Monday 3 February 2014

ಕನಸುಗಳು ಹೀಗೇಕೆ?!!

ಬಿರುಗನಸ ಬಯಲಲ್ಲಿ 
ಬರಿಯ ಬಿಂಬಗಳೇ;
ನಾ ಹಿಂದೆ ಬಿಟ್ಟ,
ನಾ ಹಿಂದೆ ಸುಟ್ಟ 
ಮರಗಟ್ಟಿದ, ನನ್ನ 
ಅಂತರಂಗವು ಮರೆತ
ನನ್ನದೇ ಬಿಂಬಗಳು 
ಸಾಲು-ಸಾಲು 
 
ತಲೆಕೆಳಗೆ ಜೋತ 
ಬೇತಾಳರ ಛಾಯೆ 
ಅರಸುತ್ತಿವೆ ಕಾಣಿಸಿ-
ಹೊರಟ ಬೆನ್ನ  
ಎದುರಿಸುವುದೇ ಸರಿ,
ತಡೆಯಬಹುದವುಗಳ 
ಓಡಿದರೆ ಹಾರಿ 
ಬೆನ್ನೇರುತಾವೆ!!
 
ಉದುರಿದೆಲೆಗಳ ಮೇಲೆ 
ಸದ್ದು ಮಾಡದೆ ಮಲಗಿ 
ಎಷ್ಟೆಂದು ಬೇಯಲಿ 
ಒದ್ದಾಡದೆ?
ಉಸಿರುಗಟ್ಟುವ ಹಾಗೆ 
ಬಿಗಿದು ಹಿಡಿದಿದೆ ನೆರಳು 
ಹೇಗೆ ಉಳಿಯಲಿ ಇನ್ನೂ 
ಚೀರಾಡದೆ?
 
ಬದುಕು ಕತ್ತಲು;
ನನ್ನನ್ನೇ ನೋಡದೇ 
ಕಳೆದು ಬಂದ ದಿನಗಳ 
ಲೆಕ್ಕವಿಲ್ಲ 
ಪ್ರಜ್ವಲಿಸುವ ಕನಸು 
ನನ್ನ ವಿಕೃತ ರೂಪ- 
ತೋರುತಿದೆ
ಭಯದಲ್ಲಿ ನಿದ್ದೆಯಿಲ್ಲ 
 
ಕೇಡುಗನಸಂದರು 
ಕನವರಿಸಿ ಬೆಚ್ಚಿದೊಡೆ 
ಯಂತ್ರ-ತಂತ್ರ
ಮಾಟ-ಮಂತ್ರವೊಡ್ಡಿ 
ಯಾರು ಬಲ್ಲರು ನನ್ನ 
ನಕಲಿ ಪಯಣದ ಬದುಕ 
ಕನಸುಗಳೇ ನಾ ಮೆಟ್ಟಿ 
ಬಂದ ಹಾದಿ 
 
ನಿಜದಲ್ಲಿ ಎದುರಾಗಿ 
ಮುಜುಗರವ ಪಡಿಸಿ 
ನಕ್ಕವುಗಳೆಷ್ಟೋ 
ಬಿಕ್ಕಿದವದೆಷ್ಟೋ 
ಸುಮ್ಮನೆ ಕೈ ಕಟ್ಟಿ 
ನನ್ನ ಪಾಡಿಗೆ ಬಿಟ್ಟು 
ತಮ್ಮ ಪಾಡಿಗೆ ತಾವು 
ಉಳಿದವುಗಳೆಷ್ಟೋ !!
 
ನಿಮಿಷ ನಿಮಿಷಕೂ ಮುಗಿದೆ 
ಮನದ ಕೈ ಜೋಡಿಸಿ 
"ಜಾರದಿರಿ,
ಕತ್ತಲಾಗಿಸದಿರಿ" ಎಂದು 
ತನ್ನ ಕಾಯವ ತಾನು 
ಮುಂದುವರಿಸಿತು ಅಲ್ಲಿ 
ಎದುರಾಗಿಸಿ ನಿಲ್ಲಿಸಿತು 
ಕನಸ ತಂದು 

                   -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...