Wednesday 12 February 2014

ಉಳಿದವನು ಇದ್ದಂತೆ !!

ಕೈ ಮುಗಿದು ಕರೆದಾಗ
ಕಣ್ಣೀರ ಒರೆಸೋರು ಯಾರಿಲ್ಲ 
ಹಸಿವಲ್ಲಿ ಜೋಗುಳದ ಹಾಡನು 
ಗೀಚೋದು ಸರಿಯಲ್ಲ 
 
ಮಲಗಿರುವ ಮಾತು 
ಮೌನವನು ಬಿಗಿದಪ್ಪಿ 
ಸತ್ತಂತೆ ತಾನು ಹೊರನೋಟಕೆ 
 
ಜೊತೆ ಯಾರೂ ಇರದೆ 
ಹುಡುಕಾಡಿ ಸಾಕಾಗಿ 
ನೆರಳನ್ನೇ ಕರೆದೆ ಜೂಟಾಟಕೆ 
 
ಉಸಿರನ್ನು ಉಳಿಸೋದು 
ಹೇಗಂತ ಕಲಿತಿಲ್ಲ ಪ್ರಾಣ 
ಚಿಗುರೊಡೆಯೋ ಆಸೆಲಿ 
ಮಣ್ಣಲ್ಲಿ ಹೂತಿಟ್ಟೆ ನನ್ನ                                   [೧]

 
ಆಕಾಶದಲ್ಲಿ ಹುಡುಕಾಡಿ ಬಂದೆ 
ನೀ ಬಿಟ್ಟು ಹೋದ ಹೆಜ್ಜೆ ಸಾಲನು 
ಆವೇಷದಲ್ಲಿ ಹಾರೋದ ಕಲಿತೆ 
ಭೂಮಿಗೂ ಬೇಲಿ ಹಾಕಿ ಬಂದೆನು 

ರೆಕ್ಕೆಯಲಿ ಕನಸೊಂದು ಕಾವೇರಿದೆ 
ಉದುರಿತ್ತು ತಾನಾಗಿ ಮರುಭೂಮಿ ನೆನಪಲ್ಲಿ 
ದೂರದಲಿ ಗೂಡೊಂದು ಹರಿದಾಗಿದೆ 
ಹಾರಾಡಲೇ ಬೇಕು ಚೀರಾಟ ದನಿಯಲ್ಲಿ 

ಮತ್ತೊಂದು ಮಳೆಗಾಲ 
ಬಂದಾಗಲೇ ಮುಂದೆ ಮಾತು 
ಸತ್ತಂತೆ ಬದುಕನ್ನು 
ನಡೆಸೋನಿಗೆ ಏನು ಗೊತ್ತು                            [೨]
 

ಮರೆತಂಥ ಮಾತೊಂದು 
ಎದುರಾಗಿ ನೆನಪಲ್ಲಿ ನಿಂತಾಗ 
ಕಥೆಯಲ್ಲಿ ನನಗೊಂದು 
ಪಾಲನ್ನು ಬರೆದಿಟ್ಟು ಕೂತಾಗಾ

ಬೇಡನ್ನಲೇಕೋ 
ಮನಸಾಗದೆ ಹೋಗಿ 
ಬೇಜಾರಿನಲ್ಲೇ ತಲೆ ಬಾಗಿದೆ 

ಅಲೆಯಾಗಿ ನನ್ನ 
ದಡದಲ್ಲಿ ಬಿಟ್ಟಾಗ 
ಹಿಂದಿರುಗಿ ಕಡಲ ನಾ ಸೇರಿದೆ 

ತಡ ಮಾಡಿ ಕೆರೆಯೊಂದು 
ಕೊಡುವಾಗ ಹಿಂದಿರುಗಿ ನೋಡು 
ಜೊತೆಯಾಗಿ ನಡೆದಾಗ
ಸಿಗಬಹುದು ಮನೆಗೊಂದು ಜಾಡು                   [೩]
 
                          -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...