Monday 10 February 2014

ನೀರು ಕುಡಿದ ಬೊಟ್ಟು !!

ತಲೆ ಮೇಲೆ ಸಿಂಬೆ 
ಸಿಂಬೆ ಮೇಲೆ ಗಡಿಗೆ 
ಗಡಿಗೆಯೊಳಗೆ ದಾಹ 
ತಣಿಸುವ ಉದಕ 
ಮುಗಿಲ ಮರೆ ಚಂದ್ರ 
ಅದರೊಳು ಈಜಾಡಿ 
ತುಳುಕಿಸಿದ ಹಣೆಗೆ 
ಕರಗಿತ್ತು ತಿಲಕ 
 
ಕರಗಿದ ತಿಲಕ 
ನಾಸಿಕದ ಅಂಚಿನಲಿ 
ತೊಟ್ಟಿಡುವ ತವಕಕ್ಕೆ 
ಸೂಕ್ತ ಮುಹೂರ್ತ 
ಸದ್ದು ಮಾಡಿದ ಕೈ 
ತೋರ್ಬೆರಳ ತಡವಿತ್ತು 
ಇಲ್ಲವಾದರೆ ದಕ್ಕುತಿತ್ತು 
ಪ್ರಪಾತ 
 
ಕೈ ಬೆರಳು ಮತ್ತೆ
ಹಿಡಿಯಿತು ಸೆರಗನ್ನು 
ತಿಲಕದ ಕಲೆ ಅಲ್ಲಿ 
ಚಂದ ಚಿತ್ತಾರ 
ನೆನ್ನೆ ಪಡೆದ ರೂಪ 
ಇಂದಿಗಿಂತ ಬಿನ್ನ 
ದಿನ-ದಿನಕ್ಕೊಂದು 
ನವ್ಯ ಪ್ರಕಾರ 
 
ಚಿತ್ತಾರಕೂ ಜೀವ-
ಬಂದಿತ್ತು ಸಿಕ್ಕಾಗ
ನಡು ಕುಚ್ಚಿನ ಗುಚ್ಛ-
-ದೊಳಗೊಂದು ಸಿಕ್ಕು 
ಮನೆ ಹತ್ತಿರ ಬಂತು 
ತಲೆ ಬಾಗಿಲ ತಪ್ಪಿ 
ಅಡುಗೆ ಮನೆ ಮೂಲೆಗಡಿ-
-ಗಿಳಿಸಬೇಕು 
 
ಸಿಕ್ಕಿಸಿದ ಸೆರಗಂಚು 
ಪಾನಮತ್ತ ಚಿತ್ತ-
ಹೊತ್ತ ಚಿತ್ತಾರ ಹಿಡಿ 
ಹಣೆಯ ಒತ್ತಿತ್ತು 
ಮುತ್ತಿಕೊಂಡ ಬೆವರ
ಮೆತ್ತ-ಮೆತ್ತಗೆ ಒರೆಸಿ 
ಕನ್ನಡಿಯ ನಡು ಹಣೆಗೆ 
ಇಟ್ಟಾಯ್ತು ಬೊಟ್ಟು 

             -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...