ಗುಲಾಬಿಯಲಿ
ಇರಲಿ ಬಿಡು ಮುಳ್ಳು
ಚುಚ್ಚುವಂತಾದರೆ
ಅಂಜ ಬೇಡ
ಹಾಳಾದ ಮನಸನ್ನು
ಸರಿ ಮಾಡುತಿರುವೆ
ಸ್ಮೃತಿಯಲ್ಲಿ ನೆಲೆಯೂರಿ
ಗಿಂಜ ಬೇಡ !!

               -- ರತ್ನಸುತ

Tuesday, 25 February 2014

ಒಳಗಣ್ಣ ತೆರೆದು

ಐದು ತಲೆ ಹಾವನ್ನು ಕಾಣಲು 
ಗಂಟೆಗಟ್ಟಲೆ ಕಾದು ನಿಂತ ಮಂದಿ 
ಪಕ್ಕದಲ್ಲೇ ಲಾರಿ ಚಕ್ರಕ್ಕೆ ಸಿಕ್ಕಿ 
ಸತ್ತು ಬಿದ್ದ ಬೀದಿ ನಾಯಿಯ 
ಕೊಳೆತ ದೇಹಕ್ಕೆ ಮುತ್ತಿಕೊಂಡ 
ನೊಣಗಳ ಆಗಾಗ ಚೆದುರಿಸಿ 
ಕುಕ್ಕಿ ಕುಕ್ಕಿ ತಿನ್ನುತ್ತಿದ್ದ ಕಾಗೆಯ ಕಂಡು 
ಸಂತಾಪ ಸೂಚಿಸದೆ ಹೋದರು 
 
ಗಾರೆ ಕೆಲಸದಾಕೆಯ ಕುಪ್ಪಸಕ್ಕೆ 
ಮೆತ್ತಿದ ಸೆಮೆಂಟಿನ ಧೂಳು 
ಅದೇ ಸಮಯಕ್ಕೆ ಕೌದಿಯಲ್ಲಿ 
ಮಲಗಿದ್ದ ಹಸುಳೆಯ ಅಳಲು 
ಮಳೆ ನೀರ ಗುಂಡಿಯಲಿ 
ಮೊಲೆಯನ್ನು ಅವಸದಿ ತಡವಿ 
ಹಾಳುಣಿಸುವಾಗ 
ಮೇಸ್ತ್ರಿಗೆ ಮೈಯ್ಯೆಲ್ಲಾ ಕಣ್ಣು 

ಆಗಷ್ಟೇ ಎದೆ ಬಂದ 
ಬಾಲ ಕಾರ್ಮಿಕ ಹುಡುಗಿ 
ಸಾಹೇಬನ ಬೂಟು ಒರೆಸಿ ಎದ್ದಾಗ 
ಚೆಲ್ಲಾಡಿದ ಸುತ್ತ ಕೈ ತುಂಬ ಚಿಲ್ಲರೆ 
ಆಯ್ದದಷ್ಟೂ ತನದೇ ಅಂದಾಗ 
ಮೈ ಮರೆತು ಆಯ್ದ ಆಕೆ 
ಹಾಸಿಗೆ ಹಿಡಿದ ತಾಯಿಯ ಮದ್ದಿಗೆ 
ಲೆಕ್ಕ ಹಾಕಿದಳು, ಲೋಕದ ಕಣ್ಣನ್ನು ಧಿಕ್ಕರಿಸಿ 

ತೀಟೆ ತೀರುವ ಮುನ್ನ 
ಮೈ ಮಾರಿಕೊಂಡವಳ ರತಿ ರೂಪ ಕಂಡು 
ಮೈ ಮರೆತ ಮದನರು 
ಕಾಮ ದಾಹ ದಾಟಿಸಿದ 
ಮಂಚಕೆ ಮಡಿಯನ್ನು ಕಟ್ಟಿ 
ಎಡಗೈಯ್ಯಲೆಸೆದರು ನೋಟ 
ಬೀರುತ ನಿಕೃಷ್ಟ ನೋಟ 
ಹಂಗಾಮಿ ಹೆಂಡತಿಯರೆಡೆಗೆ  

ಭಿಕ್ಷೆ ಬೇಡಿದ ಕೊರಳ 
ಅಪಸ್ವರಕೆ ಕಿವಿ ಮುಚ್ಚಿ 
ಸಿಂಡರಿಸಿಕೊಂಡಾಗ ಮುಖದಲ್ಲಿ ಮೂಡಿದ 
ಗೆರೆಗಳಿಗೆ ಅರಿವಾಗದ ಸಂಕಟ 
ಕೊನೆ ಪಕ್ಷ ಹೊಟ್ಟೆಗಾದರೂ 
ಅರಿವಾಗಬೇಕಿತ್ತು ಗದರುವ ಮುನ್ನ 
ನೊಂದ ಮನಸಿಗೆ ಮತ್ತೂ 
ಖಿನ್ನತೆಯ ಬಡಿಸುವ ಮುನ್ನ 

ಕೀವು ಗಾಯಗಳನ್ನು ಕೀಳಾಗಿ ಕಂಡ
ಕಣ್ಣುಗಳೊಳ ಗಾಯಕೆ 
ಕರುಣೆ ಔಷಧದ ಅನಿವಾರ್ಯ ಕೊರತೆಯ
ನೀಗಿಸುವ ಮನಸು ಬಲವಾಗಬೇಕಿದೆ 
ನಾಳೆಗಳ ಮಾನವೀಯ ಮೌಲ್ಯಗಳ-
-ಲೊಳಪಡಿಸಲು
ಕೊಡುಗೈಗಳ ಕಾಪಾಡಲು
ಪ್ರತಿಯೊಬ್ಬರೊಳಕೂಸ ಪೋಷಿಸಿಕೊಳಲು

                                    -- ರತ್ನಸುತ

ಜೊತೆಯಲ್ಲಿ ಹೀಗೆಲ್ಲ !!

ಬೀದಿ ಬೀದಿಗೆ ಒಂದು 
ಹೆಸರಿಟ್ಟುಕೊಳ್ಳೋಣ
ನಮ್ಮ ಅನುಕೂಲಕ್ಕೆ ತಕ್ಕ ಹಾಗೆ
ಕಾದು ಸಾಕಾದಲ್ಲಿ
ಮುನಿದು ಜಗಳಾಡೋಣ
ಸಣ್ಣ ಅನುಮಾನಗಳು ಎದ್ದ ಹಾಗೆ

ಬರೆದವುಗಳನ್ನೆಲ್ಲ
ಹರಿದು ಹಂಚಿ ಬಿಡುವ
ಬಾಲಿಶ ಆ ಮೊದಲ ಅಕ್ಷರಗಳು
ಹೊಸದಾಗಿ ತಿದ್ದೋಣ
ಬೆರೆತ ಮನಸುಗಳಿಂದ
ಬೆಂಬಲಕಿದೆ ಹಲವು ಕಾರಣಗಳು

ನಾವು ಆಟವ ಮುಗಿಸಿ
ಬಿಟ್ಟ ಬುಗುರಿಗಳೆಲ್ಲ
ಚಾಟಿ ಮಾತುಗಳನ್ನು ಕೇಳುತಿಲ್ಲ
ಜೊತೆಗೆ ಬಿಟ್ಟು ಬಂದ
ಸಾಲು ಹೆಜ್ಜೆ ಗುರುತು
ಹಿಂದೆಯೇ ಜಾಡೊಂದ ಬಿಟ್ಟಿತಲ್ಲ!!

ನಮ್ಮ ಕುರಿತು ಎದ್ದ
ಗುಲ್ಲು ಸದ್ದುಗಳೀಗ
ಮೆಲ್ಲ ಮೆಲ್ಲಗೆ ಮಣ್ಣ ಮುಕ್ಕ ಬೇಕು
ನಮ್ಮ ಅಂಜಿಸುತಿದ್ದ
ಎಲ್ಲ ವಿಷಯಗಳಲ್ಲೂ
ಹುರುಳಿಲ್ಲವೆಂದೆಮಗೆ ತೋಚ ಬೇಕು

ಒಂದು ಅಪ್ಪುಗೆಯಿಂದ 
ಆಗಬಹುದಾದಂಥ 
ಎಡವಟ್ಟುಗಳನೆಲ್ಲ ತಪ್ಪಿಸೋಣ 
ಕಂಡ ಕನಸುಗಳಲ್ಲಿ 
ನಾವಿಬ್ಬರೇ ಇದ್ದು 
ಗುಟ್ಟುಗಳ ಗೋಜಲನು ಗುರುತಿಸೋಣ 

ಹಬ್ಬ ನಾನೊಬ್ಬ
ನೀನೊಬ್ಬಳಿದ್ದಾಗಲ್ಲ 
ನಾವಾಗಿ ಆಚರಿಸುವಾಗ ಅದು 
ಒಲವೆಂಬ ಸ್ಮೃತಿಯಲ್ಲಿ 
ನಿತ್ಯವೂ ಸಂಗೀತ 
ಬೇರಾವ ಗದ್ದಲವೂ ಬೆಲೆ ಬಾಳದು !!

                              -- ರತ್ನಸುತ

ದೂರವ ದೂರುತ!!

ಬಿಟ್ಟು ಹೋಗುವ ಮುನ್ನ 
ಉದುರಿ ಬಿಟ್ಟಿತು ಮರವು 
ಹಣ್ಣೆಲೆಯ ನೆಪದಲ್ಲಿ 
ಒಂದೆರಡು ಕಂಬನಿ 
ದೇಹ ದೂರಾದರೂ 
ನಂಟು ಬಿಕ್ಕುತ್ತಿದೆ 
ದುಃಖ ಹೆಚ್ಚಿದೆ ನೋಡು 
ನೆರಳಿಗೂ ಯಾತನೆ 

ಹತ್ತು ಸಾವಿರ ಸಾವ
ಸತ್ತು ಬದುಕಿದೆ ಕನಸು 
ಮತ್ತೆ ಸಾಯುವುದಕ್ಕೆ 
ಹೇಳಿದರೂ ಸರಿಯೇ 
ಇತ್ತ ಕಾಡ್ಗಿಚ್ಚಿನಲಿ 
ಅತ್ತ ಮರುಭೂಮಿಯಲಿ 
ನಡುವೆ ಸಿಕ್ಕವನವನೇ 
ಅಪರಿಚಿತ ವಿಧಿಯೇ?

ಚೂರುಗಲ್ಲಿಗೆ ಸಿಕ್ಕಿ 
ಭಾರವಾಯಿತು ಹೃದಯ 
ನೋವು ಕಾಣದೆ ಇದ್ದೂ 
ಎತ್ತರವೇ ಜೋರು 
ಒಂದರೊಂದಿಗೆ ಒಂದು 
ಸೇರಿ ಪೂರ್ಣತೆ ಅಂದು 
ದೂರಗೊಂಡಿರಲೀಗ 
ಪೂರ್ಣಿಸುವರಾರು?!!

ಬಾಯಿ ಬಂದಿದೆ ಈಗ 
ಆದ ಗಾಯಕೆ ಇಲ್ಲಿ 
ನಿಲ್ಲದಾಗಿದೆ ಅದರ 
ವಿರಹದ ಗೀತ
ಒಂದು ಕಂಬನಿ ತೊಟ್ಟು 
ಭೂಮಿ ಸೇರುವ ಮುನ್ನ 
ಸಾರಿ ಹೇಳಿದೆ ಮತ್ತೆ 
ಮತ್ತದೇ ಗಾಥೆ 

ಬಿಟ್ಟು ಬಾಳುವುದಕ್ಕೆ 
ಸಿಕ್ಕ ಉತ್ತರ ಹಿಂದೆ 
ಸಾಲುಗಟ್ಟಿದ ಪ್ರಶ್ನೆ 
ಇಲ್ಲ ಜವಾಬು 
ಸತ್ತ ದೇಹದ ಒಳಗೆ 
ಸಪ್ತ ಸಾಗರ ಉಸಿರು 
ಮೊರೆಯಿಕ್ಕುತಿದೆ ಅಲ್ಲಿ 
ನೆನಪೇ ಸಬೂಬು 

ಮತ್ತೊಂದು ಚಿಗುರಲ್ಲಿ 
ಸಂಭ್ರಮಿಸಿದೆ ಮರ 
ಮತ್ತೊಮ್ಮೆ ನೆರಳನ್ನು 
ಕೂಡಿ ನೋಡೋಣ 
ದೂರವಿದ್ದು ಆದ 
ಲಾಭ ನಷ್ಟದ ಕುರಿತು 
ಹೊತ್ತು ಮೀರುವ ಹಾಗೆ 
ಮಾತನಾಡೋಣ !!

               -- ರತ್ನಸುತ

Monday, 24 February 2014

ಸಕ್ರೆ ಮಂಡಿ ಬೀದೀಲಿ

ಸಕ್ರೆ ಮಂಡಿ ಬೀದೀಲಿ
ಇರ್ವೆ ಇರೋದ್ ಮಾಮೂಲಿ
ತಾಳ್ಮೆ ಇದ್ರೆ ತಡ್ಕೊಳ್ಳಿ
ಇಲ್ಲ ಒಳ್ಗೆ ಬಿಟ್ಕೊಳಿ

ಆನೆ ಇರೋದ್ ಕಾಡಲ್ಲಿ
ನಾವು ಇರೋದ್ ನಾಡಲ್ಲಿ
ಲೂಟಿ ಆಗೋದ್ ಆಗೋಗ್ಲಿ
ಆಮೇಲ್ ಬಾಯ್ ಬೊಡ್ಕೊಳಿ

ಮುದ್ದೆ ಮುರಿ ಸಾರಲ್ಲಿ
ನಿದ್ದೆ ಹೊಡಿ ಸಂತೆಲಿ
ಸೊಕ್ಕು ಮುರಿ ತೋಳಲ್ಲಿ
ಪ್ರೀತ್ಸು ಕಣ್ಣಲ್ಲಿ

ಚಿನ್ನ ಬೆಳಿ ಕೆಸ್ರಲ್ಲಿ
ಮಣ್ಣ ಮುಗಿ ದೇವ್ರಿಲ್ಲಿ
ತಾಯಿ ನುಡಿ ಉಸ್ರಲ್ಲಿ
ಗೆಲ್ಲು ಮಾತಲ್ಲಿ

ಮೂರಿರಲಿ, ಆರಿರಲಿ
ಮಾತು ಒಂದೇ ಆಗಿರಲಿ

ಸಕ್ರೆ ಮಂಡಿ..... ಸಕ್ರೆ ಮಂಡಿ.....

ಸಕ್ರೆ ಮಂಡಿ ಬೀದೀಲಿ
ಇರ್ವೆ ಇರೋದ್ ಮಾಮೂಲಿ
ತಾಳ್ಮೆ ಇದ್ರೆ ತಡ್ಕೊಳ್ಳಿ
ಇಲ್ಲ ಒಳ್ಗೆ ಬಿಟ್ಕೊಳಿ                                  

ಆನೆ ಇರೋದ್ ಕಾಡಲ್ಲಿ
ನಾವು ಇರೋದ್ ನಾಡಲ್ಲಿ
ಲೂಟಿ ಆಗೋದ್ ಆಗೋಗ್ಲಿ
ಆಮೇಲ್ ಬಾಯ್ ಬೊಡ್ಕೊಳಿ                       [೧]


ಗೂಡು ಇದೆ, ಸುಡುಗಾಡೂ ಇದೆ
ಇಲ್ಲಿ ಬೇಕು ಅಂದೋನಿಗೆ ಎಲ್ಲ ಇದೆ
ಆಟ ಇದೆ, ಹುಡುಗಾಟ ಇದೆ
ಹುಡುಗಾಟಕ್ಕೂ ಒಂದು ಅಂತ್ಯ ಇದೆ

ಕಣ್ಣು, ಮೂಗು, ಕಿವಿ, ಬಾಯಿ ಎಲ್ಲ
ನೆಟ್ಗಿದ್ದಂಗೇ ಹೊಗೆ ಹಾಕ್ಕೊಂಬಿಡಿ
ಕೋಳಿ ಮೂಳೆ ದಿನ ಸಿಕ್ಕೋದಿಲ್ಲ
ಉಪ್ಪಿನ್ಕಾಯಿ ಜೊತೆಗಿಟ್ಕೊಂಡಿರಿ                  [೨]

ಸಕ್ರೆ ಮಂಡಿ.....

                             -- ರತ್ನಸುತ    

ಕಂಡೂ ಕಾಣದ ದೇವರುಗಳು !!

ದೇವರು ಕೈ ಮುಗಿಯುತ್ತಿದ್ದಾನೆ 
ತನ್ನ ಭಕ್ತತನಿಗೆ,
ಭಕ್ತನೋ ಮುಲಾಜಿಲ್ಲದೆ
ಮುಗಿಸಿಕೊಳ್ಳುತ್ತಿದ್ದಾನಲ್ಲ?!!
 
ತಿರುಪೆ ಎತ್ತಿ ತಿನ್ನುವ 
ಹರಕಲು ಬಟ್ಟೆ ಧರಿಸಿದ ದೇವರು 
ನಾವು ಪೂಜಿಸುವ ರೂಪದಲ್ಲಿಲ್ಲವೇಕೆ?
ಅವನಿಗೆ ರೂಪ ಕೊಟ್ಟವರಾದರೂ ಯಾರು?
 
ಪಾಪ ಪರಿಹರಿಸಲು 
ನೈವೇದ್ಯ ರೂಪದಲ್ಲಿ ಎರೆದ ತಿನಿಸು 
ಪಾಪಿಷ್ಟರ ಹೊಟ್ಟೆಯಲ್ಲಿ ಜೀರ್ಣವಾದದ್ದು
ನೀಗಿಸಿಕೊಳ್ಳಲಾಗದ ಸತ್ಯ 
 
ಧೂಪದ ಘಾಟು ಹೊಗೆ 
ಕರಿ ಕಲ್ಲುಗಳಿಗೆ ಮತ್ತಷ್ಟು ಕಪ್ಪು ಮಸಿದು 
ಅಭಿಷೇಕದ ಪಂಚಾಮೃತಗಳು 
ಮೈ ಜಿಡ್ದಾಗಿಸಿವೆ 
ಆ ಕಲ್ಲು ದೇವರು ಯಾರಿಗೆ ಪ್ರೀತಿ?
 
ಗಂಟೆ ಬಾರಿಸಿ, ಬಾರಿಸಿ 
ಸ್ಪೀಕರ್ ಬಕೆಟ್ಟುಗಳ ಕೂಗಿಸಿ 
ಇವನೇ, ಇವನೇ ದೇವರೆಂದು 
ಹೊರಡಿಸುವ ಕೂಗು 
 
ಅದೇ ಕೂಗು ಎಚ್ಚೆತ್ತ
ಅಮ್ಮಳೆದೆಗಾಣದೆ ಹಸಿವಿನಿಂದ ಅತ್ತ 
ಹಸುಳೆಯನ್ನು ನಿದ್ದೆಗೆ ಜಾರಿಸಬಲ್ಲದೆ?
ಕಣ್ಣೀರ ಒರೆಸಬಲ್ಲದೆ?
 
ಒಮ್ಮತಕೆ ಸವಾಲು ಒಡ್ಡಿ 
ಕುಲ, ಮತ, ಧರ್ಮ, ಜಾತಿ, ಬಣ್ಣ 
ಇವೇ ಮುಂತಾದವುಗಳೊಂದಿಗೆ ಆಟವಾಡುವ 
ಮನುಜನದ್ದು ಕೊನೆಗೆ 
ಮಣ್ಣಲ್ಲಿ ಕೊಳೆವ ದೇಹವಷ್ಟೆ ಅಲ್ಲವೆ??
 
ಗೋರಿಗಳ ಸುತ್ತ ಸೀಮೆ ಗೋಡೆಗಳು,
ಧರ್ಮಕ್ಕೆ ಒಂದೊಂದು ವಿಭಾಗ 
ಭೂಮಿಗಾವ ಧರ್ಮ ಸ್ವಾಮಿ?
ಅಲ್ಲದ ಆಕಾಶವನ್ನೂ 
ಕ್ಷಿತಿಜದಲ್ಲಿ ಒಂದಾಗಿಸಿಕೊಳ್ಳುವ
ಭೂಮಿಗೇ ಈ ಪಾಡು?!!
 
ಅಂತರಂಗದಲಿ ನೆಲೆಸಿದ 
ಈಶ್ವರಲ್ಲೇಸುಗಳ ಕಿತ್ತು ಹೊರಗಿಟ್ಟು 
ವಿಂಗಡಿಸಿ ಮತ್ತೆ 
ಒಳ ಆಹ್ವಾನಿಸಿದ ನಾಲಿಗೆಯ ಮಂತ್ರ 
ಕುತಂತ್ರಗಳ ಕೂಪ

ಹಸಿವು, ನೋವು, ಕಣ್ಣೀರಿನಲ್ಲಿ 
ಕಾಣದ ದೇವರು 
ಯಾವ ದೈವ ಮಂದಿರದಲ್ಲೂ 
ಕಾಣಲೊಲ್ಲ 

ಲೋಕವೇ ಹೀಗಿದೆ ನೋಡಿ;
ದೇವರು ಕೈ ಮುಗಿಯುತ್ತಿದ್ದಾನೆ
ತನ್ನ ಭಕ್ತತನಿಗೆ,
ಭಕ್ತನೋ ಮುಲಾಜಿಲ್ಲದೆ
ಮುಗಿಸಿಕೊಳ್ಳುತ್ತಿದ್ದಾನೆ!! 

                           -- ರತ್ನಸುತ 

ಶಬರಿಯ ಕಣ್ಣೀರು!!

ವಾರ ಕಳೆದು ತವರ ಮನೆಗೆ 
ವರುಷ ತುಂಬಲಿಕ್ಕೆ ತಿಂಗಳು ಬಾಕಿ ಉಳಿದ
ಮಗುವ ಸಹಿತ ಇಳಿದು ಬಂದಳು
ಮಗಳು ಒಂದು ದಿನದ ಮಟ್ಟಿಗೆ
 
ಅಜ್ಜಿ ಅತ್ತಳು ವಾರದ ಹಿಂದಿನಂತೆಯೇ  
ತುಸು ಹೆಚ್ಚಿನ ಸಂತೋಷಕೆ;
ಮೊಮ್ಮಗನ ಮುದ್ದು ಮಾಡುವಾಸೆಯಿಂದ 
ಮಸಿ ಮೆತ್ತಿದ ಕೈಗಳ ಸೆರಗಿನಂಚಿಗೆ ಒರೆಸಿ
ಕಾರಿದ ಕಣ್ಣೀರ ಭುಜಗಳಿಗೆ ಹೊರೆಸಿ 
ತೆಕ್ಕೆಯಲ್ಲಿ ಬಳಸಲು ಮುಂದಾದಳು 
ಎಡವಿಕೊಂಡ ಹೆಬ್ಬೆರಳ ರಕ್ತವನ್ನೂ ಲೆಕ್ಕಿಸದೆ  
 
ಹಾಲ್ಗೆನ್ನೆ ಕಂದಮ್ಮ ಪಿಳಿ ಪಿಳಿ ನೋಡುತ್ತ 
ಒಮ್ಮೆ ಕಣ್ಣು ಮಿಟುಕಿಸಿ ಅಮ್ಮನೆಡೆಗೆ ನೋಡಿ 
ಮತ್ತೆ ಅಜ್ಜಿಯೆಡೆಗೆ ನೋಡಿ
ಚಾಚಿದ ಕೈಗಳ ಧಿಕ್ಕರಿಸಿ ಹೊರಳಿ ತನ್ನ 
ಅಮ್ಮನೆದೆಯ ಬಿಗಿದಪ್ಪಿ ಅತ್ತಿರಲು 
ಇತ್ತ ಸುಮ್ಮನಾಗಿದ್ದ ಅಜ್ಜಿಯ ಕಂಗಳು ತುಂಬಿ 
ತೊರೆ ತೊರೆಯ ಹರಿಸಿದವು ಮೌನದಲ್ಲಿ 
 
ದಿನಕ್ಕೆ ಕೇವಲ ಹದಿನೈದು ಗಂಟೆ ಎಚ್ಚರವಿದ್ದ 
ಮೊಮ್ಮಗನ ವರಿಸಿಕೊಳ್ಳಲು
ಅಜ್ಜಮ್ಮನ ಪಾಲಿಗೆ ಸಿಕ್ಕ ಚೂರು ಪಾರು ಸಮಯ 
ಕಣ್ಣೀರಿಗೇ ಸಾಲದಾಗಿತ್ತು. 
ತವರು ಮನೆಯ ತಂತಿ ಹಿಡಿದು 
ಮೀಟುತಿದ್ದ ಮಗಳ ಪಾಡು ಹೇಳ ತೀರದಾಗಿತ್ತು 
 
ಮರೆಯಲ್ಲೇ ನಿಂತು 
ನಗುವ ಆಸ್ವಾದಿಸಿ ಸಂಭ್ರಮಿಸಿದ ಅಜ್ಜಿ ತಾನು
ಆಟಕೆ ಬಾರದೆ ಮುರಿದ ಗೊಂಬೆ
ಮಗುವಿನ ಕೋಮಲ ಕರಗಳಿಂದ 
ಎಸೆಯಲ್ಪಟ್ಟರೂ ಸಹಜ ಸ್ಥಿತಿ
ಕಾಯ್ದಿರಿಸಿಕೊಂಡಂತೆಯೇ ಮರುಗಿದಳು 
 
ನೂರು ಮುದ್ದು ಪ್ರಶ್ನೆಗಳ ಮನಸಲ್ಲೇ ನುಂಗಿಕೊಂಡು
ನೂರ ಒಂದನೆಯ ಪ್ರಶ್ನೆ 
"ನಾ ಯಾರು ನೋಡಿ ಹೇಳು ಕಂದ?"
ನುಂಗಿಕೊಂಡ ನೂರೂ ಅದೇ ಪ್ರಶ್ನೆ!!

ಈ ಬಾರಿ ಅಳಲಿಲ್ಲ ತುಂಟ;
ಶೋಕೇಸಿನ ಗಾಜಿನ ಗೊಂಬೆ
ಬೇಕೆಂದು ಹಠ ಮಾಡಿದ 
ಕೇಳಿದ ಪ್ರಶ್ನೆಗೆ ಅಸಮಂಜಸ ಪ್ರತಿಕ್ರಿಯೆ ನೀಡಿ 

ಗಾಜು ಚೂರಾದರೂ ಚಿಂತೆಯಿಲ್ಲ 
ಬಾಚಿ ಅಪ್ಪಿ ಮುತ್ತನಿಟ್ಟು 
ಆಸೆ ಪಟ್ಟ ಗೊಂಬೆಯ ಕೈಯ್ಯಲಿಟ್ಟು 
ನಕ್ಕಳು ಅಜ್ಜಿ ಆನಂದದಿಂದ 
ರಾಮನ ಕಂಡ ಶಬರಿಯಂತೆ 
ನಗು, ಗೊಂಬೆ ಎರಡೂ ಜಾರದಂತೆ 
ಜಾಗ್ರತೆ ವಹಿಸಿ ಮತ್ತೆ 
ಅತ್ತಳು ನಾಳೆಗಳ ನೆನೆದು ಶಬರಿ 
 
                           -- ರತ್ನಸುತ

Thursday, 20 February 2014

ಹೆಜ್ಜೆ ಗುರುತು

ಕಥೆ ಹೇಳುತಿವೆ 
ಯಾರದ್ದೋ ಗುರುತುಗಳು 
ನನ್ನ ಹೆಜ್ಜೆ ಗುರುತುಗಳಿಗೆ;
ನಾ ಸಾಗಿ ಹೊರಟ ದಾರಿಯ ಕುರಿತು 
 
ಜೊತೆ ಬರಲು ಗೋಗರೆಯದೆ
ಅಲ್ಲಲ್ಲೇ ಬಿಟ್ಟು ಬಂದೆ
ಒಲ್ಲದ ಮನಸಿನ ಗುರುತುಗಳ 
ಸಂಚಯದಲ್ಲೊಂದಾಗಿಸಿ 
 
ಎಷ್ಟೋ ಬಾಳ ಬಂಡಿಗಳು 
ಅದೇ ದಾರಿಯಲಿ ಸಾಗಿ
ಚಕ್ರದಡಿಯಲ್ಲಿ ಮುಚ್ಚಿ ಹೋದರೂ 
ಮತ್ತೆ-ಮತ್ತೆ ಹುಟ್ಟಿಕೊಳ್ಳುತ್ತವೆ 
ಫೀನಿಕ್ಸ್ ಗುರುತುಗಳು
 
ಮಳೆ ತೋಯ್ದು ಹಸನಾದ ನೆಲದ 
ಅಂತರಾಳದ ತೇವ ಜಾರಿಸುತ್ತಿದೆ 
ಇಟ್ಟ ಹೆಜ್ಜೆಗಳ, ಆದರೂ 
ಬಿಟ್ಟುಗೊಡದ ನಕಾಶೆಗಳ ಹೊತ್ತು 
 
ಶವ ಯಾತ್ರೆಯಲ್ಲಿ ಎರಚಿದ ಹೂವು 
ಶವ ಹೊತ್ತ ಆ ನಾಲ್ವರ ತೂಕದ ಹೆಜ್ಜೆ
ಬೀಳ್ಗೊಟ್ಟ ಮಂದಿಯ ಕಣ್ಣೀರ ಗುರುತುಗಳ 
ಹೇಳ ತೀರದು //ಮೌನ ಸಂತಾಪ//

ನನ್ನವೆನ್ನುವವುಗಳ ಹಿಂದಿರುಗಿ 
ನಾನೇ ಗುರುತಿಸಲಾರದೆ,
ಅವು ನನ್ನವುಗಳಲ್ಲ 
ಹಿಂದುಳಿದು ಹಿಂಬಾಲಿಸಿ ಬಂದವರದ್ದು 

ನಾನೂ ಹಿಂಬಾಲಕನೇ!!
ನನ್ನ ನೆರವಿಗೂ ಇದ್ದಾವೆ 
ರಾಶಿ-ರಾಶಿ ಸ್ವಪ್ನಗಳ ಬೆಂಬಲಕೆ, 
ನಕ್ಕು ಸ್ವಾಗತಿಸಿದ ಯಾರೋ ಬಿಟ್ಟ 
ಅನುಕಂಪದ ಸುಳುವುಗಳು

ದಾರಿ ಉದ್ದಕ್ಕೂ ಪಡೆದವುಗಳೆಷ್ಟೋ,
ಕಳೆದವುಗಳೆಷ್ಟೋ!!
ಲೆಕ್ಕ ಹಾಕುತ್ತಾ ಹೋದರೆ
ಮತ್ತೊಂದು ಜೀವಮಾನ ವ್ಯರ್ಥ 
ಇದ್ದ ಜೀವನಕ್ಕೆ ಇದ್ದುದ್ದನ್ನೆಲ್ಲವ 
ಬಿಟ್ಟುಕೊಡುವುದೇ ನಿಜವಾದ ಅರ್ಥ !!

                                  -- ರತ್ನಸುತ

ಬಡವರ ಮನೆ ಹೂವು

ಹೂದೋಟದಲ್ಲಿ ಅಲೆದು 
ಉದುರಿಕೊಂಡ ಹೂವ ಹೆಕ್ಕಿ 
ಕಟ್ಟಿ ಮೂಡಿದೆ ನಿನ್ನ ಮುಡಿಗೆ 
ಮುನಿಯಲಿಲ್ಲ ತಾನು 
ತಡೆಯಲಿಲ್ಲ ನೀನು 
ಮೆತ್ತಲೊಲ್ಲದ ಗಂಧವ 
ಹೀರಿ ಬಿಟ್ಟ ಚಿಟ್ಟೆ ಹಾರಿ 
ನಕ್ಕಿತು ಎಂಜಲ ಕಂಡು!!

ಮುಡಿದ ಹೂವ ಪಾಲಿಗೆ 
ದೈವ ನಿನ್ನ ಕುರುಳು 
ಉದುರದುಳಿದ ಹೂಗಳು 
ನಕ್ಕವು ನಮ್ಮೀ ಸ್ಥಿತಿಗೆ 
ಬರಗೆಟ್ಟ ಹೊಟ್ಟೆಯಲ್ಲಿ 
ಹಸಿವಿನ ಝೇಂಕಾರಕೆ 
ಪುಡಿಗಾಸು ಸದ್ದಿರದ 
ನಿರ್ಗತಿಕನ ಜೇಬಿಗೆ 

ಸಣ್ಣ ನೋಟ ಸಮರದಲ್ಲಿ 
ಸೋತ ಮುಡಿಯ ಹೂ 
ನಿನ್ನ ಮುಂಗುರುಳ ಮರೆಗೆ 
ಕದ್ದು ಅಡಗಿಕೊಂತು 
ಇನ್ನೂ ಉಕ್ಕಿ ಅರಳಿ 
ಬೇರ ಸತ್ವದಿಂದ ಕೆರಳಿ 
ತೋಟದ ಹೂಗಳ ಸೊಕ್ಕ
ಬಣ್ಣಿಸುವುದೆಂತು 

ಮರುಕ ಸೂಸಿದ ನೀನು 
ತೆಕ್ಕೆಯಲ್ಲಿ ಬಿಗಿಗೊಂಡು 
ಕೆನ್ನೆಯಿಂದ ಕೆನ್ನೆಗೆ 
ಕಂಬನಿಗಳ ವಿನಿಮಯ    
ಪುಟ್ಟ ಗುಡಿಸಲಲ್ಲಿ ಸಣ್ಣ 
ಕನ್ನಡಿಯ ಸಿರಿವಂತಿಕೆ 
ನಾನು, ನೀನು, ತಾನಲ್ಲದೆ 
ಎಲ್ಲರಿಗೂ ಪರಿಚಯ

ಆ ರಾತ್ರಿಯ ಸುರತಕೆ 
ಹೊಸಕಿಹೋದ ಮುಡಿ ಹೂ 
ನಾಕ ಪಾಕ ಸವಿದು 
ಕೊನೆಯುಸಿರೆಳೆದವು ನಗುವಲಿ 
ಸಿಡಿಲು, ಭೋರ್ಗರೆದ ಮಳೆ 
ಬೇರು ಸಹಿತ ಕೊಳೆತ ಬಳ್ಳಿ 
ಕೆಸರ ನೆಲ ಕಚ್ಚಿ ತೋಟ-
ಹೂ ನರಕ ಬಯಲಲಿ 

                   -- ರತ್ನಸುತ

ಹುಣ್ಸೆ ತೋಪಿನ್ ನೆನ್ಪಲ್ಲಿ

ತಿಪ್ಪೆ ದಾರಿ ಹುಣ್ಸೆ ತೋಪು
ಅದ್ಯಾವ ಬಾಯ್ ಚಪ್ಪರ್ಸಿ
ಉಗ್ದ್ ಬೀಜಕ್ ಹುಟ್ಕೊಂಡ್ ಮರ್ವೋ!!
ಒಂದು ಇದ್ದುದ್ ಬೆಳ್ಕೊಂಡ್ ಮುಂದೆ
ನಲ್ವತ್ತಾರಕ್ಕಿಂತ್ಲೂ ಜಾಸ್ತಿ
ನೋಡ್ನೋಡ್ದಂಗೆ ತೊಪೀಗ್ ತೋಪು;
ಚಿಗ್ರು-ಪಗ್ರು ಲೆಕ್ಕಕ್ಕಿಲ್ಲ
ಹುಳಿ ಮಾತ್ರ ತಳ್ಳಂಗಿಲ್ಲ

ಹಳ್ಳಿ ಹೈಕ್ಳು ಮರ್ಕೋತಾಟ
ಆಟಾಡ್ಕೊಂಡೇ ತುಂಬುಸ್ಕೊಂಡು
ಇದ್ಬಂದ್ ಜೇಬು ತೂತು ಬಿದ್ದು
ಚಡ್ಡಿಯಾಸಿ ಜೋತಾಡ್ಸ್ಕೊಂಡು
ಪಾರಿ, ರಂಗಿ, ಶೀಲ, ಮಾಲ
ಲಂಗಕ್ಕೊಂದಿಷ್ಟಂತ ಸುರ್ದು
ಉಪ್ಪು ಖಾರ ಕದ್ದು ತಂದು
ಹುಣ್ಸೆ ಅದ್ದಿ ನಾಲ್ಗೆಗ್ ಅರ್ದು

ಗೌಡ್ರ ಮಗ್ಳು ತಿಂಗ್ಳು ಹಿಂದೆ
ತವ್ರು ತೊರ್ದು ಹೋಗಿದ್ ನೆಪ್ಪು
ಪಕ್ಕದ್ ಹಳ್ಳಿ ಜಮೀಂದಾರ್ರ
ಒಬ್ನೇ ಮಗನ್ನ ಲಗ್ನ ಆಗಿ
ಚಪ್ರ ಇನ್ನೂ ಹಸ್ರಾಗಿತ್ತು
ಸಿಂಗಾರ್ಬಂಡಿ ಹಂಗೇ ಇತ್ತು 
ಆಗ್ಲೇ ಬಯ್ಕೆ ಅಂತೆ ನೋಡಿ!!
ಹುಣ್ಸೆ ತೋಪಿಗ್ ಹೊಡಿ ಗಾಡಿ!!

ಹಾಯ್ಕೊಂಡ್ ಅಲ್ದಾಡ್ಕೊಂಡೇ
ಆಯ್ಕೊಂಡ್ ತುಂಬ್ಸಿದ್ ಬುಟ್ಟಿ ಎರ್ಡು
ವರ್ಸ ತುಂಬಿ ವರ್ಸ ಬಂತು
ಹುಳಿ ಸಾರು, ಮೆಣ್ಸಿನ್ ಸಾರು
ಹಿಚ್ಕಿ ಮಾಡ್ಕೊಂಡ್ ಹಸಿ ಗೊಜ್ಜು 
ಮೂರ್ಹೊತ್ಗೂ ಅದೇ ಸ್ವರ್ಗ;
ಪ್ಯಾಟೆದೋರು ಬಂದ್ರೂಂತಂದ್ರೆ
ಅರ್ವ್ಗೊಂದ್ ಚೂರು, ಇರ್ವ್ಗೊಂದ್ ಚೂರು!!

ತ್ವಾಟದ್ ಮನೆಲೇನೋ ಕಳ್ದು
ತೋಪಿನ್ ಮರಕ್ಕ ಹಗ್ಗ ಬಿಗ್ದು
ಕುತ್ಗೆ ಸೀಳಿ ಪ್ರಾಣ ಬಿಟ್ಳು
ಕುರಿ ಕಾಯೋ ಯಂಗ್ಟನ್ ಹೆಂಡ್ರು;
ಯಂಗ್ಟ ಅಲ್ಲೇ ಎದೆ ಬಡ್ಕೊಂಡ್
ಶಾಪ್ಗೋಳ್ ಕೊಟ್ಟು ಉಸ್ರು ಬಿಟ್ಟ
ಇಬ್ರೂ ಅಲ್ಲೇ ದ್ಯವ್ಗೋಳಾಗಿ
ಹೊಗೊರ್, ಬರೋರ್ನ ಕಾಡ್ತೌರಂತೆ!!

ಪೂಜಾರಪ್ಪ ಪಗ್ಡೆ ಹಾಕಿ
ಊರ್ ಗೌಡನ್ ತಲೆ ಕೆಡ್ಸಿ
ಗೌರ್ಮೆಂಟ್ ಆರ್ಡ್ರು ತರ್ಸೇ ಬಿಟ್ಟ
ಮಾರ್ಗೋಳೆಲ್ಲ ನೆಲಕ್ಕುರ್ಳಿ
ದ್ಯವ್ಗೋಳಷ್ಟೇ ತೊಲ್ಗಿದ್ದಲ್ಲ
ಆಟ ಆಡಿದ್ ಜೊತ್ಗಾರ್ರೂ 
ನೆರ್ಳಲ್ ಮಲ್ಗಿದ್ ಕನ್ಸ್ಗೋಳೂ 
ನಾಲ್ಗೆ ಚಪ್ಪರ್ಸಿದ್ ದಿನ್ಗೋಳು .....

                       -- ರತ್ನಸುತ

Wednesday, 19 February 2014

ಮಳೆಗ್ ಬಳೆ ತೊಡ್ಸಿ !!

ಮಳೆ ಸುರ್ದು ಒಲೆ ಸುಟ್ಟು
ಗಂಜಿ ಬೆಂದು ತಳ ಹಿಡ್ದು
ಮಡ್ಕೆ ಮಣ್ಣು ಕಪ್ಪು ಹೆಂಚು 
ಹೊಗೆ ಕಿಂಡಿ ಮಸಿ ಬಣ್ಣ 
ಮುಗಿವಲ್ತು ಮಗಿ ಆಟ 
ಮನೆ ಮ್ಯಾಗೆ ಆಲಿಕಲ್ಲು 
ಖಾರ ಹೆಚ್ಚಿ ಮುರಿ ಮೆಣ್ಸು 
ನಾಲ್ಗೆಗ್ ಉಪ್ಪಿನ್ಕಾಯಿ ಕನ್ಸು 
 
ಹಿತ್ಲ ಕೋಣೆ ಪಕ್ಕ ಕೊಟ್ಗೆ 
ದನ ಕರ್ಗೋಳ್ ಪೀಕ್ಲಾಟ 
ಗದ್ದೆ ದಾರಿ ಹವಾಯ್ ಚಪ್ಲಿ 
ಎರ್ಚು ಹಾರಿ ಬಟ್ಟೆ ಕೆಸ್ರು 
ಹಗ್ಗದ್ ಮ್ಯಾಲೆ ಬಟ್ಟೆ ನೆಂದೋ 
ಬಿತ್ತ ಬೀಜ ನಡುಗಿ ನೊಂದೋ 
ಕತ್ಲು ಕತ್ಲು ಸುತ್ತ ಮುತ್ಲೂ 
ಹೆಂಡ್ರು ದೀಪ ಯಾಕೋ ಮರ್ತ್ಲು 
 
ಉಪ್ಪರ್ಗೆ ತೊಟ್ ತೊಟ್ಟಿಟ್ಟು 
ಪಾತ್ರೆ ಪಗಡೆ ಬಾಯಿಗ್ ಕೊಟ್ಟು 
ತಣ್ವು ತಟ್ಟಿ ಗ್ವಾಡೆ ಬಿರ್ಕು 
ಬಾಗ್ಲು ಹಿಗ್ಗಿ ಹೊಸ್ಲು ತಡ್ದು 
ಹಟ್ಟಿ ಮುಂದೆ ರೊಟ್ಟಿ ತುಂಡು 
ಮಗಿ ಮರ್ತು ಬಿಟ್ಬಂದಾದೋ 
ಹಸ್ದು ಬೀದಿ ನಾಯಿ ಮೂಗು 
ಮೂಸಿ ಕಣ್ಣಿಗ್ ಸಿಕ್ಕೊಂಡಾದೋ 
 
ಸೌದೆ ಆರಿ, ಗಂಜಿ ಕಪ್ಪು 
ಎಣ್ಣೆ ಮುಗ್ದು ದೀಪ ಕಪ್ಪು 
ಮಗಿ ಆಡ್ತಾ ನಿದ್ದೆಗ್ ಜಾರಿ
ಮನೆ ತುಂಬ ನೆರ್ಳಿನ್ ದಾರಿ 
ನೀರಿನ್ ಮಡ್ಕೆ,ತಂಪು ಮಜ್ಗೆ 
ನೆಂಜ್ಕೊಳಾಕೆ ಈರುಳ್ಳಿ ಜೊತ್ಗೆ 
ಹಸಿ ಮಯ್ಯೀನ್ ಒಸಿ ತಡ್ವಿ 
ಕಿಸಕ್ಕಂತ ನಗು ಸದ್ದು 

ಎಲ್ಲಿನ್ ಜಾತ್ರೆ ಅಲ್ಲಿಗ್ ಬಿಟ್ಟು 
ಬೆಳ್ಕು ಕಾಣೋವರ್ಗೂ ಮರ್ತು 
ಲೋಕ ಎಂಬೋದೈತೆ ಒಂದು 
ನಮ್ಗ್ಯಾಕಮ್ಮಿ ಅದ್ರ ಕೊರ್ಗು 
ಮಗಿ ಅತ್ರೆ ಸೆರ್ಗು ಬಿಡ್ತೀನ್ 
ಸೆರ್ಗು ಬಿಟ್ರೆ ಮಗಿ ಕೊಡ್ತೀನ್ 
ಹಸ್ವು ಬಾಯಾರ್ಕೆ ತೀರ್ಸು 
ಮಳೆ ಕೈಗೆ ಬಳೆ ತೊಡ್ಸು..... 

                      -- ರತ್ನಸುತ 
 

ಕೆಂಪು ದೀಪದ ಕೆಳಗೆ

ಕೆಂಪು ಉರಿದ ದೀಪ
ಸುರತ ಸಮಯದ ತಾಪ 
ಹಿಡಿದ ಕೈಯ್ಯಲಿ ಅವರು 
ಹರಿಸಿ ಹಣೆಯಲಿ ಬೆವರು 
ಮಾತು ಅಳಿಯದ ಹೊರತು 
ಸೋತ ಸುಣ್ಣದ ಸರಸ 
ಆಗ ವಿಧಿ ಇಲ್ಲದೆ 
ಸ್ವಾವಲಂಬಿತ ವಿರಸ 
 
ನೆರಳು ನೆಚ್ಚಿನ ಮಿತ್ರ 
ದೂರ ಉಳಿದ ಒಡಲ 
ಕೂಡಬಲ್ಲದು ತಾನು 
ಕಪ್ಪು ಸುಂದರ ಚಿತ್ರ 
ಬಚ್ಚಿಟ್ಟ ಗುಟ್ಟುಗಳ 
ಎದೆಯ ಇಟ್ಟಿಗೆ ಗೂಡ
ಮೆಟ್ಟಿ ಮುರಿಯುವ ಸದ್ದು 
ರಟ್ಟುಗೊಳ್ಳುತಲಿರಲು 
 
ಗಂಟಲೊಣಗುವ ಮುನ್ನ 
ಒಂದು ಅಮೃತ ಪೇಯ 
ಮತ್ತೆ, ಮತ್ತೆ ಆರಿ 
ಮತ್ತೆ, ಮತ್ತೆ ಬೇಡಿ 
ದಕ್ಕಿದ್ದ ಸ್ವೀಕರಿಸಿ
ದಕ್ಕದ್ದ ಧಿಕ್ಕರಿಸಿ 
ದಿಕ್ಕುಗಾಣದ ಸ್ವರ್ಗಕೆ 
ಮೂರೇ ಗೇಣು 
 
ಕಾಲಿಟ್ಟ ನೆಲ ಹೆಂಚು 
ಹೂಮಂಚದ ಸಂಚು 
ಹೀಗೊಂದು ವ್ಯೂಹದಲಿ 
ಇಜ್ಜೋಡು ಮನಸುಗಳ 
ಬೇರೆಸುವ ತಂತ್ರದಲಿ 
ಸಮರಕ್ಕೆ ಸಜ್ಜಾದ
ಆತ್ಮಗಳ ನಡುವೆ 
ಸಂಭೋಗ ಯಾಗ 
 
ನಿಪುಣತೆಯ ದಾಟಿ 
ಪ್ರಫುಲ್ಲತೆಯ ಮೀಟಿ 
ಬತ್ತಳಿಕೆಯ ಬಾಣ 
ಇಟ್ಟ ಗುರಿ ಮುಟ್ಟಿ 
ಪಟ್ಟ ಪಾಡಿಗೆ ಸಂದ 
ತೃಪ ಗೆಲುವು 
ಪಾರದರ್ಶಕವೀಗ 
ಈರ್ವರೊಲವು... 

        -- ರತ್ನಸುತ 

ಬಾಲ ಮುರಿದ ಹಲ್ಲಿ

ಬಣ್ಣ ತುಂಬಿದ ಬಂಡಾರದೊಳಗೆ 
ಸತ್ತು ಬಿದ್ದಿತ್ತು ಹಲ್ಲಿಯೊಂದು. 
ಹಾಗೇ ಅದ್ದಲು ನೊಯ್ವುದು ಕುಂಚ 
ಬಳಿದರೆ ಮುನಿದುಕೊಂಬುದು ಗೋಡೆ 
ಬಣ್ಣ ಸಂಪನ್ನ ಉಸಿರಳಿದ ದೇಹವ 
ಲೆಕ್ಕಿಸದಾಯಿತು ಒಗೆದ ಬೆರಳು 
ಮೆತ್ತಿದ ಬಣ್ಣವ ಅಂಗಿಗೆ ಒರೆಸಿ 
ಕುಂಚಕೂ, ಗೋಡೆಗೂ ನಿಟ್ಟುಸಿರು. 
ಬಣ್ಣ ಹೀರಿ ಗೋಡೆ ಮಡಿಲ
ಮುತ್ತಿಟ್ಟ ಕುಂಚದ ಹಿಡಿಗೈ ಅಲುಗಾಡಿ
ಇಟ್ಟೆಡೆ ನಿಲ್ಲದೆ ಜಾರಿತು ಚುಕ್ಕಿ 
ಮೂಡಿದ ಡೊಂಕು ರೇಖೆಯ ಕೊನೆಗೆ 
ತೀಕ್ಷ್ಣತೆ ಕಳೆದ ಬಣ್ಣವ ಸವರಿ 
ಮರೆಯಾಯಿತು ಗೆರೆ, ಕಳಚಿತು ಕಣ್ಪೊರೆ 
ಸತ್ತು ಬಿದ್ದ ಹಲ್ಲಿ ಕಳೆದ,
ಮುರಿದು ಬಿದ್ದ ಬಾಲವಾಗಿ ಮೂಡಿತ್ತು. 
ಮಡಿ ಪಾಲಿಪ ಕುಂಚವು ನಾಚಿ
ಹೆಪ್ಪುಗಟ್ಟಿತು ಬಣ್ಣದ ಡಬ್ಬಿ 
ಕೂಡಿಸುವರಾರ್, ಸೇರಿಸುವರಾ-
-ರಿಹರು ಸತ್ತದರ ಬಾಲದ ಜೊತೆಗೆ?
ಯೊಚಿಸಿತು ಕೈ ತಾನು 
ಪರಶಿವನು ಗಣಪನ ಮಾಡಿಪ ರೀತಿ 
ಜೋಡಿಸಿ ಬಿಡಲು. 
ಸುಮ್ಮನಾಯಿತು ಮತ್ತೆ ಎಡಗೈ ನಗಲು. 
ಅನಿರೀಕ್ಷಿತ ಬಾಲ ಬಿಡಿಸಿದ ಕೈ 
ನಿರೀಕ್ಷಿತ ಒಡಲ ತಿದ್ದಿ ತೀಡಿ ಬೇಸತ್ತು 
ಶಿವನಲ್ಲ ತಾನೆಂಬ ಸತ್ಯ ಅರಿಯಿತಲ್ಲದೆ 
ಹಲ್ಲಿ ಹಂದರದ ನೆರಳ ಗೋಡೆಗೆ ಹಿಡಿದು 
ಬಾಲವಿಲ್ಲದೆ ಅಸುನೀಗಿದ ಆತ್ಮಕೆ
ಶಾಂತಿ ಕೋರಿತು ತನ್ನ 
ಪಾಪ ಪ್ರಜ್ಞೆಯ ತೊಳೆದು 
ಜೀವಮಾನವ ಕಳೆದು 
  
                                -- ರತ್ನಸುತ 

Tuesday, 18 February 2014

ಚೂರು ಚೂರಾಗಿ !!

ನಿಂತು ಬಿಡು ಚೂರು 
ಮಾತು ಕೇಳಿಸುವಂತೆ 
ಕಿವಿಯಗೊಡು ಒಮ್ಮೆ 
ಅಲ್ಪನ ಛೇಡಿಸುತ 
ಕಾಡುವುದು ಸಾಕು 
ವಿರಕ್ತಿಗೊಂಡರೆ ಮನಸ 
ಸರಿ ಪಡಿಸಲಾರೆ 
ಸರಿ ಹೋಗಲಾರೆ 

ಅತ್ತು ಬಿಡು ಚೂರು 
ಬತ್ತಿ ಹೋಗಲಿ ಪೀಡೆ 
ಮತ್ತೆ ಬರದಂತೆ 
ಬಿಕ್ಕಿ ಸಾಯಲಿ ಎದೆಯ 
ದುಃಖದ ಪರ್ವ 
ಹೊತ್ತು ಮುಳುಗುವ ಮುನ್ನ 
ನಕ್ಕು ಬಿಡು ಸಾಕು 
ನಿಟ್ಟುಸಿರನಿಡುವೆ 

ನಂಬಿ ಬಾ ಚೂರು 
ಈ ಎದೆಯ ಬಡಿತಕ್ಕೆ 
ನಿನ್ನೊಲವ ಸೂಸಿ 
ಕಾಣುವ ಕನಸಲ್ಲಿ 
ಬಣ್ಣಗಳ ಬೆರೆಸಿ 
ಮಾಗಿದ ಮನಸಲ್ಲಿ 
ರಂಗೋಲಿ ಬಿಡಿಸಿ 
ನಾ ದಣಿಯುವೆ 

ನಾಚಿ ಬಿಡು ಚೂರು 
ಗಲ್ಲವ ಸಾರಿಸಲು
ಕೆಮ್ಮಣ್ಣ ತಂದು
ಒಂದೊಂದು ಸಿಗ್ಗಲ್ಲಿ 
ಮೊಗ್ಗಂತೆ ಕಂಡು 
ಆಗಾಗ ಮಿಂಚಂತೆ 
ನನ್ನೊಮ್ಮೆ ಕೊಂದು 
ಉಸಿರನ್ನು ಮರೆವೆ 

ಕೆಣಕಿ ಬಿಡು ಚೂರು 
ದಿಕ್ಕು ತಪ್ಪಿದ ಹಡಗು 
ದಡ ಸೇರುವಂತೆ 
ಮಾತು ಮುರಿದ ನಡೆಗೆ 
ಚಾಟಿ ಬಡಿದಂತೆ 
ಮತ್ತೆ ಮತ್ತೆ ನಿನ್ನ 
ನೆನಪಾಗುವಂತೆ 
ನಾ ತಿದ್ದಿಕೊಳುವೆ 

ಮರೆತು ಬಿಡು ನನ್ನ 
ಮತ್ತೊಮ್ಮೆ ಮಗದೊಮ್ಮೆ 
ಒಲವಾಗುವಂತೆ 
ಬರೆಯದ ಕವಿತೆಗಳು 
ನೆನಪಾಗುವಂತೆ 
ಮುಗಿಯದ ಬದುಕೊಂದು 
ಚಿಗುರೊಡೆಯುವಂತೆ 
ನಿನಗೆ ಋಣಿಯಾಗುವೆ !!
 
                  -- ರತ್ನಸುತ

ನೀಲೋತ್ಪತ್ತಿ !!

ಬಿಳಿ ಹಾಳೆ ಮೇಲೆರಡು 
ನೀಲಿ ಅಕ್ಷರ ಶಾಯಿ 
ಶಾಯಿಯೆಂದನಿಸದೆ 
ವಿಕೃತ ಪಾನಮತ್ತ 
ಕಾಮನೆಯ ಚಿವುಟಿ  
ಎಚ್ಚರಿಸಿದವನೊಳಗೆ 
ಅಂತರಾತ್ಮವು ತಾನು 
ಪೋಲಿ ಗವಾಯಿ 
 
ಶೃಂಗಾರಕೆ ಪೋಲಿ-
-ತನದ ಹೆಸರಿಟ್ಟುದಕೆ 
ಅಶ್ಲೀಲ ಎದೆಯೊಡ್ಡಿ 
ಕಲುಷಿತ ನಡು ಬಾಗಿ 
ನೀಲಿ ಉಟ್ಟಾಗಸ
ಏದುಸಿರ ಬಿಡುತಿತ್ತು 
ಮಳೆ ಸುರಿದರೂ ಅದು 
ಬಚ್ಚಲ ನೀರೇ !!
 
ನವಿಲು ಗರಿ ಮುಚ್ಚಿತು 
ಆಸೆಗಳ ಅದುಮಿಟ್ಟು 
ಹೆಣ್ಣವಿಲು ಹಣ್ಣಾಗಿ 
ಕಣ್ಣುಗಳನರಳಿಸುತ 
ಹೆಣ್ತನವ ಹೊರ ಚಾಚಿ 
ಉಕ್ಕು ನಡೆಯಿಟ್ಟಲ್ಲಿ 
ಹೆಜ್ಜೆ ಗುರುತ ಬಿಡದೆ 
ಬಳಿಸಾರಿ ಬರಲು 
 
ನದಿಯ ತಡೆಗಟ್ಟಿತು 
ಮಿಲನ ಮೈಥುನದಿಂ-
-ದೇಳಬೇಕಿದ್ದ ಸುಳಿ-
-ಯನ್ನು ತಪ್ಪಿಸಿ ಕಡಲು 
ಚಂದಿರನ ಕಂಪನಕೆ 
ಹೊದಿಸಿ ಹಳೆ ಚಾದರವ 
ಬಿದ್ದ ಅಲೆಗಳ ಮತ್ತೆ 
ಹೊಡೆದೆಬ್ಬಿಸಿತ್ತು 
 
ತಬ್ಬಿಬ್ಬುಗೊಂಡು ತಾ 
ತಡವರಿಸಿ ನಾಲಿಗೆಯ 
ಅಳದೆ ಉಳಿದ ಹಸುಳೆ
ಹಸಿದು ಸತ್ತಿತ್ತು 
ಅಮ್ಮಳೆದೆಗೆ ಕನ್ನ 
ಇಟ್ಟವ ತಾನೊಬ್ಬ 
ಕಾಮಾಂಧನೇ? ಎಂಬ 
ಗೊಂದಲವ ಹೊತ್ತು 

ನೀಲಿ ಶುಭ್ರತೆಯಲ್ಲಿ 
ಪೋಲಿ ಗುಣವಾಚಕ 
ಪ್ರಕೃತಿಯ ನೈಜ್ಯ
ಶೃಂಗಾರ ತೋರ್ಗನ್ನಡಿ 
ಬಿಂಬ ಬೆತ್ತಲಗಂಡು 
ಕಣ್ಣು ಮುಚ್ಚುವುದಲ್ಲ 
ಕಣ್ಣ ಬೆತ್ತಲ ಮುಚ್ಚಿ 
ಬಿಂಬ ಮೆಚ್ಚುವುದು 

          -- ರತ್ನಸುತ

ಹಳೆ ಸಿನಿಮಾ !!

ಒಂದು ಹದಿನೈದು ವರ್ಷಗಳ ಹಿಂದಿನ ಮಾತು
ಹೈ ಸ್ಕೂಲಿಗೆ ಕಾಲಿಟ್ಟದ್ದೇ 
ಚಡ್ಡಿ ಹೋಗಿ ಪ್ಯಾಂಟು ಧರಿಸುವ ಹುಮ್ಮಸ್ಸು,
ಹೆಣ್ಣು ಮಕ್ಕಳಂತೂ ಮಂಡಿ ಕಾಣದಂತೆ 
ಉದ್ದುದ್ದ ಲಂಗದ ಮೊರೆ ಹೋಗಿದ್ದರು. 
ಮೊದಲೆಲ್ಲ ಒಟ್ಟಿಗೆ ಆಟವಾಡಿಸುತ್ತಿದ್ದ ಪಿ.ಟಿ ಮೇಷ್ಟ್ರು 
ಅಂದಿನಿಂದ ನಮಗೇ ಬೇರೆ, ಹೆಣ್ಣು ಮಕ್ಕಳಿಗೇ ಬೇರೆ.
ಎಂಟನೆ ಕಕ್ಷೆಯ ಬೆಂಚುಗಳು ಎರಡು ಸಾಲು; 
ಒಂದು ನಮಗೆ, ಮತ್ತೊಂದು ಅವರಿಗೆ
ಕಾದ ಬಿಸಿಯನ್ನೇ ಕಾಯಿಸಿಕೊಂಡು 
"ಹೀಗೇಕೆ ಮಾಡಿದಿರಿ ಮಿಸ್?!!" ಅನ್ನುವ ಥರದಲ್ಲಿ 
ದಿಕ್ಕೆಟ್ಟ ಹೆಣಗಳಂತೆ ಕಾಣುತ್ತಿದ್ದವು ಪಾಪ!!
ನೋಟ್ಸ್ ಕಾಪಿ ಕೇಳಿದರೂ ಮುಖದ ತುಂಬ
ಚಿಂತೆಯ ಗೆರೆಗಳ ಹೊತ್ತು ಮಾತನಾಡಿಸುತ್ತಿದ್ದ ಹೆಣ್ಗೆಳೆಯರು 
ಒಂದಿಷ್ಟು ರೂಪವತಿಯರಾಗಿದ್ದರೆ; ಕಥೆ ಅಷ್ಟೇ!! 
ಲವ್ವು-ಪವ್ವು ಪುಕಾರು, ಗೆಳೆಯರ ಗೇಲಿ 
ಹಿಂದೆಯೇ ರಾತ್ರಿಗಳ ವಿಚಿತ್ರ ಕನಸುಗಳು, 
ಎಲ್ಲೆಲ್ಲೋ ಏನೇನೋ ಬದಲಾವಣೆ,
ಬದಲಾವಣೆಗಳು ಸೃಷ್ಟಿಸಿದ ಅವಾಂತರಗಳು,
"ಈ ವಯಸ್ಸಲಿ ಇವೆಲ್ಲವೂ ಸಹಜ" ಎಂದು 
ಸಮಾಧಾನ ಪಡಿಸಿದ ಮತ್ತದೇ ಗೆಳೆಯರು. 
ಮೊದಲೆಲ್ಲ ಜೊತೆಯಲ್ಲೇ ಶಾಲೆಗೆ ಹೋಗಿ ಬಂದು 
ನಾ ಕಚ್ಚಿ ತುಂಡು ಮಾಡಿ ಕೊಟ್ಟ ಸೀಬೆಕಾಯಿ ತಿಂದು 
ಥ್ಯಾಂಕ್ಸ್ ಹೇಳಿ ನಕ್ಕು ಮಾತನಾಡಿಸುತ್ತಿದ್ದ ಪಕ್ಕದ ಮನೆಯ ಸಹಪಾಠಿ
ತಿಂಗಳು ರಜೆ ಹಾಕಿ ಸ್ಕೂಲಿಗೆ ಬಂದವಳೇ 
ದಿಢೀರ್ ಬದಲಾಗಿ ಬಿಟ್ಟಿದ್ದಳು,
ಆಗಲೇ ತಂತಮ್ಮ ತಿಂಗಳು ರಜೆ ಮುಗಿಸಿ ಬಂದಿದ್ದ 
ತಲೆ ಕೆಟ್ಟ ಬಾಲೆಯರೊಡನೆ ಸೇರಿ. 
ನಾವು, ಹುಡುಗರು ಒಂದು ದಿನ ಹುಷಾರು ತಪ್ಪಿ ರಜೆ ಹಾಕಿರೂ 
ನೂರು ಕಿರಿಕಿರಿ ಪ್ರಶ್ನೆ ಕೇಳುತ್ತಿದ್ದ ಮೇಡಮ್ಮು 
ಪಕ್ಕದ ಮನೆಯವಳನ್ನ ಒಂದೂ ಪ್ರಶ್ನೆ ಕೇಳದಿದ್ದಕ್ಕೆ 
ಕೋಪ ಬಂದಿದ್ದು ನಮ್ಮ ಇಡಿ ಹುಡುಗರ ಪಾಳೆಯಕ್ಕೆ. 
ಅಂದಿನಿಂದ ಮಾತು ಬಿಟ್ಟೆವು, ಆದರೆ ಚಟಗಳನ್ನಂತೂ ಬಿಡಲಾಗಲಿಲ್ಲ. 
ಅಂದು ಮಾತು ಬಿಡಿಸಿಕೊಂಡ ಹುಡುಗಿಯರು 
ಇಂದು ಎಲ್ಲಾದರೂ ಎದುರು ಸಿಕ್ಕರೆ 
ನಗುತ್ತ ಮಾತನಾಡಿಸುತ್ತಾರೆ. 
ನಾನೂ ಮಾತನಾಡಿಸುತ್ತೇನೆ 
ನಕ್ಕು ಇನ್ಯಾವುದೋ ವಿಷಯಕ್ಕೆ 
ಅವರು ನಕ್ಕಿದ್ದು ಅದೇ ವಿಷಯಕ್ಕೇ ಇರಬೇಕೆಂದು 
ಖಚಿತ ಊಹೆಗೈದು. 
 
                                                     -- ರತ್ನಸುತ 

Monday, 17 February 2014

ಚಿರಂತನ !!

ಆಗಿನ್ನೂ ನೀ ಕಣ್ಣು ಬಿಟ್ಟಿದ್ದೆ
ಇಡದ ಹೆಸರಲ್ಲಿ ಕರೆದಾಗ ಎಲ್ಲೋ ನೋಡುತ್ತಾ, ನುಲಿಯುತ್ತಾ, ಅಳುತ್ತಾ ಇದ್ದೆ 
ಅಮ್ಮಳಾರೆಂದು ಹುಡುಕುವ ಮುನ್ನವೇ ಬಾಚಿ ಅಪ್ಪಿದಳು 
ಅಮ್ಮ, ಅವಳಮ್ಮ, ಅವಳಮ್ಮ, ಅವಳಮ್ಮ 
ನೀ ನಾಲ್ಕು ತಲೆಮಾರು ಕಂಡ ಐದನೇ ತಲೆಮಾರಿನವ, ಅದೃಷ್ಟವಂತ 
ನಾನಿನ್ನೂ ಮಗ್ನನಾಗಿದ್ದೆ ಖುಷಿಯ ಸಾಗರದಲ್ಲಿ 
ನಾನೂ ಮಾವ, ನೀ ನನ್ನ ಸೋದರ ಅಳಿಯ ಗೊತ್ತಿದೆಯಾ?!!
ಹಾಲುಂಡು ಮೆಲ್ಲಗೆ ನಿದ್ದೆಗೆ ಜಾರಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ  
ನಡುಕದಲ್ಲೇ ಎತ್ತಿ ಎದೆಗಪ್ಪಿಕೊಂಡಾಗ ಕೆಂಪು ತುಟಿಗಳ ಒಮ್ಮೆ 
ಕಡುಗೆಂಪು ನಾಲಿಗೆ ಸವರಿ ಹೋಗಿದ್ದು, ನನ್ನ ಗೇಲಿ ಮಾಡಿದಂತಿತ್ತು 
ನೀ ಅತ್ತು ನಿದ್ದೆ ನೀಡದ ರಾತ್ರಿಗಳಲ್ಲಿ ಸೊಳ್ಳೆಗಳೂ ನಿದ್ದೆ ಮಾಡುತ್ತಿರಲಿಲ್ಲ ಅಳಿಮಯ್ಯ 
ನಿನ್ನ ಅಂಗೈ, ಅಂಗಾಲುಗಳ ಸೋಕಿದ ನನಗೆ 
ಬೇರೆಲ್ಲವೂ ಒರಟು ಅನಿಸುವಾಗ, ಈ ಮಾವನ ಎದೆ ಉಬ್ಬಿತ್ತು. 
ಉಚ್ಚೆ ಗೋಚಿಯ ಕಳಚಿ, ಕಕ್ಕಸ್ಸು ಮೆತ್ತಿದ ಕೈಗಳ ಗುಟ್ಟಾಗಿ ಮೂಸಿಕೊಂಡಿದ್ದೆ ಗೊತ್ತೇ?!!
ಕತ್ತು ನಿಲ್ಲದ ನಿನ್ನ ಎತ್ತಿ ಆಡಿಸುವಾಗ ನಗುತ್ತಿದ್ದೆ ನೀನು ಚೂರೂ ಭಯವಿಲ್ಲದಂತೆ, ಭಯವೆಲ್ಲ ನನಗೇ!!
ನೋಡು ನೋಡುತ್ತಾ ಬೆರಳಾಟಕೆ ಕಣ್ಣು ಆಡಿಸಿ ಹಿಂದೆಯೇ ಗುರುತು ಹಚ್ಚುತ್ತಿದ್ದೆ 
ನಿನ್ನದೇ ಭಾಷೆಯಲಿ ಹೆಸರಿಸಿ ಕರೆದು ಅಮ್ಮ, ಅಪ್ಪ, ತಾತ, ಅಜ್ಜಿ, ಮಾಮನ 
ಅಳು ಸಾರ್ವತ್ರಿಕ ನುಡಿ, ಎಲ್ಲಕ್ಕೂ ಅನ್ವಯಗೊಳ್ಳುವಂತದ್ದು ಅಲ್ಲವೇ?!!
ಅಂಬೆಗಾಲಿಟ್ಟು ಹೊಸಲು ದಾಟಿದಾಗ ಅದೇನು ಲೋಕ ಗೆದ್ದ ಖುಷಿ ನಿನಗೆ!!
ನನಗಂತೂ ಅಂದು ಒಬ್ಬಟ್ಟು, ಪಾಯ್ಸ ತಿಂದದ್ದು ದ್ವಿಗುಣ ಸಂತೋಷಕ್ಕೆ ಕಾರಣದ ದಿನ. 
ಚಿನ್ನ, ಪುಟ್ಟ, ರಾಜ, ಬಂಗಾರ. ಇನ್ನೆಷ್ಟು ಹೆಸರುಗಳು, ತಮ್ತಮಗೆ ತೋಚಿದ್ದೇ ಇಟ್ಟದ್ದು. 
ಅಂದೊಮ್ಮೆ ನೀ ಕುರ್ಚಿ ಹಿಡಿದು ನಿಂತಿದ್ದೆ 
ನಾ ಹಿಂದೆಯೇ ಕಾದಿದ್ದೆ, ಬೀಳುವ ಹೊತ್ತಿಗೆ ಹಿಡಿಯಲೆಂದು 
ನೀ ಬಿದ್ದೆ, ನಾ ಹಿಡಿದೆ. ನೀ ಅಲ್ಲೂ ನಕ್ಕೆ, ನಾ ಬೆಚ್ಚಿ ಬಿದ್ದೆ 
ಅಮ್ಮ ಎಂದು ಅಡಿಗಡಿಗೂ ಕರೆದಾಗ ಸಣ್ಣ ಹೊಟ್ಟೆ ಕಿಚ್ಚು 
ಮಾಮಾ ಅನ್ನಬೇಕಿತ್ತು ಮೊದಲು ಎಂದು. 
ಬಾಣಂತದ ಕೊನೆ ದಿನಗಳಲ್ಲಿ ನಿನ್ನ ಆಟ, ಅಬ್ಬಬ್ಬಾ ಪ್ರಳಯಾಂತಕ ನೀನು!!
ಚೆಲ್ಲಾಡಿದ ಆಟಿಕೆಗಳಲ್ಲಿ ಯಾವೂ ಬೇಡದೆ, ಅಡುಗೆ ಮನೆ ಪಾತ್ರೆ-ಪಗಡೆ ಎಲ್ಲವೂ ನಿನ್ನೆದುರೇ. 
ಮನೆ ಹೊರಗೇ ಕಣ್ಣು, ಹಾದವರ ಕರೆಯಲು ಒಂದು ದೊಡ್ಡ ಚೀರು, ಅದೇನು ಜೋರು!!
ಎಷ್ಟೇ ದೊಡ್ಡ ಮನೆಯಾದರೂ ಸಾಲದ ಕುಟೀರ ನಿನ್ನ ಮಾಮನ ಮನೆ. 
ಅಷ್ಟು ಬೇಗ ಬರಬಾರದಿತ್ತು ಆ ದಿನ 
ತುಂಬಿನ ಮನೆಯಲ್ಲಿ ಮೌನವ ತುಂಬಿ ಮಿಕ್ಕೆಲ್ಲವನ್ನೂ ದೋಚಿ 
ಹೊರಡಲು ಸಜಾಗಿದ್ದೆ ನಿನ್ನ ಮನೆಗೆ. "ಇದೂ ನಿನ್ನ ಮನೆಯೇ ಕಣೋ ಇದ್ದು ಬಿಡು"
ಗಂಟಲಲಿ ಸಿಕ್ಕಿಕೊಂಡ ಮಾತ ಹೊರಚೆಲ್ಲಿದ್ದು ಕಣ್ಣು, ಕಂಬನಿಯ ಮೂಲಕ. 
ಶಾಸ್ತ್ರ, ಸಂಪ್ರದಾಯಗಳನ್ನೆಲ್ಲ ಒಲೆಯ ಸೌದೆಯಾಗಿಸಿ 
ಸುಟ್ಟು ಬೂದಿ ಮಾಡುವಷ್ಟು ಕೋಪ
ಜೊತೆಗೆ ಮರುಕ ಪಟ್ಟು ಬಿಕ್ಕುತ್ತಿದ್ದ ಅಮ್ಮಳಿಗೂ 
ದುಃಖ ತೋರಿಕೊಳ್ಳದೆ ಗಂಭೀರವಾಗಿದ್ದ ಅಪ್ಪನಿಗೂ 
ಧೈರ್ಯ ನೀಡುವ ಜವಾಬ್ದಾರಿ 
ನೀನು ಅತ್ತ, ಯಾವುದೋ ಕಾರಣಕ್ಕೆ 
ನಾ ನಿನ್ನ ಬಿಗಿದಪ್ಪಿ ಅತ್ತೆ
"ಆಗಾಗ ಬರುವೆ ಹೋಗಿ ಬಾ ಕಂದ" ಎಂದು. 

                                              -- ರತ್ನಸುತ

ಇನ್ನೂ ಸಿಗದಾಕೆ !!

ಮೌನವ ನಾಚಿಸಿ ಹಾಡಿಸುವೆ 
ನೀನೇ ಮೌನ ವಹಿಸುತಲಿ 
ಧ್ಯಾನದ ಮಧ್ಯೆ ವ್ಯಾಪಿಸುವೆ 
ಇನ್ನೂ ಅಕ್ಕರೆ ತೋರುತಲಿ 
ಕತ್ತಲಿಗೊಂದು ಹೆಸರಿಡುವೆ 
ಅಲ್ಲೇ ಥಟ್ಟನೆ ಕನಸಿನಲಿ 
ಬೀಳುವ ಮುನ್ನ ಕೈ ಹಿಡಿವೆ 
ಆನಂತರಕೆ ದೂಡುತಲಿ 
 
ನಗೆಯ ಬುಗ್ಗೆಯ ಚಿಮ್ಮಿಸುವೆ 
ತಣಿಸಿ ಅದರ ಹನಿಗಳಲಿ 
ಕಾಗೆ ಗುಬ್ಬಿ ಕಥೆ ನುಡಿವೆ 
ನಂಬಿದೆನೆಂದು ಒಪ್ಪುತಲಿ 
ಹಸ್ತದ ಸಾಲನು ಸೆರೆ ಹಿಡಿವೆ 
ನಿನ್ನ ಹಸ್ತಕೆ ಜೋಡಿಸುತ 
ಚಟಗಳನೆಲ್ಲ ಬಿಡಿಸಿರುವೆ 
ಆಣೆಯ ಶೂಲಕೆ ಏರಿಸುತ 
 
ನಂದಾದೀಪದ ಬಳುಕಿನಲ್ಲಿ 
ನನ್ನ ನೆರಳನು ಬಳುಕಿಸಿದೆ 
ಎಂದೋ ಮುಂದಿನ ವಿಷಯಗಳ 
ಇಂದೇ ಕೂತು ಚರ್ಚಿಸುವೆ 
ಚಂದಾಮಾಮಾನ ತೋರಿಸುತ 
ತಾರೆಗಳ ಬೇಡಿಕೆ ಇಡುವೆ 
ದಿನದಂತ್ಯಕೆ ತಪ್ಪಿಸದಂತೆ 
ಮುತ್ತಿನ ಸೂಚನೆಯ ಕೊಡುವೆ 
 
ರಾಜಿ ಆಗುವ ಜಗಳಗಳ 
ಮತ್ತೆ ಮತ್ತೆ ಕೆಣಕಿಸುವೆ 
ಒಪ್ಪಿಗೆಯಾದ ಮಾತಿಗೆ ನೀ 
ಹಾಗೇ ಕಣ್ಣ ಮಿಟುಕಿಸುವೆ 
ನನ್ನಲಿ ಕಾಣದ ಪೌರುಷವ 
ನೀನೇ ತುಂಬಿಸಿ ಬಿಟ್ಟವಳು 
ಹೆಣ್ತನ ಇಣುಕಿನ ಪದ್ಯಗಳ 
ನನಗೇ ತೋಚದೆ ಬರೆಸಿದಳು 
 
ಗುಂಡಿಗೆ ಏಟಿಗೆ ಬೆಚ್ಚುವಲು 
ಎದೆಯ ಆಲಿಸಿ ಮಲಗಿರಲು 
ಚಂಡಿಯ ಹಾಗೆ ಎರಗುವಳು 
ಸುಳ್ಳಿಗೆ ಸಿಕ್ಕಿ ಬಿದ್ದಿರಲು 
ಆಧಾರ ತೋರುವ ಕೈ ಬೆರಳು 
ನೇವರಿಸಲು ನನ್ನ ತಲೆಯ 
ಎಲ್ಲಿ ಪರಿಣಿತಿ ಹೊಂದಿದಳೋ 
ನನ್ನ ಬರಸೆಳೆವ ಕಲೆಯ!!.. 

                     -- ರತ್ನಸುತ

Sunday, 16 February 2014

ತಮಟೆ ಸಾಂಗ್

ಓ ಗಿಳಿ, ಓ ಗಿಳಿ ಮಾತನಾಡೆ 
ಯಾರ್ ಹಣೆಲ್ ಏನಿದೆ ಓದಿ ಹೇಳೆ
ನೀ ನುಡಿದಾಗಲೇ ಅಕ್ಕಿ ಕಾಳೆ 
ಇಲ್ಲದೆ ಹೋದರೆ ಹಸ್ವು ನಾಳೆ      

ಅಥವ  

ಚುಕ್ಕಿಯ ಸುತ್ತಲು ರೇಖೆ ಮಾಲೆ 
ಮನಸಿನ ಮನ್ಮಥ ಕೈಯ್ಯ ಮೇಲೆ 
ನೋವನು ತಾಳೆಲೆ ಮುದ್ದು ಮಗಳೆ 
ಹಚ್ಚೆಗೆ ನಾಚಿತೆ ಕೈಯ್ಯ ಬಳೆ?

****
 
ಮಾತಲಿ ಥ್ರಿಲ್ಲಿದೆ, ಬೂಟಲಿ ಕಾಲಿದೆ 
ಹಲಗೆಯ ಏಟಿಗೆ, ಕುಣಿಯುವ ದಮ್ಮಿದೆ 
 
ನಾಲಿಗೆ ಅಂಚಿನಲಿ, ಹಾಡಿದ್ದೇ ಹಾಡಿನಲ್ಲಿ 
ಸ್ಟೆಪ್ ಹಾಕೋ ಮೂಡಿನಲಿ 
ಕೈ ಕಾಲು ಮಾತು ಕೇಳದೆ!! 

ಮಾತಲಿ ಥ್ರಿಲ್ಲಿದೆ, ಬೂಟಲಿ ಕಾಲಿದೆ
ಹಲಗೆಯ ಏಟಿಗೆ, ಕುಣಿಯುವ ದಮ್ಮಿದೆ
 
ಜಾತಿಯ ಬೀಡಿಯ ಬಾಯಿಗಿಡಿ 
ಹಚ್ಚಿರಿ ಸ್ನೇಹದ ಬೆಂಕಿ ಕಿಡಿ 
ಏಟಿಗೆ ಏಟನು ಕೊಟ್ಟು ಹೊಡಿ 
ಟೈಮಿದೆ ಯಾತಕೆ ಗಡಿ-ಬಿಡಿ                         [೧]


ಭೂ......ಮಿ ಕಂಡಂಗೆ ಕಣ್ಣು ಹಿಡಿ 
ದಾ......ರಿ ಹೋದಂಗೆ ನೇರ ನಡಿ 
ಮೂ......ರು ದಿವ್ಸಕ್ಕೆ ಬಗ್ಗಿ ದುಡಿ 
ಆ......ಮೇಲ್ ಮಣ್ಣಲ್ಲಿ ಹೂತು ಬಿಡಿ 

ಆದ್ರೆ ಒಂದು, ನನ್ ಮಾತು ಕೇಳಿ 
ಲೈಫು ಒಂದು ಬಿಳಿ ಹಾಳಿ ನೋಡಿ 
ಸರಿ, ತಪ್ಪು, ಏನೇ ಇರ್ಲಿ ಸ್ವಲ್ಪ 
ಅರ್ಥ ಆಗೋ ಹಂಗೆ ಬರಿ... 

ಬಾಳಿದು ಕೊಂಬಿರೋ ಎತ್ತಿನ ಗಾಡಿ 
ಚಾಟಿಯ ಕೈಯ್ಯಲಿ ಎತ್ತಿ ಹಿಡಿ 
ತೂರುವ ಮೈಯ್ಯನು ಸ್ಟೆಡಿ ಮಾಡಿ 
ಓಡಿಸು ಸೇದುತ ತುಂಡು ಬೀಡಿ 

ಕೋಗಿಲೆ ಕಪ್ಪಿದೆ, ಕಾಗೆನೂ ಕಪ್ಪಿದೆ 
ಹಾಡೋಕೆ ನಿಂತರೆ ಕೋಗಿಲೆ ಮುಂದಿದೆ 

ಖಾಲಿ ಡಬ್ಬದಲಿ, ಸೈರನ್ನು ಶಬ್ಧದಲಿ 
ಹಾರಾಡೋ ಗಾಳಿಯಲಿ 
ಹಾಡೊಂದು ಕೇಳಿ ಬಂದಿದೆ 

ಕೋಗಿಲೆ ಕಪ್ಪಿದೆ, ಕಾಗೆನೂ ಕಪ್ಪಿದೆ
ಹಾಡೋಕೆ ನಿಂತರೆ ಕೋಗಿಲೆ ಮುಂದಿದೆ                  [೨]


ಕಾ......ಸು ಇದ್ದಷ್ಟು ಚಾಪೆ ಹಾಸು 
ಕಾ......ಣು ಅಷ್ಟಕ್ಕೇ ಹಗ್ಲುಗನ್ಸು 
ಸಾ......ಲ ಕೊಡೋಕೆ ಎಲ್ರೂ ರೆಡಿ 
ತೀ......ರಿಸೋವಾಗ ಕಾರಪುಡಿ 

ಕಾಡಿ-ಬೇಡಿ, ಒಂದು ಪ್ರೀತಿ ಮಾಡಿ 
ಸೈಕಲ್ ಮೇಲೆ, ಡಬಲ್ ರೈಡು ಹೊಡಿ 
ಪಂಚೆರ್ ಆಗೋ ತನ್ಕ ಹಂಗೋ-ಹಿಂಗೋ 
ಕಷ್ಟ ಪಟ್ಟು ಮ್ಯಾನೇಜ್ ಮಾಡಿ 

ಬಾಡಿಗೆ ಸೂರಿದು ಸೋರೋವಾಗ 
ಕೈಲಿರೋ ಛತ್ರಿಯ ಓಪನ್ ಮಾಡಿ  
ಛತ್ರಿಲೂ ತೂತನು ಕಂಡ್ರೆ ಆಗ 
ತೇಪೆಯ ಹಾಕುತ ನಕ್ಕು ಬಿಡಿ 

ಹೇಳಲು ಏನಿದೆ, ಎಲ್ಲ ಹೇಳಾಗಿದೆ 
ಈ ದಿನ ಹಿಂಗಿದೆ, ನಾಳೆ ಇನ್ನೆಂಗಿದೆ 

ರೈಲು ಓಟದಲಿ, ಹೆಣ್ಮಕ್ಳ ಫೈಟಿನಲಿ    
ಚಪ್ಪಾಳೆ ಏಟಿನಲಿ 
ಬೀಟೊಂದು ಕೇಳಿ ಬಂದಿದೆ 

ಹೇಳಲು ಏನಿದೆ, ಎಲ್ಲ ಹೇಳಾಗಿದೆ
ಈ ದಿನ ಹಿಂಗಿದೆ, ನಾಳೆ ಇನ್ನೆಂಗಿದೆ                         [೩]

ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ.. 
ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ.. 
ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ, ಕುಣಿ.. 
ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ, ದಣಿ.. 

                                                                           -- ರತ್ನಸುತ

Friday, 14 February 2014

ಜನುಮದ ಜೋಡಿ

ಕಣ್ಗಪ್ಪು ಕರಗಿತ್ತು
ಕುಂಕುಮ ಚೆದುರಿತ್ತು
ನೆರಿಗೆ ಗೆರೆಗಳು 
ಮಕ್ಕಳ ಕೋರೆ ಗೀಟು
ಮಾತು ಮರೆಯಾಗಿತ್ತು
ಮೌನವೇ ಜೋರಿತ್ತು
ಅಹಮ್ಮುಗಳಿಗೆ ತಕ್ಕ
ಚಾಟಿಯ ಏಟು

ಕಣ್ಮುಚ್ಚಿ ತೆರೆವಾಗ
ತೊನೆದಾಡುವ ಸಿಗ್ಗು
ಸತ್ತ ಇರುವೆಯ ಹಾಗೆ
ನಟಿಸಿ ಅಧರ
ಕಣ್ತುಂಬಿ ನಂತರದಿ
ರೆಪ್ಪೆ ಬಡಿದುಕೊಳಲು
ಕೆನ್ನೆ ಮೇಲೆ ಸಣ್ಣ 
ನದಿ ಸಡಗರ

ಸೋತವುಗಳ ಸವರಿ
ಗೆದ್ದಾಗ ಗರಿಗೆದರಿ
ನವಿಲಾದರು ಕೊಂಚ
ಕುಣಿದು ದಣಿದು
ಆಗಂತುಕ ಮೊದಲು
ಆತಂಕದ ನಡುವೆ
ಅಂತ್ಯವು ರೋಚಕ-
-ವಾಗ ಬಹುದು

ತಾಳೆ ಹೂ ಗರಿಯೊಂದು
ತಳದಲ್ಲಿ ಕಮರಿತ್ತು
ಸುಕ್ಕು ಹಿಡಿದ ಚರ್ಮಕ್
ಸಿಕ್ಕಿ ಘಮಲು
ಮಳೆಗರೆಯದೆ ಒಂದು
ಮಿಂಚು ಮೂಡಿತು
ಅನ್ನುವಷ್ಟರಲ್ಲಿ
ಒದ್ದೆಯಾದ ಒಡಲು

ಇರುಳನ್ನು ಬೆಳಕುಂಡು
ಬೆಳಕು ಬೇಗೆಯ ಹರಡಿ
ಸಿಕ್ಕಾಯಿತು ಒಂದು
ಅಲ್ಪ ವಿರಾಮ
ಬೆಸುಗೆಯಾಗಿತ್ತಲ್ಲಿ
ಜನುಮ ಜನುಮದ ಜೋಡಿ
ಕುಂಟು ನೆಪ ಮಾತ್ರ
ನಡುವಿದ್ದ ಕಾಮ

              -- ರತ್ನಸುತ

Thursday, 13 February 2014

ಮೊಬೈಲ್ ಪ್ರೇಯಸಿ

ದೂರದಿಂದ ಕಂಡೆ
ಅವಳ ಒಂಟಿತನವ
ಭಾರಗೊಂಡಿದ್ದ ಜೋಡಿ
ಕಣ್ಣ ಕೊಡವ

ಬೆರಳು ಸೂಚಿಸಿತ್ತು
ಚೂರು ಹೆಚ್ಚು ದುಃಖ
ಕುರುಳು ಜೋತು ಆಡಿತ್ತು
ಕಿವಿಯ ಪಕ್ಕ

ಸುತ್ತ ಕಚ್ಚಿ ಉಗಿದ
ಸಾಲು ಉಗುರ ಚೂರು
ಕಾಣುತಿತ್ತು ಸ್ಪಷ್ಟ
ಕಣೀರ ಗೀರು 

ಗಲ್ಲ, ಮೂಗು ಥೇಟು ಅಲ್ಲಿ
ಸಂಜೆ ಬಾನು
ಮೌನ ದಾಟಿ ಬಾರದಿತ್ತು
ಮಾತು ತಾನು

ತೊಟ್ಟು ಜಾರದಂತೆ ತಡೆದ
ಒಂದು ಕೈಯ್ಯಿ
ಮತ್ತೊಂದು ಮುಚ್ಚಿತ್ತು
ಕಿವಿಯ ಬಾಯಿ

ಆಚೆ ತೀರದಲ್ಲಿ ಒಂದು
ಆಪ್ತ ಕೊರಳು
ವಿರಹ ಬೇಗೆ ಕಾರಣಾಗಿ
ಮಾತು ತೊದಲು

ಫೋನು ಸಹಿತ ಬಿಕ್ಕಿತಲ್ಲಿ
ಸ್ವಲ್ಪ ದೂರ
ಬ್ಯಾಟರಿ ಖಾಲಿ ಆಯ್ತು
ಅಲ್ಲಿ ಪೂರ

ಗೆಳೆಯನ ಕ್ಷಮಿಸಿ ಆಕೆ
ಇಟ್ಟ ಶಾಪ
ಮೊಬೈಲ್ ಕಂಪನಿ ಅವರು
ಅಯ್ಯೋ ಪಾಪ !!

                   -- ರತ್ನಸುತ

Wednesday, 12 February 2014

ಉಳಿದವನು ಇದ್ದಂತೆ !!

ಕೈ ಮುಗಿದು ಕರೆದಾಗ
ಕಣ್ಣೀರ ಒರೆಸೋರು ಯಾರಿಲ್ಲ 
ಹಸಿವಲ್ಲಿ ಜೋಗುಳದ ಹಾಡನು 
ಗೀಚೋದು ಸರಿಯಲ್ಲ 
 
ಮಲಗಿರುವ ಮಾತು 
ಮೌನವನು ಬಿಗಿದಪ್ಪಿ 
ಸತ್ತಂತೆ ತಾನು ಹೊರನೋಟಕೆ 
 
ಜೊತೆ ಯಾರೂ ಇರದೆ 
ಹುಡುಕಾಡಿ ಸಾಕಾಗಿ 
ನೆರಳನ್ನೇ ಕರೆದೆ ಜೂಟಾಟಕೆ 
 
ಉಸಿರನ್ನು ಉಳಿಸೋದು 
ಹೇಗಂತ ಕಲಿತಿಲ್ಲ ಪ್ರಾಣ 
ಚಿಗುರೊಡೆಯೋ ಆಸೆಲಿ 
ಮಣ್ಣಲ್ಲಿ ಹೂತಿಟ್ಟೆ ನನ್ನ                                   [೧]

 
ಆಕಾಶದಲ್ಲಿ ಹುಡುಕಾಡಿ ಬಂದೆ 
ನೀ ಬಿಟ್ಟು ಹೋದ ಹೆಜ್ಜೆ ಸಾಲನು 
ಆವೇಷದಲ್ಲಿ ಹಾರೋದ ಕಲಿತೆ 
ಭೂಮಿಗೂ ಬೇಲಿ ಹಾಕಿ ಬಂದೆನು 

ರೆಕ್ಕೆಯಲಿ ಕನಸೊಂದು ಕಾವೇರಿದೆ 
ಉದುರಿತ್ತು ತಾನಾಗಿ ಮರುಭೂಮಿ ನೆನಪಲ್ಲಿ 
ದೂರದಲಿ ಗೂಡೊಂದು ಹರಿದಾಗಿದೆ 
ಹಾರಾಡಲೇ ಬೇಕು ಚೀರಾಟ ದನಿಯಲ್ಲಿ 

ಮತ್ತೊಂದು ಮಳೆಗಾಲ 
ಬಂದಾಗಲೇ ಮುಂದೆ ಮಾತು 
ಸತ್ತಂತೆ ಬದುಕನ್ನು 
ನಡೆಸೋನಿಗೆ ಏನು ಗೊತ್ತು                            [೨]
 

ಮರೆತಂಥ ಮಾತೊಂದು 
ಎದುರಾಗಿ ನೆನಪಲ್ಲಿ ನಿಂತಾಗ 
ಕಥೆಯಲ್ಲಿ ನನಗೊಂದು 
ಪಾಲನ್ನು ಬರೆದಿಟ್ಟು ಕೂತಾಗಾ

ಬೇಡನ್ನಲೇಕೋ 
ಮನಸಾಗದೆ ಹೋಗಿ 
ಬೇಜಾರಿನಲ್ಲೇ ತಲೆ ಬಾಗಿದೆ 

ಅಲೆಯಾಗಿ ನನ್ನ 
ದಡದಲ್ಲಿ ಬಿಟ್ಟಾಗ 
ಹಿಂದಿರುಗಿ ಕಡಲ ನಾ ಸೇರಿದೆ 

ತಡ ಮಾಡಿ ಕೆರೆಯೊಂದು 
ಕೊಡುವಾಗ ಹಿಂದಿರುಗಿ ನೋಡು 
ಜೊತೆಯಾಗಿ ನಡೆದಾಗ
ಸಿಗಬಹುದು ಮನೆಗೊಂದು ಜಾಡು                   [೩]
 
                          -- ರತ್ನಸುತ

Tuesday, 11 February 2014

ಊಹಾ ಸುಂದರಿ !!

ನನ್ನ ಕಲ್ಪನೆಗಳಲ್ಲಿ 
ಕಟ್ಟಿಕೊಂಡ ನಿನ್ನ 
ಅದೆಷ್ಟು ಬಾರಿ ಕೆಡವಿ 
ಅದೆಷ್ಟು ಬಾರಿ ತಡವಿ- 
ತೀಡಿದೆನೋ ಲೆಕ್ಕವಿಲ್ಲ;
ಪ್ರಸ್ತುತ ಪ್ರಾಕಾರವ ನೀಡಲು 
ಮನ ಮೆಚ್ಚುವಂತೆ
 
ಹಾದು ಹೋದಾಗೆಲ್ಲ 
ಅಸಮಾದಾನವನು 
ನೀಗಿಸಿದ ನಿನ್ನ 
ಎಷ್ಟು ಹೊಗಳಿದರೂ ಕಡಿಮೆ!!
 
ಸಾಮಾನ್ಯನ ಎತ್ತರಕ್ಕೂ 
ಮೇರು ಚಂಚಲ ಚಿತ್ತ ನನ್ನದು,
ನನ್ನ ತರಂಗಗಳ ಸಮನಾಗಿ 
ಹರಿದ ಅಲೆ ನೀನು 
 
ಪಾದದಡಿ ತಲೆ ಊರಿಲು 
ನೆರಳ ದಯಪಾಲಿಸಿದೆ 
ಕೈ ಬೆರಳ ಕೆತ್ತಿಕೊಳಲು 
ಬೇಡನ್ನದೆ ಸುಮ್ಮನಿದ್ದೆ 

ಒಡ್ಯಾಣದ ಅಂಚ ಕೊರೆದೆ 
ನಡು ಕೊಂಚವೂ ಬಳುಕಲಿಲ್ಲ 
ಎದೆಗೆ ಉಳಿಯ ಹರಿಸಿ ಬಿಟ್ಟೆ 
ಕುಪ್ಪಸವೂ ಹಿಗ್ಗಲಿಲ್ಲ 

ಕಣ್ಣ ತಾಕಿದಾಗ 
ಹರಿಸದುಳಿದೆ ಒಂದೂ ಹನಿ 
ಕೆನ್ನೆ ನುಣುಪ ನೇವರಿಸಲು 
ಥೇಟು ಹಾಳೆ ಲೇಖನಿ 

ಮೂಗು ಹಿಡಿದು ಡೀ ಹೊಡೆದೆ 
ಅಲುಗಲಿಲ್ಲ ಬೊಟ್ಟು 
ಅಧರಕೆ ಆಕಾರವಿತ್ತೆ 
ಮಾಧುರ್ಯವ ಬಿಟ್ಟು 

ನಿನ್ನ ನನಗೆ ತೋಚಿದಂತೆ 
ಕೆತ್ತಿ, ಕೆತ್ತಿ ಬಿಟ್ಟೆ 
ಒಮ್ಮೆಯಾದರೂ ನಿನ್ನ 
ಎದೆಗೆ ಕಿವಿಗೊಡದೆ 
ನನ್ನೆದೆಗೆ ನಿನ್ನ ಅಪ್ಪಿ 
ಮಲಗಿದ ರಾತ್ರಿಗಳಲ್ಲಿ 
ನೀ ನನಗೆ ಚಿರಪರಿಚಿತೆ  
ನಾ ಆಗಂತುಕ ನಿನಗೆ 

ನಿನ್ನ ಹೋಲುವ ಹೆಣ್ಣು 
ಭೂಮಿಯ ಸ್ಪರ್ಶಿಸೊ ಮುನ್ನ 
ಉಸಿರು ನಿಂತು ಬಿಡಲಿ 
ಜೀವ ತರವಲ್ಲ ನಿನ್ನ ಭಾವಕೆ !!

ಊಹೆಗೂ ನಿಲುಕದ 
ನಿನ್ನ ಎದುರುಗಾಣಲಿಕ್ಕೆ 
ನಾ ಕಲ್ಪನೆಯಾಗುವೆ 
ನಿನ್ನ ಊಹೆಗನುಸಾರ 
 
                  -- ರತ್ನಸುತ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...