Thursday 20 February 2014

ಹೆಜ್ಜೆ ಗುರುತು

ಕಥೆ ಹೇಳುತಿವೆ 
ಯಾರದ್ದೋ ಗುರುತುಗಳು 
ನನ್ನ ಹೆಜ್ಜೆ ಗುರುತುಗಳಿಗೆ;
ನಾ ಸಾಗಿ ಹೊರಟ ದಾರಿಯ ಕುರಿತು 
 
ಜೊತೆ ಬರಲು ಗೋಗರೆಯದೆ
ಅಲ್ಲಲ್ಲೇ ಬಿಟ್ಟು ಬಂದೆ
ಒಲ್ಲದ ಮನಸಿನ ಗುರುತುಗಳ 
ಸಂಚಯದಲ್ಲೊಂದಾಗಿಸಿ 
 
ಎಷ್ಟೋ ಬಾಳ ಬಂಡಿಗಳು 
ಅದೇ ದಾರಿಯಲಿ ಸಾಗಿ
ಚಕ್ರದಡಿಯಲ್ಲಿ ಮುಚ್ಚಿ ಹೋದರೂ 
ಮತ್ತೆ-ಮತ್ತೆ ಹುಟ್ಟಿಕೊಳ್ಳುತ್ತವೆ 
ಫೀನಿಕ್ಸ್ ಗುರುತುಗಳು
 
ಮಳೆ ತೋಯ್ದು ಹಸನಾದ ನೆಲದ 
ಅಂತರಾಳದ ತೇವ ಜಾರಿಸುತ್ತಿದೆ 
ಇಟ್ಟ ಹೆಜ್ಜೆಗಳ, ಆದರೂ 
ಬಿಟ್ಟುಗೊಡದ ನಕಾಶೆಗಳ ಹೊತ್ತು 
 
ಶವ ಯಾತ್ರೆಯಲ್ಲಿ ಎರಚಿದ ಹೂವು 
ಶವ ಹೊತ್ತ ಆ ನಾಲ್ವರ ತೂಕದ ಹೆಜ್ಜೆ
ಬೀಳ್ಗೊಟ್ಟ ಮಂದಿಯ ಕಣ್ಣೀರ ಗುರುತುಗಳ 
ಹೇಳ ತೀರದು //ಮೌನ ಸಂತಾಪ//

ನನ್ನವೆನ್ನುವವುಗಳ ಹಿಂದಿರುಗಿ 
ನಾನೇ ಗುರುತಿಸಲಾರದೆ,
ಅವು ನನ್ನವುಗಳಲ್ಲ 
ಹಿಂದುಳಿದು ಹಿಂಬಾಲಿಸಿ ಬಂದವರದ್ದು 

ನಾನೂ ಹಿಂಬಾಲಕನೇ!!
ನನ್ನ ನೆರವಿಗೂ ಇದ್ದಾವೆ 
ರಾಶಿ-ರಾಶಿ ಸ್ವಪ್ನಗಳ ಬೆಂಬಲಕೆ, 
ನಕ್ಕು ಸ್ವಾಗತಿಸಿದ ಯಾರೋ ಬಿಟ್ಟ 
ಅನುಕಂಪದ ಸುಳುವುಗಳು

ದಾರಿ ಉದ್ದಕ್ಕೂ ಪಡೆದವುಗಳೆಷ್ಟೋ,
ಕಳೆದವುಗಳೆಷ್ಟೋ!!
ಲೆಕ್ಕ ಹಾಕುತ್ತಾ ಹೋದರೆ
ಮತ್ತೊಂದು ಜೀವಮಾನ ವ್ಯರ್ಥ 
ಇದ್ದ ಜೀವನಕ್ಕೆ ಇದ್ದುದ್ದನ್ನೆಲ್ಲವ 
ಬಿಟ್ಟುಕೊಡುವುದೇ ನಿಜವಾದ ಅರ್ಥ !!

                                  -- ರತ್ನಸುತ

1 comment:

  1. ಕೆಲ ಹೆಜ್ಜೆ ಗುರುತುಗಳು ಚಿರಕಾಲ ಅಚ್ಚುಳಿಯುವಷ್ಟು ಗೋಚರ. ಆದರೆ, ಬಹು ಪಾಲು ಹೆಜ್ಜೆ ಗುರುತುಗಳು ಅಲೆಗಳಿಗೂ ಮುನ್ನ ಕಡಲ ತಡಿಯಲ್ಲಿ ಊರಿದವುೂ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...