Wednesday 19 February 2014

ಬಾಲ ಮುರಿದ ಹಲ್ಲಿ

ಬಣ್ಣ ತುಂಬಿದ ಬಂಡಾರದೊಳಗೆ 
ಸತ್ತು ಬಿದ್ದಿತ್ತು ಹಲ್ಲಿಯೊಂದು. 
ಹಾಗೇ ಅದ್ದಲು ನೊಯ್ವುದು ಕುಂಚ 
ಬಳಿದರೆ ಮುನಿದುಕೊಂಬುದು ಗೋಡೆ 
ಬಣ್ಣ ಸಂಪನ್ನ ಉಸಿರಳಿದ ದೇಹವ 
ಲೆಕ್ಕಿಸದಾಯಿತು ಒಗೆದ ಬೆರಳು 
ಮೆತ್ತಿದ ಬಣ್ಣವ ಅಂಗಿಗೆ ಒರೆಸಿ 
ಕುಂಚಕೂ, ಗೋಡೆಗೂ ನಿಟ್ಟುಸಿರು. 
ಬಣ್ಣ ಹೀರಿ ಗೋಡೆ ಮಡಿಲ
ಮುತ್ತಿಟ್ಟ ಕುಂಚದ ಹಿಡಿಗೈ ಅಲುಗಾಡಿ
ಇಟ್ಟೆಡೆ ನಿಲ್ಲದೆ ಜಾರಿತು ಚುಕ್ಕಿ 
ಮೂಡಿದ ಡೊಂಕು ರೇಖೆಯ ಕೊನೆಗೆ 
ತೀಕ್ಷ್ಣತೆ ಕಳೆದ ಬಣ್ಣವ ಸವರಿ 
ಮರೆಯಾಯಿತು ಗೆರೆ, ಕಳಚಿತು ಕಣ್ಪೊರೆ 
ಸತ್ತು ಬಿದ್ದ ಹಲ್ಲಿ ಕಳೆದ,
ಮುರಿದು ಬಿದ್ದ ಬಾಲವಾಗಿ ಮೂಡಿತ್ತು. 
ಮಡಿ ಪಾಲಿಪ ಕುಂಚವು ನಾಚಿ
ಹೆಪ್ಪುಗಟ್ಟಿತು ಬಣ್ಣದ ಡಬ್ಬಿ 
ಕೂಡಿಸುವರಾರ್, ಸೇರಿಸುವರಾ-
-ರಿಹರು ಸತ್ತದರ ಬಾಲದ ಜೊತೆಗೆ?
ಯೊಚಿಸಿತು ಕೈ ತಾನು 
ಪರಶಿವನು ಗಣಪನ ಮಾಡಿಪ ರೀತಿ 
ಜೋಡಿಸಿ ಬಿಡಲು. 
ಸುಮ್ಮನಾಯಿತು ಮತ್ತೆ ಎಡಗೈ ನಗಲು. 
ಅನಿರೀಕ್ಷಿತ ಬಾಲ ಬಿಡಿಸಿದ ಕೈ 
ನಿರೀಕ್ಷಿತ ಒಡಲ ತಿದ್ದಿ ತೀಡಿ ಬೇಸತ್ತು 
ಶಿವನಲ್ಲ ತಾನೆಂಬ ಸತ್ಯ ಅರಿಯಿತಲ್ಲದೆ 
ಹಲ್ಲಿ ಹಂದರದ ನೆರಳ ಗೋಡೆಗೆ ಹಿಡಿದು 
ಬಾಲವಿಲ್ಲದೆ ಅಸುನೀಗಿದ ಆತ್ಮಕೆ
ಶಾಂತಿ ಕೋರಿತು ತನ್ನ 
ಪಾಪ ಪ್ರಜ್ಞೆಯ ತೊಳೆದು 
ಜೀವಮಾನವ ಕಳೆದು 
  
                                -- ರತ್ನಸುತ 

1 comment:

  1. ಇಲ್ಲಿಯ ಹಲ್ಲಿ ಮತ್ತು ಬಾಲಗಳ ನೆಪದಲ್ಲಿ ಬದುಕಿನ ಅಸಲೀಯತ್ತು ತೆರೆದಿಟ್ಟಿದ್ದೀರ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...