Thursday 20 February 2014

ಹುಣ್ಸೆ ತೋಪಿನ್ ನೆನ್ಪಲ್ಲಿ

ತಿಪ್ಪೆ ದಾರಿ ಹುಣ್ಸೆ ತೋಪು
ಅದ್ಯಾವ ಬಾಯ್ ಚಪ್ಪರ್ಸಿ
ಉಗ್ದ್ ಬೀಜಕ್ ಹುಟ್ಕೊಂಡ್ ಮರ್ವೋ!!
ಒಂದು ಇದ್ದುದ್ ಬೆಳ್ಕೊಂಡ್ ಮುಂದೆ
ನಲ್ವತ್ತಾರಕ್ಕಿಂತ್ಲೂ ಜಾಸ್ತಿ
ನೋಡ್ನೋಡ್ದಂಗೆ ತೊಪೀಗ್ ತೋಪು;
ಚಿಗ್ರು-ಪಗ್ರು ಲೆಕ್ಕಕ್ಕಿಲ್ಲ
ಹುಳಿ ಮಾತ್ರ ತಳ್ಳಂಗಿಲ್ಲ

ಹಳ್ಳಿ ಹೈಕ್ಳು ಮರ್ಕೋತಾಟ
ಆಟಾಡ್ಕೊಂಡೇ ತುಂಬುಸ್ಕೊಂಡು
ಇದ್ಬಂದ್ ಜೇಬು ತೂತು ಬಿದ್ದು
ಚಡ್ಡಿಯಾಸಿ ಜೋತಾಡ್ಸ್ಕೊಂಡು
ಪಾರಿ, ರಂಗಿ, ಶೀಲ, ಮಾಲ
ಲಂಗಕ್ಕೊಂದಿಷ್ಟಂತ ಸುರ್ದು
ಉಪ್ಪು ಖಾರ ಕದ್ದು ತಂದು
ಹುಣ್ಸೆ ಅದ್ದಿ ನಾಲ್ಗೆಗ್ ಅರ್ದು

ಗೌಡ್ರ ಮಗ್ಳು ತಿಂಗ್ಳು ಹಿಂದೆ
ತವ್ರು ತೊರ್ದು ಹೋಗಿದ್ ನೆಪ್ಪು
ಪಕ್ಕದ್ ಹಳ್ಳಿ ಜಮೀಂದಾರ್ರ
ಒಬ್ನೇ ಮಗನ್ನ ಲಗ್ನ ಆಗಿ
ಚಪ್ರ ಇನ್ನೂ ಹಸ್ರಾಗಿತ್ತು
ಸಿಂಗಾರ್ಬಂಡಿ ಹಂಗೇ ಇತ್ತು 
ಆಗ್ಲೇ ಬಯ್ಕೆ ಅಂತೆ ನೋಡಿ!!
ಹುಣ್ಸೆ ತೋಪಿಗ್ ಹೊಡಿ ಗಾಡಿ!!

ಹಾಯ್ಕೊಂಡ್ ಅಲ್ದಾಡ್ಕೊಂಡೇ
ಆಯ್ಕೊಂಡ್ ತುಂಬ್ಸಿದ್ ಬುಟ್ಟಿ ಎರ್ಡು
ವರ್ಸ ತುಂಬಿ ವರ್ಸ ಬಂತು
ಹುಳಿ ಸಾರು, ಮೆಣ್ಸಿನ್ ಸಾರು
ಹಿಚ್ಕಿ ಮಾಡ್ಕೊಂಡ್ ಹಸಿ ಗೊಜ್ಜು 
ಮೂರ್ಹೊತ್ಗೂ ಅದೇ ಸ್ವರ್ಗ;
ಪ್ಯಾಟೆದೋರು ಬಂದ್ರೂಂತಂದ್ರೆ
ಅರ್ವ್ಗೊಂದ್ ಚೂರು, ಇರ್ವ್ಗೊಂದ್ ಚೂರು!!

ತ್ವಾಟದ್ ಮನೆಲೇನೋ ಕಳ್ದು
ತೋಪಿನ್ ಮರಕ್ಕ ಹಗ್ಗ ಬಿಗ್ದು
ಕುತ್ಗೆ ಸೀಳಿ ಪ್ರಾಣ ಬಿಟ್ಳು
ಕುರಿ ಕಾಯೋ ಯಂಗ್ಟನ್ ಹೆಂಡ್ರು;
ಯಂಗ್ಟ ಅಲ್ಲೇ ಎದೆ ಬಡ್ಕೊಂಡ್
ಶಾಪ್ಗೋಳ್ ಕೊಟ್ಟು ಉಸ್ರು ಬಿಟ್ಟ
ಇಬ್ರೂ ಅಲ್ಲೇ ದ್ಯವ್ಗೋಳಾಗಿ
ಹೊಗೊರ್, ಬರೋರ್ನ ಕಾಡ್ತೌರಂತೆ!!

ಪೂಜಾರಪ್ಪ ಪಗ್ಡೆ ಹಾಕಿ
ಊರ್ ಗೌಡನ್ ತಲೆ ಕೆಡ್ಸಿ
ಗೌರ್ಮೆಂಟ್ ಆರ್ಡ್ರು ತರ್ಸೇ ಬಿಟ್ಟ
ಮಾರ್ಗೋಳೆಲ್ಲ ನೆಲಕ್ಕುರ್ಳಿ
ದ್ಯವ್ಗೋಳಷ್ಟೇ ತೊಲ್ಗಿದ್ದಲ್ಲ
ಆಟ ಆಡಿದ್ ಜೊತ್ಗಾರ್ರೂ 
ನೆರ್ಳಲ್ ಮಲ್ಗಿದ್ ಕನ್ಸ್ಗೋಳೂ 
ನಾಲ್ಗೆ ಚಪ್ಪರ್ಸಿದ್ ದಿನ್ಗೋಳು .....

                       -- ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...