Monday 24 February 2014

ಶಬರಿಯ ಕಣ್ಣೀರು!!

ವಾರ ಕಳೆದು ತವರ ಮನೆಗೆ 
ವರುಷ ತುಂಬಲಿಕ್ಕೆ ತಿಂಗಳು ಬಾಕಿ ಉಳಿದ
ಮಗುವ ಸಹಿತ ಇಳಿದು ಬಂದಳು
ಮಗಳು ಒಂದು ದಿನದ ಮಟ್ಟಿಗೆ
 
ಅಜ್ಜಿ ಅತ್ತಳು ವಾರದ ಹಿಂದಿನಂತೆಯೇ  
ತುಸು ಹೆಚ್ಚಿನ ಸಂತೋಷಕೆ;
ಮೊಮ್ಮಗನ ಮುದ್ದು ಮಾಡುವಾಸೆಯಿಂದ 
ಮಸಿ ಮೆತ್ತಿದ ಕೈಗಳ ಸೆರಗಿನಂಚಿಗೆ ಒರೆಸಿ
ಕಾರಿದ ಕಣ್ಣೀರ ಭುಜಗಳಿಗೆ ಹೊರೆಸಿ 
ತೆಕ್ಕೆಯಲ್ಲಿ ಬಳಸಲು ಮುಂದಾದಳು 
ಎಡವಿಕೊಂಡ ಹೆಬ್ಬೆರಳ ರಕ್ತವನ್ನೂ ಲೆಕ್ಕಿಸದೆ  
 
ಹಾಲ್ಗೆನ್ನೆ ಕಂದಮ್ಮ ಪಿಳಿ ಪಿಳಿ ನೋಡುತ್ತ 
ಒಮ್ಮೆ ಕಣ್ಣು ಮಿಟುಕಿಸಿ ಅಮ್ಮನೆಡೆಗೆ ನೋಡಿ 
ಮತ್ತೆ ಅಜ್ಜಿಯೆಡೆಗೆ ನೋಡಿ
ಚಾಚಿದ ಕೈಗಳ ಧಿಕ್ಕರಿಸಿ ಹೊರಳಿ ತನ್ನ 
ಅಮ್ಮನೆದೆಯ ಬಿಗಿದಪ್ಪಿ ಅತ್ತಿರಲು 
ಇತ್ತ ಸುಮ್ಮನಾಗಿದ್ದ ಅಜ್ಜಿಯ ಕಂಗಳು ತುಂಬಿ 
ತೊರೆ ತೊರೆಯ ಹರಿಸಿದವು ಮೌನದಲ್ಲಿ 
 
ದಿನಕ್ಕೆ ಕೇವಲ ಹದಿನೈದು ಗಂಟೆ ಎಚ್ಚರವಿದ್ದ 
ಮೊಮ್ಮಗನ ವರಿಸಿಕೊಳ್ಳಲು
ಅಜ್ಜಮ್ಮನ ಪಾಲಿಗೆ ಸಿಕ್ಕ ಚೂರು ಪಾರು ಸಮಯ 
ಕಣ್ಣೀರಿಗೇ ಸಾಲದಾಗಿತ್ತು. 
ತವರು ಮನೆಯ ತಂತಿ ಹಿಡಿದು 
ಮೀಟುತಿದ್ದ ಮಗಳ ಪಾಡು ಹೇಳ ತೀರದಾಗಿತ್ತು 
 
ಮರೆಯಲ್ಲೇ ನಿಂತು 
ನಗುವ ಆಸ್ವಾದಿಸಿ ಸಂಭ್ರಮಿಸಿದ ಅಜ್ಜಿ ತಾನು
ಆಟಕೆ ಬಾರದೆ ಮುರಿದ ಗೊಂಬೆ
ಮಗುವಿನ ಕೋಮಲ ಕರಗಳಿಂದ 
ಎಸೆಯಲ್ಪಟ್ಟರೂ ಸಹಜ ಸ್ಥಿತಿ
ಕಾಯ್ದಿರಿಸಿಕೊಂಡಂತೆಯೇ ಮರುಗಿದಳು 
 
ನೂರು ಮುದ್ದು ಪ್ರಶ್ನೆಗಳ ಮನಸಲ್ಲೇ ನುಂಗಿಕೊಂಡು
ನೂರ ಒಂದನೆಯ ಪ್ರಶ್ನೆ 
"ನಾ ಯಾರು ನೋಡಿ ಹೇಳು ಕಂದ?"
ನುಂಗಿಕೊಂಡ ನೂರೂ ಅದೇ ಪ್ರಶ್ನೆ!!

ಈ ಬಾರಿ ಅಳಲಿಲ್ಲ ತುಂಟ;
ಶೋಕೇಸಿನ ಗಾಜಿನ ಗೊಂಬೆ
ಬೇಕೆಂದು ಹಠ ಮಾಡಿದ 
ಕೇಳಿದ ಪ್ರಶ್ನೆಗೆ ಅಸಮಂಜಸ ಪ್ರತಿಕ್ರಿಯೆ ನೀಡಿ 

ಗಾಜು ಚೂರಾದರೂ ಚಿಂತೆಯಿಲ್ಲ 
ಬಾಚಿ ಅಪ್ಪಿ ಮುತ್ತನಿಟ್ಟು 
ಆಸೆ ಪಟ್ಟ ಗೊಂಬೆಯ ಕೈಯ್ಯಲಿಟ್ಟು 
ನಕ್ಕಳು ಅಜ್ಜಿ ಆನಂದದಿಂದ 
ರಾಮನ ಕಂಡ ಶಬರಿಯಂತೆ 
ನಗು, ಗೊಂಬೆ ಎರಡೂ ಜಾರದಂತೆ 
ಜಾಗ್ರತೆ ವಹಿಸಿ ಮತ್ತೆ 
ಅತ್ತಳು ನಾಳೆಗಳ ನೆನೆದು ಶಬರಿ 
 
                           -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...