Tuesday 11 February 2014

ಊಹಾ ಸುಂದರಿ !!

ನನ್ನ ಕಲ್ಪನೆಗಳಲ್ಲಿ 
ಕಟ್ಟಿಕೊಂಡ ನಿನ್ನ 
ಅದೆಷ್ಟು ಬಾರಿ ಕೆಡವಿ 
ಅದೆಷ್ಟು ಬಾರಿ ತಡವಿ- 
ತೀಡಿದೆನೋ ಲೆಕ್ಕವಿಲ್ಲ;
ಪ್ರಸ್ತುತ ಪ್ರಾಕಾರವ ನೀಡಲು 
ಮನ ಮೆಚ್ಚುವಂತೆ
 
ಹಾದು ಹೋದಾಗೆಲ್ಲ 
ಅಸಮಾದಾನವನು 
ನೀಗಿಸಿದ ನಿನ್ನ 
ಎಷ್ಟು ಹೊಗಳಿದರೂ ಕಡಿಮೆ!!
 
ಸಾಮಾನ್ಯನ ಎತ್ತರಕ್ಕೂ 
ಮೇರು ಚಂಚಲ ಚಿತ್ತ ನನ್ನದು,
ನನ್ನ ತರಂಗಗಳ ಸಮನಾಗಿ 
ಹರಿದ ಅಲೆ ನೀನು 
 
ಪಾದದಡಿ ತಲೆ ಊರಿಲು 
ನೆರಳ ದಯಪಾಲಿಸಿದೆ 
ಕೈ ಬೆರಳ ಕೆತ್ತಿಕೊಳಲು 
ಬೇಡನ್ನದೆ ಸುಮ್ಮನಿದ್ದೆ 

ಒಡ್ಯಾಣದ ಅಂಚ ಕೊರೆದೆ 
ನಡು ಕೊಂಚವೂ ಬಳುಕಲಿಲ್ಲ 
ಎದೆಗೆ ಉಳಿಯ ಹರಿಸಿ ಬಿಟ್ಟೆ 
ಕುಪ್ಪಸವೂ ಹಿಗ್ಗಲಿಲ್ಲ 

ಕಣ್ಣ ತಾಕಿದಾಗ 
ಹರಿಸದುಳಿದೆ ಒಂದೂ ಹನಿ 
ಕೆನ್ನೆ ನುಣುಪ ನೇವರಿಸಲು 
ಥೇಟು ಹಾಳೆ ಲೇಖನಿ 

ಮೂಗು ಹಿಡಿದು ಡೀ ಹೊಡೆದೆ 
ಅಲುಗಲಿಲ್ಲ ಬೊಟ್ಟು 
ಅಧರಕೆ ಆಕಾರವಿತ್ತೆ 
ಮಾಧುರ್ಯವ ಬಿಟ್ಟು 

ನಿನ್ನ ನನಗೆ ತೋಚಿದಂತೆ 
ಕೆತ್ತಿ, ಕೆತ್ತಿ ಬಿಟ್ಟೆ 
ಒಮ್ಮೆಯಾದರೂ ನಿನ್ನ 
ಎದೆಗೆ ಕಿವಿಗೊಡದೆ 
ನನ್ನೆದೆಗೆ ನಿನ್ನ ಅಪ್ಪಿ 
ಮಲಗಿದ ರಾತ್ರಿಗಳಲ್ಲಿ 
ನೀ ನನಗೆ ಚಿರಪರಿಚಿತೆ  
ನಾ ಆಗಂತುಕ ನಿನಗೆ 

ನಿನ್ನ ಹೋಲುವ ಹೆಣ್ಣು 
ಭೂಮಿಯ ಸ್ಪರ್ಶಿಸೊ ಮುನ್ನ 
ಉಸಿರು ನಿಂತು ಬಿಡಲಿ 
ಜೀವ ತರವಲ್ಲ ನಿನ್ನ ಭಾವಕೆ !!

ಊಹೆಗೂ ನಿಲುಕದ 
ನಿನ್ನ ಎದುರುಗಾಣಲಿಕ್ಕೆ 
ನಾ ಕಲ್ಪನೆಯಾಗುವೆ 
ನಿನ್ನ ಊಹೆಗನುಸಾರ 
 
                  -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...