Monday 10 February 2014

ತೋರುವಿರಾ ನನ್ನ ತವರ??

ಅಗಮ್ಯ ತಾಣ 
ಅದು ನನ್ನ ಮನದ ತವರೂರು 
ಜಡ ಕಲ್ಲ ದಾರಿ 
ಕೆರೆ ದಾಟಿ ಕೆರೆ ಕಟ್ಟೆ 
ಮತ್ತೊಂದು ದಟ್ಟ ಕೆರೆ 
ಬತ್ತಿ ಹೋದ ಕೆರೆ 
 
ಬೇನಾಮಿ ಗೋರಿಗಳು 
ತಲೆಯಿಲ್ಲ, ಬುಡವಿಲ್ಲ 
ಉರಿಸಿದ ದೀಪದೆಣ್ಣೆ ಚೆಲ್ಲಿ 
ಇರುವೆ ಗೂಡ ನುಂಗಿದೆ 
ಎಲ್ಲಕ್ಕೂ ನನಗೇ ಶಾಪ 
ಕಂಡು ಪಾಪ ಅಂದ ತಪ್ಪಿಗೆ 
 
ಸುತ್ತೇಳು ಹಳ್ಳಿಯ ಜೋಡಿದಾರ್ರು 
ನನ್ನ ಕಾಲಿನಡಿ ಮುಳಾಗಿರುವರು 
ಹಾದು ಹೋಗಲು ಬಿಡದೆ 
ತಮ್ಮೂರಿನೊಳಗೆ
ಬಳಸಿ ಬಿಟ್ಟರು ನನ್ನ 
ಎಲ್ಲೋ ಕಾಣದೂರಿಗೆ 
ದಿಕ್ಕು ತಪ್ಪಿಸಿ 
 
ಆಗಷ್ಟೇ ಎದ್ದ ಸೂರ್ಯ 
ಆಕಳಿಸುತ್ತಿದ್ದಾನೆ
ಅಯ್ಯೋ ಕತ್ತಲಾಗುತ್ತಿದೆ!!
ಮಲಗಲು ಸೂರಿಲ್ಲ 
ನೆರಳಿಗೆ ನಾರಿಲ್ಲ 
ಅದೃಶ್ಯ ಭೂತಗಳ ಹಾವಳಿ !!
 
ಏನನ್ನೋ ಅರಸುತ್ತ ಮನೆ ತೊರೆದೆ 
ಏನನ್ನೂ ಪಡೆಯದೆ ಹಿಂದಿರುಗುತ್ತಿದ್ದೇನೆ!!
 
ಅಲ್ಲದ ಗುರಿಗೆ 
ನೂರೆಂಟು ದಿಕ್ಕು, ಸುಳುವು 
ಆಗುವ ಗುರಿಗೆ 
ಪಟ್ಟ ಪಾಡೇ ಪಾಡು!!
 
ನನ್ನವರ ಹೆಸರ ಕೂಗಿದೆ 
ಗಂಟಲು ಒಣಗಿತು 
ಬೊಗಸೆಯಲ್ಲಿ ಹಿಡಿದ ನೀರು 
ಬೊಗಸೆಗೇ ಸಾಲುತ್ತಿಲ್ಲ 
ಇನ್ನು ಬಾಯಾರಿಕೆಯ ತಣಿಸುವಿಕೆ?
ಪಳಗಬೇಕಿದೆ ಚೂರು, ಚೂರಾಗಿ 
ಪಶ್ಚಾತಾಪದ ಬೇಗುದಿಗೆ 
 
ಅಂದು ತಡೆದು 
ನನ್ನ ಕೆಟ್ಟ ದರ್ಶನ ಪಡೆದುಕೊಂಡವರು 
ಸಾಲಾಗಿ ನಿಂತು 
ಬೀರುತ್ತಿದ್ದಾರೆ ಸಂತಾಪ;
ನಾ ಯೊಗ್ಯನಲ್ಲದ ಪ್ರೀತಿಯ 
ಮತ್ತೆ ತೋರುವ ಹಂಬಲ ಹೊತ್ತು 
 
ಛೇ, ಹೀಗಾಗಬಾರದಿತ್ತು ನನಗೆ 
ನನ್ನ ಬಗ್ಗೆ ನನಗೇ ಅಸಡ್ಡೆ ಮೂಡುವಂತೆ,
ನನ್ನ ನಾನೇ ತೊರೆದಂತೆ,
ನನ್ನಿಷ್ಟಗಳ ನಾನೇ ದ್ವೇಷಿಸುವಂತೆ 
 
ನಿಲ್ಲದೆ ಜಾರಿದ ಕಂಬನಿ ಮಾತ್ರ 
ಸಾರಿ ಸಾರಿ ಪಿಸುಗುಡುತಿದೆ 
ಮತ್ತದೇ ಮಾತನ್ನು 
"ಮನೆ ಮರೆತ ತಪ್ಪಿಗೆ 
ಕಟ್ಟು ತೆರಿಗೆ, ಸಾಯೋ ವರೆಗೆ!!"
 
ಯಾರಾದರೂ ಬಲ್ಲಿರಾ 
ನನ್ನ ತವರ ವಿಲ್ಹಾಸ?!!
ಕೈ ಹಿಡಿದು ನಡೆಸಿರೆನ್ನ 
ಕುರುಡನಂತೆ ಹಿಂಬಾಲಿಸಿ ಬರುವೆ 
 
ಕಲ್ಲೋ, ಮುಳ್ಳೋ 
ಕೆಂಡವೋ, ವಿತಂಡವೋ 
ಕೊನೆಗೊಮ್ಮೆ ಕಾಣಬೇಕು
ನನ್ನ ತವರ ಪಡಸಾಲೆಯಲ್ಲಿ 
ತಲೆ ಬಾಗಿಸಿ ತೊಳೆಯಬೇಕು 
ಬಿಟ್ಟು ಹೊರಟ ಹೆಜ್ಜೆ ಗುರುತುಗಳು ಕಾಣದಂತೆ 
ನನ್ನದೇ ಕಂಬನಿಯಲ್ಲಿ!!
 
ತೋರುವಿರಾ ನನ್ನ ತವರ??
 
                      -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...