Tuesday 4 February 2014

ಅವಳ ಗುಂಗಲ್ಲಿ

ಅವಳು ನೂರು ಪ್ರಶ್ನೆಗಳಿಗೆ
ಪ್ರಶ್ನಾತೀತ ಉತ್ತರ 
ಅರ್ಥ ಆಗುತಾಳೆ ಥೇಟು 
ಆಲ್ಜೀಬ್ರಾ ಥರ 

ಅವಳು ಮತ್ತು ಅವಳ ಮಾತು 
ಅದ್ಭುತಕ್ಕೆ ಹೋಲಿಕೆ 
ಪ್ರೀತಿ ತೋರೋ ವಿಷಯದಲ್ಲಿ 
ಒಂದು ಚಂದ ಪೀಠಿಕೆ 

ಅವಳ ಒಂದು ಕಣ್ಣ ಹನಿಗೆ 
ಪ್ರಳಯವಾಗಿಸೋ ಕಲೆ 
ತೀರ್ಪು ನೀಡುತಾಳೆ ಆಕೆ 
ಇನ್ನೂ ಯೋಚಿಸುತ್ತಲೇ 

ಅವಳ ಮೌನ ಸೂಚಕಕ್ಕೆ
ನಾನು ಬಸವನಾದೆನು 
ಖುಷಿಯ ಮೇರು ಶಿಖರವನ್ನು 
ಇನ್ನೂ ಏರುತಿರುವೇನು 

ಅವಳ ಮುಂದೆ ಸುಳ್ಳು ಒಂದು 
ಮೂಗು ಮುರಿದ ಕೆತ್ತನೆ 
ಹಿಡಿಯುತಾಳೆ ನನ್ನ ಅಸಲಿ 
ಮಾತನು ಗಬಕ್ಕನೆ 

ಅವಳ ಜೊತೆಗೆ ವಾದದಲ್ಲಿ 
ಸೋತ ದಿನವೇ ಸುಂದರ 
ಗೆಲುವು ಪಡೆದರೇನು ಬಂತು 
ಇರುಳುಗಳೇ ಭೀಕರ 

ಅವಳ ಮೈಯ್ಯ ಸುತ್ತುವರೆದ 
ಬಳ್ಳಿ ನಾನು ಕಂಡಿರಾ?
ನಾನು ಬೇರೆ, ಆಕೆ ಬೇರೆ 
ಬೇರು ಒಂದೇ ಬಲ್ಲಿರಾ?

ಅವಳ ಕುರಿತು ಬರೆದುಕೊಂಡ 
ದಿನಗಳೆಲ್ಲ ಹುಣ್ಣಿಮೆ 
ಅಕ್ಷರಕ್ಕೆ ಎಡೆಯ ಮಾಡಿ ಕೊಟ್ಟ 
ಹಾಳೆ ರೇಶಿಮೆ 

ಅವಳು ನನ್ನ ಬಾಳಿನರ್ಥ 
ನನ್ನ ನಾಳೆ ಕನ್ನಡಿ 
ಬಿಡಿಸಿ ಹೇಳುತಾಳೆ ನಿತ್ಯ 
ಅರ್ಥಬರಿತ ನಾಣ್ನುಡಿ 

                    -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...