ಒಳಗಣ್ಣ ತೆರೆದು

ಐದು ತಲೆ ಹಾವನ್ನು ಕಾಣಲು 
ಗಂಟೆಗಟ್ಟಲೆ ಕಾದು ನಿಂತ ಮಂದಿ 
ಪಕ್ಕದಲ್ಲೇ ಲಾರಿ ಚಕ್ರಕ್ಕೆ ಸಿಕ್ಕಿ 
ಸತ್ತು ಬಿದ್ದ ಬೀದಿ ನಾಯಿಯ 
ಕೊಳೆತ ದೇಹಕ್ಕೆ ಮುತ್ತಿಕೊಂಡ 
ನೊಣಗಳ ಆಗಾಗ ಚೆದುರಿಸಿ 
ಕುಕ್ಕಿ ಕುಕ್ಕಿ ತಿನ್ನುತ್ತಿದ್ದ ಕಾಗೆಯ ಕಂಡು 
ಸಂತಾಪ ಸೂಚಿಸದೆ ಹೋದರು 
 
ಗಾರೆ ಕೆಲಸದಾಕೆಯ ಕುಪ್ಪಸಕ್ಕೆ 
ಮೆತ್ತಿದ ಸೆಮೆಂಟಿನ ಧೂಳು 
ಅದೇ ಸಮಯಕ್ಕೆ ಕೌದಿಯಲ್ಲಿ 
ಮಲಗಿದ್ದ ಹಸುಳೆಯ ಅಳಲು 
ಮಳೆ ನೀರ ಗುಂಡಿಯಲಿ 
ಮೊಲೆಯನ್ನು ಅವಸದಿ ತಡವಿ 
ಹಾಳುಣಿಸುವಾಗ 
ಮೇಸ್ತ್ರಿಗೆ ಮೈಯ್ಯೆಲ್ಲಾ ಕಣ್ಣು 

ಆಗಷ್ಟೇ ಎದೆ ಬಂದ 
ಬಾಲ ಕಾರ್ಮಿಕ ಹುಡುಗಿ 
ಸಾಹೇಬನ ಬೂಟು ಒರೆಸಿ ಎದ್ದಾಗ 
ಚೆಲ್ಲಾಡಿದ ಸುತ್ತ ಕೈ ತುಂಬ ಚಿಲ್ಲರೆ 
ಆಯ್ದದಷ್ಟೂ ತನದೇ ಅಂದಾಗ 
ಮೈ ಮರೆತು ಆಯ್ದ ಆಕೆ 
ಹಾಸಿಗೆ ಹಿಡಿದ ತಾಯಿಯ ಮದ್ದಿಗೆ 
ಲೆಕ್ಕ ಹಾಕಿದಳು, ಲೋಕದ ಕಣ್ಣನ್ನು ಧಿಕ್ಕರಿಸಿ 

ತೀಟೆ ತೀರುವ ಮುನ್ನ 
ಮೈ ಮಾರಿಕೊಂಡವಳ ರತಿ ರೂಪ ಕಂಡು 
ಮೈ ಮರೆತ ಮದನರು 
ಕಾಮ ದಾಹ ದಾಟಿಸಿದ 
ಮಂಚಕೆ ಮಡಿಯನ್ನು ಕಟ್ಟಿ 
ಎಡಗೈಯ್ಯಲೆಸೆದರು ನೋಟ 
ಬೀರುತ ನಿಕೃಷ್ಟ ನೋಟ 
ಹಂಗಾಮಿ ಹೆಂಡತಿಯರೆಡೆಗೆ  

ಭಿಕ್ಷೆ ಬೇಡಿದ ಕೊರಳ 
ಅಪಸ್ವರಕೆ ಕಿವಿ ಮುಚ್ಚಿ 
ಸಿಂಡರಿಸಿಕೊಂಡಾಗ ಮುಖದಲ್ಲಿ ಮೂಡಿದ 
ಗೆರೆಗಳಿಗೆ ಅರಿವಾಗದ ಸಂಕಟ 
ಕೊನೆ ಪಕ್ಷ ಹೊಟ್ಟೆಗಾದರೂ 
ಅರಿವಾಗಬೇಕಿತ್ತು ಗದರುವ ಮುನ್ನ 
ನೊಂದ ಮನಸಿಗೆ ಮತ್ತೂ 
ಖಿನ್ನತೆಯ ಬಡಿಸುವ ಮುನ್ನ 

ಕೀವು ಗಾಯಗಳನ್ನು ಕೀಳಾಗಿ ಕಂಡ
ಕಣ್ಣುಗಳೊಳ ಗಾಯಕೆ 
ಕರುಣೆ ಔಷಧದ ಅನಿವಾರ್ಯ ಕೊರತೆಯ
ನೀಗಿಸುವ ಮನಸು ಬಲವಾಗಬೇಕಿದೆ 
ನಾಳೆಗಳ ಮಾನವೀಯ ಮೌಲ್ಯಗಳ-
-ಲೊಳಪಡಿಸಲು
ಕೊಡುಗೈಗಳ ಕಾಪಾಡಲು
ಪ್ರತಿಯೊಬ್ಬರೊಳಕೂಸ ಪೋಷಿಸಿಕೊಳಲು

                                    -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩