Tuesday 18 February 2014

ಹಳೆ ಸಿನಿಮಾ !!

ಒಂದು ಹದಿನೈದು ವರ್ಷಗಳ ಹಿಂದಿನ ಮಾತು
ಹೈ ಸ್ಕೂಲಿಗೆ ಕಾಲಿಟ್ಟದ್ದೇ 
ಚಡ್ಡಿ ಹೋಗಿ ಪ್ಯಾಂಟು ಧರಿಸುವ ಹುಮ್ಮಸ್ಸು,
ಹೆಣ್ಣು ಮಕ್ಕಳಂತೂ ಮಂಡಿ ಕಾಣದಂತೆ 
ಉದ್ದುದ್ದ ಲಂಗದ ಮೊರೆ ಹೋಗಿದ್ದರು. 
ಮೊದಲೆಲ್ಲ ಒಟ್ಟಿಗೆ ಆಟವಾಡಿಸುತ್ತಿದ್ದ ಪಿ.ಟಿ ಮೇಷ್ಟ್ರು 
ಅಂದಿನಿಂದ ನಮಗೇ ಬೇರೆ, ಹೆಣ್ಣು ಮಕ್ಕಳಿಗೇ ಬೇರೆ.
ಎಂಟನೆ ಕಕ್ಷೆಯ ಬೆಂಚುಗಳು ಎರಡು ಸಾಲು; 
ಒಂದು ನಮಗೆ, ಮತ್ತೊಂದು ಅವರಿಗೆ
ಕಾದ ಬಿಸಿಯನ್ನೇ ಕಾಯಿಸಿಕೊಂಡು 
"ಹೀಗೇಕೆ ಮಾಡಿದಿರಿ ಮಿಸ್?!!" ಅನ್ನುವ ಥರದಲ್ಲಿ 
ದಿಕ್ಕೆಟ್ಟ ಹೆಣಗಳಂತೆ ಕಾಣುತ್ತಿದ್ದವು ಪಾಪ!!
ನೋಟ್ಸ್ ಕಾಪಿ ಕೇಳಿದರೂ ಮುಖದ ತುಂಬ
ಚಿಂತೆಯ ಗೆರೆಗಳ ಹೊತ್ತು ಮಾತನಾಡಿಸುತ್ತಿದ್ದ ಹೆಣ್ಗೆಳೆಯರು 
ಒಂದಿಷ್ಟು ರೂಪವತಿಯರಾಗಿದ್ದರೆ; ಕಥೆ ಅಷ್ಟೇ!! 
ಲವ್ವು-ಪವ್ವು ಪುಕಾರು, ಗೆಳೆಯರ ಗೇಲಿ 
ಹಿಂದೆಯೇ ರಾತ್ರಿಗಳ ವಿಚಿತ್ರ ಕನಸುಗಳು, 
ಎಲ್ಲೆಲ್ಲೋ ಏನೇನೋ ಬದಲಾವಣೆ,
ಬದಲಾವಣೆಗಳು ಸೃಷ್ಟಿಸಿದ ಅವಾಂತರಗಳು,
"ಈ ವಯಸ್ಸಲಿ ಇವೆಲ್ಲವೂ ಸಹಜ" ಎಂದು 
ಸಮಾಧಾನ ಪಡಿಸಿದ ಮತ್ತದೇ ಗೆಳೆಯರು. 
ಮೊದಲೆಲ್ಲ ಜೊತೆಯಲ್ಲೇ ಶಾಲೆಗೆ ಹೋಗಿ ಬಂದು 
ನಾ ಕಚ್ಚಿ ತುಂಡು ಮಾಡಿ ಕೊಟ್ಟ ಸೀಬೆಕಾಯಿ ತಿಂದು 
ಥ್ಯಾಂಕ್ಸ್ ಹೇಳಿ ನಕ್ಕು ಮಾತನಾಡಿಸುತ್ತಿದ್ದ ಪಕ್ಕದ ಮನೆಯ ಸಹಪಾಠಿ
ತಿಂಗಳು ರಜೆ ಹಾಕಿ ಸ್ಕೂಲಿಗೆ ಬಂದವಳೇ 
ದಿಢೀರ್ ಬದಲಾಗಿ ಬಿಟ್ಟಿದ್ದಳು,
ಆಗಲೇ ತಂತಮ್ಮ ತಿಂಗಳು ರಜೆ ಮುಗಿಸಿ ಬಂದಿದ್ದ 
ತಲೆ ಕೆಟ್ಟ ಬಾಲೆಯರೊಡನೆ ಸೇರಿ. 
ನಾವು, ಹುಡುಗರು ಒಂದು ದಿನ ಹುಷಾರು ತಪ್ಪಿ ರಜೆ ಹಾಕಿರೂ 
ನೂರು ಕಿರಿಕಿರಿ ಪ್ರಶ್ನೆ ಕೇಳುತ್ತಿದ್ದ ಮೇಡಮ್ಮು 
ಪಕ್ಕದ ಮನೆಯವಳನ್ನ ಒಂದೂ ಪ್ರಶ್ನೆ ಕೇಳದಿದ್ದಕ್ಕೆ 
ಕೋಪ ಬಂದಿದ್ದು ನಮ್ಮ ಇಡಿ ಹುಡುಗರ ಪಾಳೆಯಕ್ಕೆ. 
ಅಂದಿನಿಂದ ಮಾತು ಬಿಟ್ಟೆವು, ಆದರೆ ಚಟಗಳನ್ನಂತೂ ಬಿಡಲಾಗಲಿಲ್ಲ. 
ಅಂದು ಮಾತು ಬಿಡಿಸಿಕೊಂಡ ಹುಡುಗಿಯರು 
ಇಂದು ಎಲ್ಲಾದರೂ ಎದುರು ಸಿಕ್ಕರೆ 
ನಗುತ್ತ ಮಾತನಾಡಿಸುತ್ತಾರೆ. 
ನಾನೂ ಮಾತನಾಡಿಸುತ್ತೇನೆ 
ನಕ್ಕು ಇನ್ಯಾವುದೋ ವಿಷಯಕ್ಕೆ 
ಅವರು ನಕ್ಕಿದ್ದು ಅದೇ ವಿಷಯಕ್ಕೇ ಇರಬೇಕೆಂದು 
ಖಚಿತ ಊಹೆಗೈದು. 
 
                                                     -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...