Monday 17 February 2014

ಚಿರಂತನ !!

ಆಗಿನ್ನೂ ನೀ ಕಣ್ಣು ಬಿಟ್ಟಿದ್ದೆ
ಇಡದ ಹೆಸರಲ್ಲಿ ಕರೆದಾಗ ಎಲ್ಲೋ ನೋಡುತ್ತಾ, ನುಲಿಯುತ್ತಾ, ಅಳುತ್ತಾ ಇದ್ದೆ 
ಅಮ್ಮಳಾರೆಂದು ಹುಡುಕುವ ಮುನ್ನವೇ ಬಾಚಿ ಅಪ್ಪಿದಳು 
ಅಮ್ಮ, ಅವಳಮ್ಮ, ಅವಳಮ್ಮ, ಅವಳಮ್ಮ 
ನೀ ನಾಲ್ಕು ತಲೆಮಾರು ಕಂಡ ಐದನೇ ತಲೆಮಾರಿನವ, ಅದೃಷ್ಟವಂತ 
ನಾನಿನ್ನೂ ಮಗ್ನನಾಗಿದ್ದೆ ಖುಷಿಯ ಸಾಗರದಲ್ಲಿ 
ನಾನೂ ಮಾವ, ನೀ ನನ್ನ ಸೋದರ ಅಳಿಯ ಗೊತ್ತಿದೆಯಾ?!!
ಹಾಲುಂಡು ಮೆಲ್ಲಗೆ ನಿದ್ದೆಗೆ ಜಾರಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ  
ನಡುಕದಲ್ಲೇ ಎತ್ತಿ ಎದೆಗಪ್ಪಿಕೊಂಡಾಗ ಕೆಂಪು ತುಟಿಗಳ ಒಮ್ಮೆ 
ಕಡುಗೆಂಪು ನಾಲಿಗೆ ಸವರಿ ಹೋಗಿದ್ದು, ನನ್ನ ಗೇಲಿ ಮಾಡಿದಂತಿತ್ತು 
ನೀ ಅತ್ತು ನಿದ್ದೆ ನೀಡದ ರಾತ್ರಿಗಳಲ್ಲಿ ಸೊಳ್ಳೆಗಳೂ ನಿದ್ದೆ ಮಾಡುತ್ತಿರಲಿಲ್ಲ ಅಳಿಮಯ್ಯ 
ನಿನ್ನ ಅಂಗೈ, ಅಂಗಾಲುಗಳ ಸೋಕಿದ ನನಗೆ 
ಬೇರೆಲ್ಲವೂ ಒರಟು ಅನಿಸುವಾಗ, ಈ ಮಾವನ ಎದೆ ಉಬ್ಬಿತ್ತು. 
ಉಚ್ಚೆ ಗೋಚಿಯ ಕಳಚಿ, ಕಕ್ಕಸ್ಸು ಮೆತ್ತಿದ ಕೈಗಳ ಗುಟ್ಟಾಗಿ ಮೂಸಿಕೊಂಡಿದ್ದೆ ಗೊತ್ತೇ?!!
ಕತ್ತು ನಿಲ್ಲದ ನಿನ್ನ ಎತ್ತಿ ಆಡಿಸುವಾಗ ನಗುತ್ತಿದ್ದೆ ನೀನು ಚೂರೂ ಭಯವಿಲ್ಲದಂತೆ, ಭಯವೆಲ್ಲ ನನಗೇ!!
ನೋಡು ನೋಡುತ್ತಾ ಬೆರಳಾಟಕೆ ಕಣ್ಣು ಆಡಿಸಿ ಹಿಂದೆಯೇ ಗುರುತು ಹಚ್ಚುತ್ತಿದ್ದೆ 
ನಿನ್ನದೇ ಭಾಷೆಯಲಿ ಹೆಸರಿಸಿ ಕರೆದು ಅಮ್ಮ, ಅಪ್ಪ, ತಾತ, ಅಜ್ಜಿ, ಮಾಮನ 
ಅಳು ಸಾರ್ವತ್ರಿಕ ನುಡಿ, ಎಲ್ಲಕ್ಕೂ ಅನ್ವಯಗೊಳ್ಳುವಂತದ್ದು ಅಲ್ಲವೇ?!!
ಅಂಬೆಗಾಲಿಟ್ಟು ಹೊಸಲು ದಾಟಿದಾಗ ಅದೇನು ಲೋಕ ಗೆದ್ದ ಖುಷಿ ನಿನಗೆ!!
ನನಗಂತೂ ಅಂದು ಒಬ್ಬಟ್ಟು, ಪಾಯ್ಸ ತಿಂದದ್ದು ದ್ವಿಗುಣ ಸಂತೋಷಕ್ಕೆ ಕಾರಣದ ದಿನ. 
ಚಿನ್ನ, ಪುಟ್ಟ, ರಾಜ, ಬಂಗಾರ. ಇನ್ನೆಷ್ಟು ಹೆಸರುಗಳು, ತಮ್ತಮಗೆ ತೋಚಿದ್ದೇ ಇಟ್ಟದ್ದು. 
ಅಂದೊಮ್ಮೆ ನೀ ಕುರ್ಚಿ ಹಿಡಿದು ನಿಂತಿದ್ದೆ 
ನಾ ಹಿಂದೆಯೇ ಕಾದಿದ್ದೆ, ಬೀಳುವ ಹೊತ್ತಿಗೆ ಹಿಡಿಯಲೆಂದು 
ನೀ ಬಿದ್ದೆ, ನಾ ಹಿಡಿದೆ. ನೀ ಅಲ್ಲೂ ನಕ್ಕೆ, ನಾ ಬೆಚ್ಚಿ ಬಿದ್ದೆ 
ಅಮ್ಮ ಎಂದು ಅಡಿಗಡಿಗೂ ಕರೆದಾಗ ಸಣ್ಣ ಹೊಟ್ಟೆ ಕಿಚ್ಚು 
ಮಾಮಾ ಅನ್ನಬೇಕಿತ್ತು ಮೊದಲು ಎಂದು. 
ಬಾಣಂತದ ಕೊನೆ ದಿನಗಳಲ್ಲಿ ನಿನ್ನ ಆಟ, ಅಬ್ಬಬ್ಬಾ ಪ್ರಳಯಾಂತಕ ನೀನು!!
ಚೆಲ್ಲಾಡಿದ ಆಟಿಕೆಗಳಲ್ಲಿ ಯಾವೂ ಬೇಡದೆ, ಅಡುಗೆ ಮನೆ ಪಾತ್ರೆ-ಪಗಡೆ ಎಲ್ಲವೂ ನಿನ್ನೆದುರೇ. 
ಮನೆ ಹೊರಗೇ ಕಣ್ಣು, ಹಾದವರ ಕರೆಯಲು ಒಂದು ದೊಡ್ಡ ಚೀರು, ಅದೇನು ಜೋರು!!
ಎಷ್ಟೇ ದೊಡ್ಡ ಮನೆಯಾದರೂ ಸಾಲದ ಕುಟೀರ ನಿನ್ನ ಮಾಮನ ಮನೆ. 
ಅಷ್ಟು ಬೇಗ ಬರಬಾರದಿತ್ತು ಆ ದಿನ 
ತುಂಬಿನ ಮನೆಯಲ್ಲಿ ಮೌನವ ತುಂಬಿ ಮಿಕ್ಕೆಲ್ಲವನ್ನೂ ದೋಚಿ 
ಹೊರಡಲು ಸಜಾಗಿದ್ದೆ ನಿನ್ನ ಮನೆಗೆ. "ಇದೂ ನಿನ್ನ ಮನೆಯೇ ಕಣೋ ಇದ್ದು ಬಿಡು"
ಗಂಟಲಲಿ ಸಿಕ್ಕಿಕೊಂಡ ಮಾತ ಹೊರಚೆಲ್ಲಿದ್ದು ಕಣ್ಣು, ಕಂಬನಿಯ ಮೂಲಕ. 
ಶಾಸ್ತ್ರ, ಸಂಪ್ರದಾಯಗಳನ್ನೆಲ್ಲ ಒಲೆಯ ಸೌದೆಯಾಗಿಸಿ 
ಸುಟ್ಟು ಬೂದಿ ಮಾಡುವಷ್ಟು ಕೋಪ
ಜೊತೆಗೆ ಮರುಕ ಪಟ್ಟು ಬಿಕ್ಕುತ್ತಿದ್ದ ಅಮ್ಮಳಿಗೂ 
ದುಃಖ ತೋರಿಕೊಳ್ಳದೆ ಗಂಭೀರವಾಗಿದ್ದ ಅಪ್ಪನಿಗೂ 
ಧೈರ್ಯ ನೀಡುವ ಜವಾಬ್ದಾರಿ 
ನೀನು ಅತ್ತ, ಯಾವುದೋ ಕಾರಣಕ್ಕೆ 
ನಾ ನಿನ್ನ ಬಿಗಿದಪ್ಪಿ ಅತ್ತೆ
"ಆಗಾಗ ಬರುವೆ ಹೋಗಿ ಬಾ ಕಂದ" ಎಂದು. 

                                              -- ರತ್ನಸುತ

1 comment:

  1. "ಆಗಾಗ ಬರುವೆ ಹೋಗಿ ಬಾ ಕಂದ" ಎಂದು ನನ್ನ ನಾದಿನಿಯ ಪಾಪುವಿಗೂ ನಮ್ಮ ಮನೆಯಿಂದ ಕಣ್ತುಂಬಿ ಕಳುಹಿಸಿಕೊಡುತ್ತಿರುತ್ತೇನೆ. ಅವೆಲ್ಲ ನೆನಪಾಯಿತು.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...