Monday 24 February 2014

ಕಂಡೂ ಕಾಣದ ದೇವರುಗಳು !!

ದೇವರು ಕೈ ಮುಗಿಯುತ್ತಿದ್ದಾನೆ 
ತನ್ನ ಭಕ್ತತನಿಗೆ,
ಭಕ್ತನೋ ಮುಲಾಜಿಲ್ಲದೆ
ಮುಗಿಸಿಕೊಳ್ಳುತ್ತಿದ್ದಾನಲ್ಲ?!!
 
ತಿರುಪೆ ಎತ್ತಿ ತಿನ್ನುವ 
ಹರಕಲು ಬಟ್ಟೆ ಧರಿಸಿದ ದೇವರು 
ನಾವು ಪೂಜಿಸುವ ರೂಪದಲ್ಲಿಲ್ಲವೇಕೆ?
ಅವನಿಗೆ ರೂಪ ಕೊಟ್ಟವರಾದರೂ ಯಾರು?
 
ಪಾಪ ಪರಿಹರಿಸಲು 
ನೈವೇದ್ಯ ರೂಪದಲ್ಲಿ ಎರೆದ ತಿನಿಸು 
ಪಾಪಿಷ್ಟರ ಹೊಟ್ಟೆಯಲ್ಲಿ ಜೀರ್ಣವಾದದ್ದು
ನೀಗಿಸಿಕೊಳ್ಳಲಾಗದ ಸತ್ಯ 
 
ಧೂಪದ ಘಾಟು ಹೊಗೆ 
ಕರಿ ಕಲ್ಲುಗಳಿಗೆ ಮತ್ತಷ್ಟು ಕಪ್ಪು ಮಸಿದು 
ಅಭಿಷೇಕದ ಪಂಚಾಮೃತಗಳು 
ಮೈ ಜಿಡ್ದಾಗಿಸಿವೆ 
ಆ ಕಲ್ಲು ದೇವರು ಯಾರಿಗೆ ಪ್ರೀತಿ?
 
ಗಂಟೆ ಬಾರಿಸಿ, ಬಾರಿಸಿ 
ಸ್ಪೀಕರ್ ಬಕೆಟ್ಟುಗಳ ಕೂಗಿಸಿ 
ಇವನೇ, ಇವನೇ ದೇವರೆಂದು 
ಹೊರಡಿಸುವ ಕೂಗು 
 
ಅದೇ ಕೂಗು ಎಚ್ಚೆತ್ತ
ಅಮ್ಮಳೆದೆಗಾಣದೆ ಹಸಿವಿನಿಂದ ಅತ್ತ 
ಹಸುಳೆಯನ್ನು ನಿದ್ದೆಗೆ ಜಾರಿಸಬಲ್ಲದೆ?
ಕಣ್ಣೀರ ಒರೆಸಬಲ್ಲದೆ?
 
ಒಮ್ಮತಕೆ ಸವಾಲು ಒಡ್ಡಿ 
ಕುಲ, ಮತ, ಧರ್ಮ, ಜಾತಿ, ಬಣ್ಣ 
ಇವೇ ಮುಂತಾದವುಗಳೊಂದಿಗೆ ಆಟವಾಡುವ 
ಮನುಜನದ್ದು ಕೊನೆಗೆ 
ಮಣ್ಣಲ್ಲಿ ಕೊಳೆವ ದೇಹವಷ್ಟೆ ಅಲ್ಲವೆ??
 
ಗೋರಿಗಳ ಸುತ್ತ ಸೀಮೆ ಗೋಡೆಗಳು,
ಧರ್ಮಕ್ಕೆ ಒಂದೊಂದು ವಿಭಾಗ 
ಭೂಮಿಗಾವ ಧರ್ಮ ಸ್ವಾಮಿ?
ಅಲ್ಲದ ಆಕಾಶವನ್ನೂ 
ಕ್ಷಿತಿಜದಲ್ಲಿ ಒಂದಾಗಿಸಿಕೊಳ್ಳುವ
ಭೂಮಿಗೇ ಈ ಪಾಡು?!!
 
ಅಂತರಂಗದಲಿ ನೆಲೆಸಿದ 
ಈಶ್ವರಲ್ಲೇಸುಗಳ ಕಿತ್ತು ಹೊರಗಿಟ್ಟು 
ವಿಂಗಡಿಸಿ ಮತ್ತೆ 
ಒಳ ಆಹ್ವಾನಿಸಿದ ನಾಲಿಗೆಯ ಮಂತ್ರ 
ಕುತಂತ್ರಗಳ ಕೂಪ

ಹಸಿವು, ನೋವು, ಕಣ್ಣೀರಿನಲ್ಲಿ 
ಕಾಣದ ದೇವರು 
ಯಾವ ದೈವ ಮಂದಿರದಲ್ಲೂ 
ಕಾಣಲೊಲ್ಲ 

ಲೋಕವೇ ಹೀಗಿದೆ ನೋಡಿ;
ದೇವರು ಕೈ ಮುಗಿಯುತ್ತಿದ್ದಾನೆ
ತನ್ನ ಭಕ್ತತನಿಗೆ,
ಭಕ್ತನೋ ಮುಲಾಜಿಲ್ಲದೆ
ಮುಗಿಸಿಕೊಳ್ಳುತ್ತಿದ್ದಾನೆ!! 

                           -- ರತ್ನಸುತ 

1 comment:

  1. "ಹಸಿವು, ನೋವು, ಕಣ್ಣೀರಿನಲ್ಲಿ
    ಕಾಣದ ದೇವರು
    ಯಾವ ದೈವ ಮಂದಿರದಲ್ಲೂ
    ಕಾಣಲೊಲ್ಲ "

    ನಿಜವಾದ ಮಾತು ಸಾರ್.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...