ಜೊತೆಯಲ್ಲಿ ಹೀಗೆಲ್ಲ !!

ಬೀದಿ ಬೀದಿಗೆ ಒಂದು 
ಹೆಸರಿಟ್ಟುಕೊಳ್ಳೋಣ
ನಮ್ಮ ಅನುಕೂಲಕ್ಕೆ ತಕ್ಕ ಹಾಗೆ
ಕಾದು ಸಾಕಾದಲ್ಲಿ
ಮುನಿದು ಜಗಳಾಡೋಣ
ಸಣ್ಣ ಅನುಮಾನಗಳು ಎದ್ದ ಹಾಗೆ

ಬರೆದವುಗಳನ್ನೆಲ್ಲ
ಹರಿದು ಹಂಚಿ ಬಿಡುವ
ಬಾಲಿಶ ಆ ಮೊದಲ ಅಕ್ಷರಗಳು
ಹೊಸದಾಗಿ ತಿದ್ದೋಣ
ಬೆರೆತ ಮನಸುಗಳಿಂದ
ಬೆಂಬಲಕಿದೆ ಹಲವು ಕಾರಣಗಳು

ನಾವು ಆಟವ ಮುಗಿಸಿ
ಬಿಟ್ಟ ಬುಗುರಿಗಳೆಲ್ಲ
ಚಾಟಿ ಮಾತುಗಳನ್ನು ಕೇಳುತಿಲ್ಲ
ಜೊತೆಗೆ ಬಿಟ್ಟು ಬಂದ
ಸಾಲು ಹೆಜ್ಜೆ ಗುರುತು
ಹಿಂದೆಯೇ ಜಾಡೊಂದ ಬಿಟ್ಟಿತಲ್ಲ!!

ನಮ್ಮ ಕುರಿತು ಎದ್ದ
ಗುಲ್ಲು ಸದ್ದುಗಳೀಗ
ಮೆಲ್ಲ ಮೆಲ್ಲಗೆ ಮಣ್ಣ ಮುಕ್ಕ ಬೇಕು
ನಮ್ಮ ಅಂಜಿಸುತಿದ್ದ
ಎಲ್ಲ ವಿಷಯಗಳಲ್ಲೂ
ಹುರುಳಿಲ್ಲವೆಂದೆಮಗೆ ತೋಚ ಬೇಕು

ಒಂದು ಅಪ್ಪುಗೆಯಿಂದ 
ಆಗಬಹುದಾದಂಥ 
ಎಡವಟ್ಟುಗಳನೆಲ್ಲ ತಪ್ಪಿಸೋಣ 
ಕಂಡ ಕನಸುಗಳಲ್ಲಿ 
ನಾವಿಬ್ಬರೇ ಇದ್ದು 
ಗುಟ್ಟುಗಳ ಗೋಜಲನು ಗುರುತಿಸೋಣ 

ಹಬ್ಬ ನಾನೊಬ್ಬ
ನೀನೊಬ್ಬಳಿದ್ದಾಗಲ್ಲ 
ನಾವಾಗಿ ಆಚರಿಸುವಾಗ ಅದು 
ಒಲವೆಂಬ ಸ್ಮೃತಿಯಲ್ಲಿ 
ನಿತ್ಯವೂ ಸಂಗೀತ 
ಬೇರಾವ ಗದ್ದಲವೂ ಬೆಲೆ ಬಾಳದು !!

                              -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩