ಬಡವರ ಮನೆ ಹೂವು

ಹೂದೋಟದಲ್ಲಿ ಅಲೆದು 
ಉದುರಿಕೊಂಡ ಹೂವ ಹೆಕ್ಕಿ 
ಕಟ್ಟಿ ಮೂಡಿದೆ ನಿನ್ನ ಮುಡಿಗೆ 
ಮುನಿಯಲಿಲ್ಲ ತಾನು 
ತಡೆಯಲಿಲ್ಲ ನೀನು 
ಮೆತ್ತಲೊಲ್ಲದ ಗಂಧವ 
ಹೀರಿ ಬಿಟ್ಟ ಚಿಟ್ಟೆ ಹಾರಿ 
ನಕ್ಕಿತು ಎಂಜಲ ಕಂಡು!!

ಮುಡಿದ ಹೂವ ಪಾಲಿಗೆ 
ದೈವ ನಿನ್ನ ಕುರುಳು 
ಉದುರದುಳಿದ ಹೂಗಳು 
ನಕ್ಕವು ನಮ್ಮೀ ಸ್ಥಿತಿಗೆ 
ಬರಗೆಟ್ಟ ಹೊಟ್ಟೆಯಲ್ಲಿ 
ಹಸಿವಿನ ಝೇಂಕಾರಕೆ 
ಪುಡಿಗಾಸು ಸದ್ದಿರದ 
ನಿರ್ಗತಿಕನ ಜೇಬಿಗೆ 

ಸಣ್ಣ ನೋಟ ಸಮರದಲ್ಲಿ 
ಸೋತ ಮುಡಿಯ ಹೂ 
ನಿನ್ನ ಮುಂಗುರುಳ ಮರೆಗೆ 
ಕದ್ದು ಅಡಗಿಕೊಂತು 
ಇನ್ನೂ ಉಕ್ಕಿ ಅರಳಿ 
ಬೇರ ಸತ್ವದಿಂದ ಕೆರಳಿ 
ತೋಟದ ಹೂಗಳ ಸೊಕ್ಕ
ಬಣ್ಣಿಸುವುದೆಂತು 

ಮರುಕ ಸೂಸಿದ ನೀನು 
ತೆಕ್ಕೆಯಲ್ಲಿ ಬಿಗಿಗೊಂಡು 
ಕೆನ್ನೆಯಿಂದ ಕೆನ್ನೆಗೆ 
ಕಂಬನಿಗಳ ವಿನಿಮಯ    
ಪುಟ್ಟ ಗುಡಿಸಲಲ್ಲಿ ಸಣ್ಣ 
ಕನ್ನಡಿಯ ಸಿರಿವಂತಿಕೆ 
ನಾನು, ನೀನು, ತಾನಲ್ಲದೆ 
ಎಲ್ಲರಿಗೂ ಪರಿಚಯ

ಆ ರಾತ್ರಿಯ ಸುರತಕೆ 
ಹೊಸಕಿಹೋದ ಮುಡಿ ಹೂ 
ನಾಕ ಪಾಕ ಸವಿದು 
ಕೊನೆಯುಸಿರೆಳೆದವು ನಗುವಲಿ 
ಸಿಡಿಲು, ಭೋರ್ಗರೆದ ಮಳೆ 
ಬೇರು ಸಹಿತ ಕೊಳೆತ ಬಳ್ಳಿ 
ಕೆಸರ ನೆಲ ಕಚ್ಚಿ ತೋಟ-
ಹೂ ನರಕ ಬಯಲಲಿ 

                   -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩