ಒಂದೆರಡು ಮಾತು ಪ್ರೀತಿಯಲ್ಲಿ

ಹಿಡಿಗೆ ಸಿಗದ ಜಡೆಯ
ಹೆಣೆದವರು ಯಾರೆಂದು
ಹೇಳದೆ ಓಡುವೆ
ಸರಿಯೇನು ಹುಡುಗಿ?
ಕಡೆಗೆ ಸಿಗುವ ನಿನ್ನ
ತುಂಟ ನಗು ಯಾಕೆಂದು
ಹೇಳದೆ ಉಳಿಸಿದೆ
ಹೋದೇನು ಕರಗಿ!!

ಸುಡುವ ಕತ್ತಲಿನಲ್ಲಿ
ಉರಿದ ತಣ್ಣನೆ ದೀಪ
ಪಿಸುಮಾತ ಹೇಳಿದೆ
ಕೇಳು ದಯ ಮಾಡಿ
ಬರಿಯ ಅಕ್ಷರದಲ್ಲಿ
ಎಲ್ಲ ಬರೆದಿಡಲಾರೆ
ಮೌನವನು ಕೆದಕಿಬಿಡು 
ಮಾತಿನೆಡೆ ದೂಡಿ

ಬಿಟ್ಟು ಹೋದರೆ ಹೇಗೆ
ಬಲಗಾಲ ಗೆಜ್ಜೆಯನು
ಎತ್ತಿಟ್ಟ ಕಿಸೆಯಲ್ಲಿ
ಅಡಿಗಡಿಗೂ ಹಾಡು
ದಿಕ್ಕು ತಪ್ಪಿದ ಹಾಗೆ
ಒಮ್ಮೊಮ್ಮೆ ನಟಿಸುವೆ
ಕೈ ಚಾಚಿ ನೀನಾಗ
ಕಂಗಳನು ನೋಡು

ಎಕಾಂತದಲಿ ಒಮ್ಮೆ
ಎದೆಯ ಚಿವುಟಿ ಹೋದೆ
ಆ ನೊವಿನಲ್ಲೊಂದು
ವಿಷಯವನ್ನಿಟ್ಟು
ಅಂದದ್ದು, ಕೊಂಡದ್ದು
ಎಲ್ಲವೂ ಮುಗಿದಿದೆ
ಬೇಕಿದ್ದ ಆ ಒಂದು
ವಿಷಯವ ಬಿಟ್ಟು

ತಾಳೆ ಬೀಸುವ ಜಾಗ
ನನಗಷ್ಟೇ ಗೊತ್ತಲ್ಲಿ
ಗುಟ್ಟುಗಳ ಆಲಿಸೋ
ಕಳ್ಳ ಕಿವಿಯಿಲ್ಲ 
ಆಣೆ ಪ್ರಮಾಣಗಳು
ತರವಲ್ಲದವರಿಗೆ
ನಮ್ಮ ನಡುವೆ ಅವು
ಲೆಕ್ಕಕ್ಕೇನಿಲ್ಲ 

ಭಯದಲ್ಲಿ ಆದದ್ದು
ವಿಸ್ಮಯ ಪ್ರೇಮ
ಅನುಭವ ನೂತನ
ಅವಿಸ್ಮರಣೀಯ
ಮಾತಿಗೂ ಹಾಡಿಗೂ
ನಡುವೆ ಗೀಟೆಳೆದು 
ಹಾಕುವ ಖುಷಿಗಳಿಗೆ
ಬಿಗಿ ಅಡಿಪಾಯ

ಹಿಂಡು ಗುಲಾಬಿಯಲಿ
ಇರಲಿ ಬಿಡು ಮುಳ್ಳು
ಚುಚ್ಚುವಂತಾದರೆ
ಅಂಜ ಬೇಡ
ಹಾಳಾದ ಮನಸನ್ನು
ಸರಿ ಮಾಡುತಿರುವೆ
ಸ್ಮೃತಿಯಲ್ಲಿ ನೆಲೆಯೂರಿ
ಗಿಂಜ ಬೇಡ !!

               -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩